ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರಿನ ಹಳೆಯ ಕೋಟೆಗೆ ಬೇಕಿದೆ ರಕ್ಷಣೆ

ಹನೂರು: ನೆಲ್ಲೂರು ಗ್ರಾಮದಲ್ಲಿ ಶಿಥಿಲಾವಸ್ಥೆ ತಲುಪಿದ ಕೋಟೆ
Last Updated 21 ಮೇ 2022, 19:31 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲೂರು ಗ್ರಾಮದಲ್ಲಿ ಹಳೆಯದಾದ ಕೋಟೆಯೊಂದಿದ್ದು, ಗಾಳಿ ಮಳೆಗೆ ಸಿಲುಕಿ ವರ್ಷದಿಂದ ವರ್ಷಕ್ಕೆ ಅವಸಾನವಾಗುತ್ತಿದೆ.

ಈ ಕೋಟೆಯನ್ನು ನಿರ್ಮಿಸಿದವರು ಯಾರು ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಇದರ ಬಗ್ಗೆ ವಿವರಗಳನ್ನು ಯಾರಾದರೂ ದಾಖಲು ಮಾಡಿದ್ದಾರೆಯೇ ಎಂಬುದು ತಿಳಿದಿಲ್ಲ. ಗ್ರಾಮಸ್ಥರ ಬಳಿಯೂ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಈ ಕೋಟೆಗೆ ಎರಡು ಶತಮಾನಗಳ ಇತಿಹಾಸವಿದೆ ಎಂದು ಹೇಳುತ್ತಾರೆ ಸ್ಥಳೀಯರು. ಬಹುತೇಕ ಶಿಥಿಲಗೊಂಡಿರುವ ಈ ಐತಿಹಾಸಿಕವಾದ ಕೋಟೆಯನ್ನು ಸಂರಕ್ಷಿಸುವ ಅಗತ್ಯವಿದೆ.

ರಾಮಾಪುರ ಹೋಬಳಿ ವ್ಯಾಪ್ತಿಯ ನಾಲ್‌ರೋಡ್‌ನಿಂದ 12 ಕಿ.ಮೀ ದೂರ ಸಾಗಿದರೆ ನೆಲ್ಲೂರು ಗ್ರಾಮ ಸಿಗುತ್ತದೆ. ತಮಿಳುನಾಡು ಹಾಗೂ ಕರ್ನಾಟಕ ರಾಜ್ಯವನ್ನು ಬೇರ್ಪಡಿಸುವ ಪಾಲಾರ್ ಹಳ್ಳಕ್ಕೆ ಸಮೀಪದಲ್ಲೇ ಈ ಕೋಟೆಯಿದೆ.

ಅರ್ಧ ಎಕರೆಯಷ್ಟು ಜಾಗದಲ್ಲಿ ಈ ಕೋಟೆ ನಿರ್ಮಿಸಲಾಗಿದೆ. ಸುತ್ತಲೂ ಬೃಹತ್ ಗೋಡೆಗಳನ್ನು ನಿರ್ಮಿಸಿದ್ದು, ಅದರೊಳಗೆ ವಿಭಾಗ ಮಾಡಿ ಸಣ್ಣ ಸಣ್ಣ ಕೊಠಡಿಗಳನ್ನು ನಿರ್ಮಿಸಿದ್ದ ಕುರುಹುಗಳಿವೆ. ಗೋಡೆಗಳನ್ನು ಬೂದಿ, ಮಣ್ಣಿನಿಂದ ನಿರ್ಮಿಸಲಾಗಿದೆ. ಮಳೆ ಗಾಳಿಗೆ ಸಿಲುಕಿ ಗೋಡೆಗಳೆಲ್ಲಾ ಕರಗುತ್ತಿವೆ. ಗೋಡೆಯ ತುದಿಯಲ್ಲಿ ಸಣ್ಣ ಸಣ್ಣ ಕಿಟಕಿಗಳನ್ನು ಕೊರೆಯಲಾಗಿದೆ. ಕೋಟೆಗೆ ಹೊಂದಿಕೊಂಡಂತೆ ಸಮೀಪದಲ್ಲೇ ಒಂದು ತೆರೆದ ಬಾವಿಯಿದೆ. ಕೋಟೆಯ ಒಳಭಾಗದಲ್ಲಿ ಸ್ಥಳೀಯರು ಕೃಷಿ ಮಾಡುತ್ತಿದ್ದಾರೆ.

ಹಾರುವಳ್ಳಿ, ಸೂರವಳ್ಳಿ ಕೋಟೆ: 300 ವರ್ಷಗಳ ಹಿಂದೆ ಈ ಭಾಗದ ಬಹುತೇಕ ಪ್ರದೇಶವನ್ನು ಹಾರುವಳ್ಳಿ, ಸೂರವಳ್ಳಿ ಎಂಬ ಅವಳಿ ಮಹಿಳೆಯರು ಆಳ್ವಿಕೆ ಮಾಡುತ್ತಿದ್ದರು. ಉತ್ತರದಿಂದ ಹಾಗೂ ದಕ್ಷಿಣದಿಂದ ದಂಡೆತ್ತಿ ಬರುತ್ತಿದ್ದ ರಾಜರನ್ನು ಹಿಮ್ಮೆಟ್ಟಿಸಿ ಇಲ್ಲಿನ ಭೂ ಪ್ರದೇಶ ಹಾಗೂ ಜನರನ್ನು ರಕ್ಷಣೆ ಮಾಡುತ್ತಿದ್ದರು. ಅವರ ಕಾಲಘಟ್ಟದಲ್ಲಿ ನಿರ್ಮಿಸಿದ ಕೋಟೆ ಇದು ಎಂದು ಹೇಳಲಾಗುತ್ತಿದೆ.

ಹೂಗ್ಯಂ, ಮಾರ್ಟಳ್ಳಿ ಹಾಗೂ ಮೀಣ್ಯಂ ಭಾಗದಲ್ಲಿ ಈ ಕೋಟೆಗೆ ಹಾರುವಳ್ಳಿ, ಸೂರವಳ್ಳಿ ಕೋಟೆ ಎಂದೇ ಕರೆಯಲಾಗುತ್ತದೆ ಎಂದು ಹೇಳುತ್ತಾರೆ ಕೆಲವು ಸ್ಥಳೀಯರು.

ಕೋಟೆಯು ಎರಡು ರಾಜ್ಯಗಳ ಮಧ್ಯೆ ಇರುವುದರಿಂದ ಐತಿಹಾಸಿಕವಾಗಿ ಈ ಕೋಟೆಗೆ ಮಹತ್ವ ಇರಬಹುದು ಎಂದು ಹೇಳಲಾಗುತ್ತಿದೆ. ಉತ್ತರದಿಂದ ದಂಡೆತ್ತಿ ಬಂದ ರಾಜರು ಅಥವಾ ತಮಿಳುನಾಡಿನಿಂದ ರಾಜ್ಯಕ್ಕೆ ಬಂದ ರಾಜರು ನಿರ್ಮಿಸಬಹುದು ಎಂಬ ಮಾತುಗಳೂ ಇವೆ.

---

ಇಬ್ಬರು ಅವಳಿ ರಾಣಿಯರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದರು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು
– ಮಾದಯ್ಯ, ನೆಲ್ಲೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT