ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಡಿ ಜಿಲ್ಲೆ ಕೋವಿಡ್‌ ಮುಕ್ತದತ್ತ?

ಸತತ ನಾಲ್ಕನೇ ದಿನವೂ ಕೋವಿಡ್‌ ಪ್ರಕರಣ ಶೂನ್ಯ, ಆಸ್ಪತ್ರೆಯಲ್ಲಿ ಸೋಂಕಿತರಿಲ್ಲ
Last Updated 3 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಕೋವಿಡ್‌ ಪ್ರಕರಣ ವರದಿಯಾಗಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಕಡಿಮೆಯಾಗುತ್ತಿದ್ದು, ಐದಕ್ಕೆ ಬಂದು ನಿಂತಿದೆ.

ಎರಡನೇ ಅಲೆ ಜಿಲ್ಲೆಯಲ್ಲಿ ಅಬ್ಬರಿಸಿದ ಬಳಿಕ ಕೋವಿಡ್‌ ಪ್ರಕರಣ ಇಷ್ಟೊಂದು ಪ್ರಮಾಣದಲ್ಲಿ ಇಳಿಮುಖವಾಗಿದ್ದು ಇದೇ ಮೊದಲು. ಇದೇ ಪರಿಸ್ಥಿತಿ ಮುಂದುವರೆದರೆ ಜಿಲ್ಲೆ ಶೀಘ್ರವಾಗಿ ಕೋವಿಡ್‌ ಮುಕ್ತವಾಗಲಿದೆ ಎಂಬ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದೆ.

ಆದರೆ, ಈಗಲೇ ಅದನ್ನು ಹೇಳಲಾಗದು. ನೆರೆಯ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕೆಲವು ದಿನಗಳಿಂದ ಕೋವಿಡ್‌ ಪ್ರಕರಣ ಹೆಚ್ಚುತ್ತಿದ್ದು, ಜಿಲ್ಲೆಯಲ್ಲೂ ಪ್ರಕರಣ ಹೆಚ್ಚಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಕೆಲವು ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋವಿಡ್‌ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ. ಬುಧವಾರ 820 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದೆ. ಯಾವುದೇ ಪ್ರಕರಣ ವರದಿಯಾಗಿಲ್ಲ. ಮಂಗಳವಾರ 549 ಮಂದಿಯ ಪರೀಕ್ಷಾ ವರದಿ ಬಂದಿತ್ತು. ಸೋಮವಾರ 942 ಮಂದಿಯ ಪರೀಕ್ಷಾ ವರದಿ ಬಂದಿತ್ತು. ಭಾನುವಾರ 1,138 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿತ್ತು. ಹಾಗಿದ್ದರೂ, ಪ್ರಕರಣ ವರದಿಯಾಗಿಲ್ಲ.

ಮೂರು ದಿನಗಳಿಂದ ಜಿಲ್ಲೆಯಲ್ಲಿರುವ ಸೋಂಕಿತರ ಸಂಖ್ಯೆ ಒಂದಂಕಿಯಲ್ಲಿದೆ. ಬುಧವಾರದ ಜಿಲ್ಲಾಡಳಿತದ ವರದಿ ಪ್ರಕಾರ ಜಿಲ್ಲೆಯಲ್ಲಿ ಸದ್ಯ ಐವರು ಮಾತ್ರ ಸೋಂಕಿತರು ಇದ್ದಾರೆ. ಐವರೂ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಹಾಗಾಗಿ, ಕೋವಿಡ್‌ ಆಸ್ಪತ್ರೆಯಲ್ಲಿ ಯಾವ ರೋಗಿಗಳೂ ಇಲ್ಲ.

ಜಿಲ್ಲೆಯಲ್ಲಿ ಈವರೆಗೆ 32,560 ಕೋವಿಡ್‌ ಪ್ರಕರಣ ದೃಢಪಟ್ಟಿವೆ.32,016 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ ಸೋಂಕಿತರು ಹಾಗೂ ಸೋಂಕಿತರಾಗಿದ್ದುಕೊಂಡು ಬೇರೆ ಕಾರಣಗಳಿಂದ ಮೃತಪಟ್ಟವರು ಸೇರಿದಂತೆ 580 ಮಂದಿ ಕೊನೆಯುಸಿರೆಳೆದಿದ್ದಾರೆ.

‘ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿರುವುದು ನಿಜ. ಅಂದ ಮಾತ್ರಕ್ಕೆ ಶೀಘ್ರದಲ್ಲಿ ಕೋವಿಡ್‌ ಮುಕ್ತ ಎಂದು ಹೇಳುವುದಕ್ಕೆ ಆಗುವುದಿಲ್ಲ. ರಾಜ್ಯದಲ್ಲಿ ಪ್ರಕರಣ ಹೆಚ್ಚುತ್ತಿವೆ. ನಮ್ಮ ಜಿಲ್ಲೆಯಲ್ಲೂ ಹೆಚ್ಚಾಗಬೇಕು ಎಂದೇನಿಲ್ಲ. ಆದರೆ. ನಾವು ಎಚ್ಚರಿಕೆಯಿಂದ ಇರಬೇಕು. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಜಿಲ್ಲಾಸ್ಪತ್ರೆ ಸರ್ಜನ್‌ ಡಾ.ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು.

9.79 ಲಕ್ಷ ಕೋಡ್‌ ಲಸಿಕೆ

ಜಿಲ್ಲೆಯಲ್ಲಿ ಈವರೆಗೆ 9,79,275 ಡೋಸ್‌ಗಳಷ್ಟು ಕೋವಿಡ್‌ ಲಸಿಕೆ ಹಾಕಲಾಗಿದೆ.

6,23,626 ಮಂದಿ ಮೊದಲ ಡೋಸ್‌ ಪಡೆದಿದ್ದರೆ, 3,55,649 ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

ಮೊದಲ ಡೋಸ್‌ ಪಡೆದಿರುವವರಲ್ಲಿ ಬಹುತೇಕರು ಎರಡನೇ ಡೋಸ್‌ ಪಡೆಯುವ ಸಮಯವಾಗಿದ್ದು, ಜನರು ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳಲು ಬರುತ್ತಿಲ್ಲ ಎಂದು ಹೇಳುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

‘ಕೋವಿಡ್‌ ಪ್ರಕರಣಗಳು ಜಿಲ್ಲೆಯಲ್ಲಿ ಗಣನೀಯವಾಗಿ ತಗ್ಗಿವೆ. ಕೋವಿಡ್‌ ಆಸ್ಪತ್ರೆಯಲ್ಲಿ ಯಾರೂ ಚಿಕಿತ್ಸೆ ಪಡೆಯುತ್ತಿಲ್ಲ. ಅಂದ ಮಾತ್ರಕ್ಕೆ ಜಿಲ್ಲೆ ಕೋವಿಡ್‌ ಮುಕ್ತ ಎಂದಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಕೆಲವು ಜಿಲ್ಲೆಗಳಲ್ಲಿ ಪ್ರಕರಣ ಹೆಚ್ಚುತ್ತಿವೆ. ಹಾಗಾಗಿ ಜನರು ಮೈಮರೆಯಬಾರದು. ಕೋವಿಡ್‌ ನಿಯಮಗಳ ಪಾಲನೆ ಜವಾಬ್ದಾರಿಯಾಗಿರಬೇಕು’ ಎಂದು ಜಿಲ್ಲಾಸ್ಪತ್ರೆಯ ಕೋವಿಡ್‌ ನೋಡೆಲ್‌ ಅಧಿಕಾರಿ ಡಾ.ಎಂ.ಮಹೇಶ್‌ ತಿಳಿಸಿದರು.

----

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಲಸಿಕೆ ಪ್ರಮುಖ ಪಾತ್ರ ವಹಿಸುತ್ತಿದೆ. ಹಾಗಾಗಿ, ಜಿಲ್ಲೆಯ ಜನರು ಲಸಿಕೆ ಹಾಕಿಸಿಕೊಳ್ಳಬೇಕು
ಡಾ.ಶ್ರೀನಿವಾಸ, ಜಿಲ್ಲಾ ಸರ್ಜನ್‌

---

ಜಿಲ್ಲೆಯಲ್ಲಿ ಮೊದಲ ಡೋಸ್‌ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಂಡಿದ್ದಾರೆ. ಎರಡನೇ ಡೋಸ್‌ ಪಡೆದುಕೊಳ್ಳಲು ಮುಂದೆ ಬರಬೇಕು
ಡಾ.ಎಂ.ಮಹೇಶ್‌, ಕೋವಿಡ್‌ ನೋಡೆಲ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT