ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ಕ್ರಿಮಿನಲ್‌ ಕಾನೂನು: ಪೊಲೀಸರಿಗೆ ತರಬೇತಿ

ಜುಲೈ 1ರಿಂದ ಅನುಷ್ಠಾನಕ್ಕೆ ಸಿದ್ಧತೆ, 400 ಸಿಬ್ಬಂದಿಗೆ ತರಬೇತಿ ಪೂರ್ಣ
Published 25 ಮೇ 2024, 7:54 IST
Last Updated 25 ಮೇ 2024, 7:54 IST
ಅಕ್ಷರ ಗಾತ್ರ

ಚಾಮರಾಜನಗರ: ಜುಲೈ 1ರಿಂದ ಜಾರಿಗೆ ಬರಲಿರುವ ಹೊಸ ಮೂರು ಕ್ರಿಮಿನಲ್‌ ಕಾನೂನುಗಳ ಅನುಷ್ಠಾನದ ಬಗ್ಗೆ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್‌ ಇಲಾಖೆ ತರಬೇತಿ ನೀಡುತ್ತಿದೆ. 

ಬ್ರಿಟಿಷರ ಕಾಲದಲ್ಲಿ ಜಾರಿಗೆ ಬಂದಿದ್ದ ಅಪರಾಧ ಕಾನೂನುಗಳಿಗೆ ಬದಲಾಗಿ ಕೇಂದ್ರ ಸರ್ಕಾರ ಹೊಸ ಕಾನೂನುಗಳನ್ನು ರೂಪಿಸಿದ್ದು, ಜುಲೈ 1ರಿಂದ ದೇಶದಾದ್ಯಂತ ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ. 

ಈಗ ಜಾರಿಯಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ) ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಸಾಕ್ಷ್ಯ ಕಾಯ್ದೆಯ ಜಾಗದಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ. 

ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಹೊಸ ಕಾನೂನುಗಳ ಅನುಷ್ಠಾನಕ್ಕೆ ಸಿದ್ಧತೆ ನಡೆಯುತ್ತಿದೆ. ಜಿಲ್ಲಾ ಪೊಲೀಸ್‌ ಇಲಾಖೆಯೂ ಸಜ್ಜುಗೊಂಡಿದೆ. 

ನಿರಂತರ ತರಬೇತಿ: ರಾಜ್ಯದಲ್ಲಿ ಸಿಐಡಿಯ ತರಬೇತಿ ಘಟಕ, ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್‌ ಅಕಾಡೆಮಿ, ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಗಳು (ಬಿಪಿಆರ್‌ಎನ್‌ಡಿ) ಪೊಲೀಸ್‌ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಹೊಸ ಕಾನೂನುಗಳ ಬಗ್ಗೆ ತರಬೇತಿ ನೀಡುವುದರಲ್ಲಿ ನಿರತವಾಗಿವೆ. 

ಜಿಲ್ಲೆಯಿಂದ ಇಬ್ಬರು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಮೈಸೂರಿನ ಪೊಲೀಸ್‌ ಅಕಾಡೆಮಿಗೆ ಹಾಜರಾಗಿ ಮೂರು ಕಾನೂನುಗಳ ಬಗ್ಗೆ ತರಬೇತಿ ಪಡೆದು ಬಂದಿದ್ದಾರೆ. ಅವರು ಜಿಲ್ಲೆಯ ಇತರ ಅಧಿಕಾರಿಗಳು ‌ಮತ್ತು ಸಿಬ್ಬಂದಿಗೆ ಮಾಹಿತಿ ನೀಡುತ್ತಿದ್ದಾರೆ. 

ಇದಲ್ಲದೇ ಇತ್ತೀಚೆಗೆ ಜಿಲ್ಲಾ ಪೊಲೀಸ್‌ ಇಲಾಖೆ ಅಧಿಕಾರಿಗಳು ಮತ್ತು ತಜ್ಞರಿಂದ ಕಾನೂನು ಅನುಷ್ಠಾನದ ಬಗ್ಗೆ ತರಬೇತಿ ಕಾರ್ಯಾಗಾರವನ್ನು ನಡೆಸಲಾಗಿದೆ. 

‘ಹೊಸ ಕಾನೂನುಗಳ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸುವುದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಮ್ಮಲ್ಲಿರುವ 850 ಸಿವಿಲ್‌ ಸಿಬ್ಬಂದಿ ಪೈಕಿ 400 ಮಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು, ಪಬ್ಲಿಕ್‌ ಪ್ರಾಸಿಕ್ಯೂಟರ್‌, ವಕೀಲರನ್ನು ಕರೆಸಿ ಕಾನೂನುಗಳ ಬಗ್ಗೆ ವಿವರಿಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹೊಸ ಕಾನೂನುಗಳಲ್ಲಿ ಹಿಂದಿನ ಕಾನೂನುಗಳಲ್ಲಿರುವ ಅಂಶಗಳೂ ಇವೆ. ಸರ್ಕಾರದ ವಿರುದ್ಧದ ಅಪರಾಧಗಳು ಎಂಬ ಹೊಸ ಸೆಕ್ಷನ್‌ ಸೇರಿಸಲಾಗಿದೆ. ಐಟಿ ಕಾಯ್ದೆ ಸೇರಿದಂತೆ ಇನ್ನೂ ಕೆಲವು ಅಪರಾಧಗಳಿಗೆ ಸಂಬಂಧಿಸಿದಂತೆ ಹೆಚ್ಚು ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ’ ಎಂದು ಅವರು ವಿವರಿಸಿದರು. 

‘ಸಿವಿಲ್‌ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈಗ ಆದ್ಯತೆ ಮೇರೆಗೆ ತರಬೇತಿ ನೀಡಲಾಗುತ್ತಿದ್ದು, ಸಶಸ್ತ್ರ ಮೀಸಲು ಪೊಲೀಸ್‌ ಸಿಬ್ಬಂದಿಗೆ ನಂತರ ತರಬೇತಿ ನೀಡಲಾಗುವುದು’ ಎಂದು ಹೇಳಿದರು. 

ಹೊಸ ಕ್ರಿಮಿನಲ್‌ ಕಾನೂನುಗಳ ಬಗ್ಗೆ ಶನಿವಾರ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತೊಂದು ಸುತ್ತಿನ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
–ಪದ್ಮಿನಿ ಸಾಹು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT