ಶುಕ್ರವಾರ, ಜೂನ್ 18, 2021
21 °C
ನಾವು ಭಾರತೀಯರು– ಭಾರತ ಉಳಿಸಿ ಆಂದೋಲನ

ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ನಾವು ಭಾರತೀಯರು–ಭಾರತ ಉಳಿಸಿ’ ಆಂದೋಲನದ ಭಾಗವಾಗಿ ಜಿಲ್ಲೆಯ ವಿವಿಧ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. 

ಪಿಯುಸಿಎಲ್, ಎಸ್‌ಡಿಪಿಐ, ದಲಿತ ಸಂಘಟನೆಗಳು, ಸಿಐಟಿಯು ಹಾಗೂ ಇನ್ನಿತರ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕ್ವಿಟ್‌ ಇಂಡಿಯಾ ಚಳವಳಿಯ ನೆನಪಿನಲ್ಲಿ ‍ಪ್ರತಿಭಟನೆ ಆಯೋಜಿಸಲಾಗಿತ್ತು. 

ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡ ಪ್ರತಿಭಟನಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

‘ರೈಲ್ವೆ, ಜೀವ ವಿಮಾ ನಿಗಮ ಮತ್ತು ಬೆಮೆಲ್‌ನಂತಹ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿಕರಣ ಮಾಡುವ ಪ್ರಸ್ತಾವ ಬಿಡಬೇಕು. ಕೋವಿಡ್‌ ಕಾಲದಲ್ಲಿ ಜಾರಿಗೆ ತರುತ್ತಿರುವ ಕಾನೂನುಗಳು, ತಿದ್ದುಪಡಿ ಕಾಯ್ದೆಗಳು ಹಾಗೂ ಸುಗ್ರೀವಾಜ್ಞೆಗಳನ್ನು ಕೈಬಬಿಡಬೇಕು’ ಎಂದು ಒತ್ತಾಯಿಸಿದರು. 

ಎರಡು ವರ್ಷಗಳಿಂದ ಮಾನವ ಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಮತ್ತು ಚಿಂತಕರನ್ನು ಮಾವೋವಾದಿಗಳು ಮತ್ತು ‌ನಕ್ಸಲ್ ಬೆಂಬಲಿಗರು ಎಂಬ ಹಣೆ ಪಟ್ಟಿ ಹಚ್ಚಿ ಜೈಲಿಗೆ ದೂಡಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನನಿರತರು, ಸರ್ಕಾರಿ ಅವರಿಗೆ ಜಾಮೀನು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. 

‘ಸಕಲರಿಗೂ ಸಮಾನ ವೈದ್ಯಕೀಯ ನೆರವು ಒದಗಿಸಬೇಕು. ಬಳಸದೆ ಇರುವ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳನ್ನು ಆಸ್ಪತ್ರೆಗಳನ್ನಾಗಿ ಬದಲಾಯಿಸಬೇಕು. ಸರ್ಕಾರ ನಿಗದಿ ಮಾಡಿರುವ ದರಕ್ಕೆ ಚಿಕಿತ್ಸೆ ನೀಡಲಾಗದ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ಸರ್ಕಾರವೇ ನಡೆಸಬೇಕು’ ಎಂದು ಒತ್ತಾಯಿಸಿದರು.  

‘ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದು, ಉದ್ಯೋಗ ಸೃಷ್ಟಿಗೆ ವಿಶೇಷ ಯೋಜನೆ ರೂಪಿಸುವುದು, ಇಡೀ ಕೃಷಿ ಕ್ಷೇತ್ರದ ಸಂಪೂರ್ಣ ಸಾಲಮನ್ನಾ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಅರ್ಧಕ್ಕೆ ಇಳಿಸಬೇಕು. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು’ ಎಂದು ಆಗ್ರಹಿಸಿದರು. 

ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮತ್ತು ನಿರ್ದಿಷ್ಟ ಸಮುದಾಯಗಳನ್ನು ಗುರಿ ಮಾಡಿ ಸುಳ್ಳು ಪ್ರಚಾರ ಮಾಡುವ ಎಲ್ಲರನ್ನೂ ನಿಯಂತ್ರಣದಲ್ಲಿಡಲು ಕ್ರಮ ವಹಿಸಿ, ಈಗಾಗಲೇ ಸರ್ಕಾರದ ಹಸ್ತಕ್ಷೇಪದಿಂದ ಅರೆ ಜೀವವಾಗಿರುವ ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತತೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧದ ಮನವಿ ಪತ್ರವನ್ನು ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪಿಯುಸಿಎಲ್ ರಾಜ್ಯ ಕಾರ್ಯದರ್ಶಿ ಕೆ.ವೆಂಕಟರಾಜು, ಡಿಎಸ್‌ಎಸ್ ಮುಖಂಡ ಕಂದಹಳ್ಳಿ ನಾರಾಯಣ, ರಾಜ್ಯ ಸಂಘಟನಾ ಸಂಯೋಜಕ ಕೆ.ಎಂ.ನಾಗರಾಜು, ಪಿಎಫ್‌ಐ ಜಿಲ್ಲಾಧ್ಯಕ್ಷ ಕಫೀಲ್ ಅಹಮದ್, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ ಖಾನ್, ಕದಂಬ ಸೈನ್ಯದ ಅಂಬರೀಷ್‌, ಬಿಎಸ್‌ಪಿ ಮುಖಂಡರಾದ ಬ್ಯಾಡಮೂಡ್ಲು ಬಸವಣ್ಣ, ಜನಹಿತಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ್, ಸುಜಾತ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.