ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕೋ ಎನ್ನುತ್ತಿದೆ ಬಂಡೀಪುರ ಸಫಾರಿ ಕ್ಯಾಂಪ್‌

ಕೇರಳ, ತಮಿಳುನಾಡಿನಿಂದ ಬರುವ ಪ್ರವಾಸಿಗರಲ್ಲಿ ಕೊರತೆ; ವ್ಯಾ‍ಪಾರ ಕುಸಿತ
Last Updated 12 ಮಾರ್ಚ್ 2020, 2:39 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ಕೋವಿಡ್-19’ ಭಯದಿಂದ ಇಲ್ಲಿನ ಬಂಡೀಪುರ ಹುಲಿ ರಕ್ಷಿತಾರಣ್ಯವು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ. ಇಲ್ಲಿನ ರೆಸಾರ್ಟ್‌ಗಳಲ್ಲಿ ಬುಕ್ಕಿಂಗ್ ಕಡಿಮೆಯಾಗಿದೆ.

ಕೇರಳ ಮತ್ತು ತಮಿಳುನಾಡಿನಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಬಿಟ್ಟು ಉಳಿದ ತರಗತಿಗಳ ಪರೀಕ್ಷೆ ಮುಗಿದಿದೆ. ಆದರೆ, ಕೋವಿಡ್–19ರ ಭಯದಿಂದ ಯಾರು ಸಹ ಹೆಚ್ಚು ಜನನಿಬಿಡ ಪ್ರದೇಶಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತಾಲ್ಲೂಕಿನ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸಂಖ್ಯೆ ಇಳಿಮುಖವಾಗಿದೆ. ರಸ್ತೆಯ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಕಲ್ಲಂಗಡಿ, ಎಳನೀರುಗಳನ್ನೂ ಕೇಳುವವರಿಲ್ಲ ಎಂದು ವ್ಯಾಪಾರಿ ಮಹೇಶ್ ತಿಳಿಸಿದರು.

ಸಫಾರಿಗೆ ಬರುವವರ ಸಂಖ್ಯೆಯಲ್ಲಿ ತೀವ್ರ ಇಳಿಕೆ ಆಗಿದೆ. ಆರೋಗ್ಯ ಇಲಾಖೆಯವರು ಸಫಾರಿ ಕ್ಯಾಂಪ್‌ನಲ್ಲಿ ಬೀಡು ಬಿಟ್ಟು ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ನಲ್ಲೂ ಸಹ ಪ್ರವಾಸಿಗರು ಇಲ್ಲ.

‘ಈ ಸಮಯದಲ್ಲಿ ಹೆಚ್ಚಿನ ಪ್ರವಾಸಿಗರು ಇರುವುದಿಲ್ಲ. ಮಾರ್ಚ್ 20ರ ನಂತರ ಹೆಚ್ಚಾಗುತ್ತದೆ. ಕೆಲವರಿಗೆ ಭಯ ಇರುವುದರಿಂದ ಬರದೆ ಇರಬಹುದು’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದರು.

ಕೇರಳ ಮತ್ತು ತಮಿಳುನಾಡಿನ ‌ಭಾಗಗಳಿಗೆ ಸರಬರಾಜಾಗುತ್ತಿದ್ದ ತರಕಾರಿ ಪ್ರಮಾಣದಲ್ಲಿ ಕಡಿಮೆಯಾಗಿ ರೈತರಿಗೆ ಬೆಳೆಗೆ ತಕ್ಕಂತೆ ಬೆಲೆ ಸಿಗುತ್ತಿಲ್ಲ. ವಾರದ ಹಿಂದೆ ಇದ್ದ ಬೆಲೆಗೂ ಈಗಿನ ಬೆಲೆಗೂ ಶೇ 50ರಿಂದ 60ರಷ್ಟು ಇಳಿಕೆಯಾಗಿದೆ. ಟೊಮೆಟೊ ಕೆ.ಜಿ.ಗೆ ₹ 5, ಕೋಸು ₹ 2- 3 ರೂ, ಈರುಳ್ಳಿ ₹ 10 ರಿಂದ 15, ಬೆಂಡೆಕಾಯಿ ₹ 14, ಬದನೆಕಾಯಿ ₹ 3 ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆಗಳೂ ಇಳಿಮುಖವಾಗಿದೆ.

ಕೋವಿಡ್ –19 ಭೀತಿಯಿಂದ ಮಾರಾಟ ವ್ಯತ್ಯಾಸವಾಗಿಲ್ಲ. ಬೇಸಿಗೆಯಲ್ಲಿ ಇದೇ ರೀತಿ ಇರುತ್ತದೆ. ತರಕಾರಿ ಹೆಚ್ಚು ಬರುವುದರಿಂದ ಬೆಲೆ ಇಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ನಾಗೇಂದ್ರ ‘ಪ್ರಜಾವಾಣಿ’ಗೆ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT