ಗುರುವಾರ , ಫೆಬ್ರವರಿ 20, 2020
20 °C
ಟ್ರಸ್ಟಿಗಳ ನಡುವೆ ಕಚ್ಚಾಟ, ದೇವಸ್ಥಾನದ ನಿಯಂತ್ರಣಕ್ಕಾಗಿ ದುಷ್ಕೃತ್ಯ ಎಸಗಿದ್ದ ಆರೋಪಿಗಳು

ವಿಷ ಪ್ರಸಾದ ದುರಂತ: ಸುಳ್ವಾಡಿ ಮಾರಮ್ಮಗೆ ವರ್ಷದಿಂದ ಪೂಜೆ ಇಲ್ಲ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ದುರಂತ ಸಂಭವಿಸಿದ ಬಳಿಕ, ಒಂದು ವರ್ಷದಿಂದ ಮಾರಮ್ಮನಿಗೆ ‌ಪೂಜೆ ಪುನಸ್ಕಾರಗಳು ನಡೆಯುತ್ತಿಲ್ಲ. 

ಘಟನೆ ನಡೆದ ದಿನವೇ ಜಿಲ್ಲಾಡಳಿತ ದೇವಾಲಯವನ್ನು ವಶಕ್ಕೆ ಪಡೆದುಕೊಂಡಿತ್ತು. ಬಾಗಿಲಿಗೆ ಬೀಗ ಜಡಿದು ಜಪ್ತಿ ಮಾಡಲಾಗಿದೆ. ಕೆಲವು ತಿಂಗಳ ಹಿಂದೆ ದೇವಾಲಯವು ಮುಜರಾಯಿ ಇಲಾಖೆಗೆ ಹಸ್ತಾಂತರಗೊಂಡಿದ್ದು, ಹಾಗಿದ್ದರೂ ಪೂಜೆ ಇನ್ನೂ ಆರಂಭಗೊಂಡಿಲ್ಲ.   

ಕೈ ಮುಗಿದು ತೆರಳುವ ಭಕ್ತರು: ಸ್ಥಳೀಯ ಕೆಲವು ಭಕ್ತರು ದೇವಸ್ಥಾನದ ಆವರಣವನ್ನು ದಿನವೂ ಗುಡಿಸಿ, ಸ್ವಚ್ಛಗೊಳಿಸಿ ರಂಗೋಲಿ ಹಾಕುತ್ತಾರೆ. 

ತಮಿಳುನಾಡು ಹಾಗೂ ಹೊರ ಜಿಲ್ಲೆಗಳಿಂದಲೂ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರ ಸಂಖ್ಯೆ ಈಗ ಕಡಿಮೆಯಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ಹೊರಗಡೆಯಿಂದಲೇ ಕೈ ಮುಗಿದು, ದೀಪ, ಗಂಧದ ಕಡ್ಡಿ ಹಚ್ಚಿ ನಮಸ್ಕರಿಸುತ್ತಾರೆ. 

ಭದ್ರತೆಗೆ ಇಬ್ಬರು: ಘಟನೆ ನಡೆದ ನಂತರ ಹಗಲು ರಾತ್ರಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ದೇವಸ್ಥಾನದಲ್ಲಿ ನಿಯೋಜಿಸಲಾಗಿದೆ. ಪಾಳಿ ಆಧಾರದಲ್ಲಿ ಪೊಲೀಸರು ಇಲ್ಲವೇ ಗೃಹ ರಕ್ಷಕ ದಳದ ಇಬ್ಬರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪೂಜೆ ಆರಂಭಿಸಲು ಆಗ್ರಹ: ಸ್ಥಳೀಯ ಕೆಲವು ಭಕ್ತರು ದೇವಾಲಯದಲ್ಲಿ ಮತ್ತೆ ಪೂಜೆ ಆರಂಭಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಸುಳ್ವಾಡಿಗೆ ಭೇಟಿ ನೀಡಿದ್ದಾಗ, ಗ್ರಾಮಸ್ಥರು, ಅದರಲ್ಲೂ ಮಹಿಳೆಯರು ಕಣ್ಣೀರುಡುತ್ತಾ ಮತ್ತೆ ಪೂಜೆ ಆರಂಭಿಸಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದರು. ಶೀಘ್ರವಾಗಿ ಅರ್ಚಕರನ್ನು ನೇಮಿಸುವ ಭರವಸೆಯನ್ನು ಸಚಿವರು ನೀಡಿದ್ದರು. 

ಘಟನೆಯ ಹಿನ್ನೆಲೆ: ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಮಾರಮ್ಮನ ದೇವಾಲಯವನ್ನು ಮಹದೇಶ್ವರ ಬೆಟ್ಟದ ಕಿರಿಯ ಪೀಠಾಧಿಪತಿಯಾಗಿದ್ದ ಇಮ್ಮಡಿ ಮಹದೇವಸ್ವಾಮಿ ನೇತೃತ್ವದ 9 ಮಂದಿ ಸದಸ್ಯರನ್ನೊಳಗೊಂಡ ಟ್ರಸ್ಟ್‌ ನಿರ್ವಹಿಸುತ್ತಿತ್ತು. 

ವರ್ಷದಿಂದ ವರ್ಷಕ್ಕೆ ಉತ್ತಮ ಆದಾಯ ಬರುತ್ತಿದ್ದ ದೇವಸ್ಥಾನದ ಆಡಳಿತದ ವಿಚಾರವಾಗಿ ಟ್ರಸ್ಟಿಗಳ ನಡುವೆ ಆಂತರಿಕ ಕಚ್ಚಾಟ ನಡೆಯುತ್ತಿತ್ತು. ಒಂದು ಬಣ, ಕಡಿಮೆ ವೆಚ್ಚದಲ್ಲಿ ದೇವಸ್ಥಾನಕ್ಕೆ ಗೋಪುರ ನಿರ್ಮಿಸಲು ಬಯಸಿತ್ತು. ದೇವಸ್ಥಾನದ ಆದಾಯದ ಮೇಲೆ ಕಣ್ಣಿಟ್ಟಿದ್ದ ಇಮ್ಮಡಿ‌ ಮಹದೇವಸ್ವಾಮಿ, ಮಾದೇಶ ಮತ್ತು ಅಂಬಿಕಾ ಅವರಿಗೆ ಇದು ಇಷ್ಟ ಇರಲಿಲ್ಲ.

2018ರ ಡಿಸೆಂಬರ್‌ 14ರಂದು ಗೋಪುರಕ್ಕೆ ಭೂಮಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಲೂರು ಮಠದ ಪೀಠಾಧ್ಯಕ್ಷ ಗುರುಸ್ವಾಮಿ ಅವರು ಕಾರ್ಯಕ್ರಮಕ್ಕೆ ಬಂದಿದ್ದರು. ಇಮ್ಮಡಿ ಮಹದೇವಸ್ವಾಮಿ ಬಂದಿರಲಿಲ್ಲ. 

ಕಾರ್ಯಕ್ರಮದ ಬಳಿಕ ದೇವಾಲಯಕ್ಕೆ ಬಂದ ಭಕ್ತರಿಗೆ ತರಕಾರಿ ಬಾತ್‌ ಅನ್ನು ಪ್ರಸಾದವಾಗಿ ವಿತರಿಸಲಾಗಿತ್ತು. ಸುತ್ತಮುತ್ತಲಿನ ಊರುಗಳಿಂದ ಬಂದಿದ್ದ 130ಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿ ತೀವ್ರವಾಗಿ ಅಸ್ವಸ್ಥರಾದರು. ಮೂರ್ನಾಲ್ಕು ಮಂದಿ ದಾರಿ ಮಧ್ಯೆ ಪ್ರಾಣಕಳೆದುಕೊಂಡರೆ ಉಳಿದವರು ಆಸ್ಪತ್ರೆಗಳಲ್ಲಿ ಮೃತಪಟ್ಟರು. ಒಟ್ಟಾರೆ 17 ಜನರು ಮೃತಪಟ್ಟಿದ್ದರು. 

ಜಿಲ್ಲಾಡಳಿತ ಎಲ್ಲ ಅಸ್ವಸ್ಥರಿಗೂ ಮೈಸೂರಿನ ಖಾಸಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿತ್ತು. ಆಸ್ಪತ್ರೆ ಬಿಲ್‌ ₹1.23 ಕೋಟಿಯನ್ನು ಸರ್ಕಾರವೇ ಭರಿಸಿತ್ತು. 

ಟ್ರಸ್ಟ್‌ನ ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಮಹದೇವಸ್ವಾಮಿ ಮತ್ತು ತಂಡ ದೊಡ್ಡಯ್ಯನ ಮೂಲಕ ಪ್ರಸಾದಕ್ಕೆ ವಿಷ ಬೆರೆಸಿತ್ತು ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿತ್ತು. 

ತನಿಖೆಗಾಗಿ ವಿಶೇಷ 5 ಪೊಲೀಸ್‌ ತಂಡಗಳನ್ನು ರಚಿಸಲಾಗಿತ್ತು. ಐದು ದಿನಗಳ ಬಳಿಕ ಬಳಿಕ ಪ್ರಕರಣ ಭೇದಿಸಿದ್ದ ಪೊಲೀಸರು, ನಾಲ್ವರನ್ನು ಬಂಧಿಸಿದ್ದರು. ವರ್ಷದಿಂದಲೂ ಅವರು ಜೈಲಿನಲ್ಲಿದ್ದಾರೆ.

ನಿವೇಶನ, ಜಮೀನು ಹಂಚಿಕೆಗೆ ಜಿಲ್ಲಾಡಳಿತ ಕ್ರಮ

ಈ ಮಧ್ಯೆ, ಸಂತ್ರಸ್ತರ ಕುಟುಂಬಗಳಿಗೆ ನಿವೇಶನ ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಎರಡು  ಎಕರೆ ಜಮೀನು ನೀಡುವುದಾಗಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದರು.

ಅದರಂತೆ ಎಲ್ಲ ಸಂತ್ರಸ್ತರ ಕುಟುಂಬವರಿಗೆ ನಿವೇಶನ ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಎರಡು ಎಕರೆ ಜಮೀನು ಹಂಚಿಕೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. 

‘ರಾಜೀವ್‌ ಗಾಂಧಿ ವಸತಿ ನಿಗಮದ ಅಡಿಯಲ್ಲಿ 58 ಸಂತ್ರಸ್ತ ಕುಟುಂಬಗಳಿಗೆ 30x40 ಅಳತೆಯ ನಿವೇಶನ ಹಂಚಿಕೆ ಮಾಡುವುದಕ್ಕಾಗಿ ಬಿದರಹಳ್ಳಿಯ ಸರ್ವೆ ನಂ 40ರಲ್ಲಿ ಎರಡು ಎಕರೆ ಜಾಗ ಗುರುತಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಗ್ರಾಮಸಭೆಯಲ್ಲೇ ನಿವೇಶನ ನೀಡಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಬಿದರಹಳ್ಳಿಯ ಬೋಳುದಿಣ್ಣೆ ಬಳಿ ಎರಡು ಎಕರೆ ಜಾಗವನ್ನು ಗುರುತಿಸಿ ನಿವೇಶನ ಸಿದ್ಧಪಡಿಸಲಾಗಿದ್ದು, ನಕ್ಷೆ ಎಲ್ಲವೂ ತಯಾರಾಗಿದೆ. ಪ್ರಕ್ರಿಯೆ ಶೇ 99ರಷ್ಟು ಪೂರ್ಣಗೊಂಡಿದೆ’ ಎಂದು ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಆಡಳಿತ ತಿಳಿಸಿದೆ. 

‘ಮೃತಪಟ್ಟವರ 11 ಕುಟುಂಬಗಳಿಗೆ ತಲಾ ಎರಡು ಎಕರೆ ಜಮೀನು ನೀಡಲೂ ಭೂಮಿ ಗುರುತಿಸಲಾಗಿದೆ. ಜಮೀನಿನ ಮಾಲೀಕರು ಹೆಚ್ಚು ಹಣ ಕೇಳುತ್ತಿದ್ದಾರೆ. ಈಗಾಗಲೇ ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ‘ವಿಶೇಷ ಪ‍್ರಕರಣ’ ಎಂದು ಪರಿಗಣಿಸಿ ಹೆಚ್ಚು ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದೂ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು