ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಆಮ್ಲಜನಕ ದುರಂತಕ್ಕೆ ತಿಂಗಳು: ಹೊಣೆಗಾರರ ವಿರುದ್ಧ ಕ್ರಮ ಯಾವಾಗ?

ಆಘಾತದಿಂದ ಹೊರ ಬರದ ಕುಟುಂಬಗಳು, ಸಾಂತ್ವನ ಹೇಳದ ಜಿಲ್ಲಾಡಳಿತ
Last Updated 3 ಜೂನ್ 2021, 4:09 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೇ 24 ಮಂದಿ ಮೃತಪಟ್ಟ ಪ್ರಕರಣಕ್ಕೆ ಒಂದು ತಿಂಗಳು ಸಂದಿದೆ. ಸಂತ್ರಸ್ತರ ಕುಟುಂಬದ ಸದಸ್ಯರೂ ಇನ್ನೂ ಆಘಾತದಿಂದ ಹೊರ ಬಂದಿಲ್ಲ. 30 ದಿನಗಳು ಕಳೆದರೂ ರಾಜ್ಯ ಸರ್ಕಾರ ಈ ದುರಂತಕ್ಕೆ ಕಾರಣರಾದವರ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ.

‘ಮೃತಪಟ್ಟ ಕುಟುಂಬದವರನ್ನು ಮಾತನಾಡಿಸಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ/ಜಿಲ್ಲಾಡಳಿತ ಮಾಡಿಲ್ಲ. ಹೈಕೋರ್ಟ್‌ ಸೂಚನೆಯ ಮೇರೆಗೆ 24 ಮಂದಿಯ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ಘೋಷಿಸಿ ಸರ್ಕಾರ ಕೈತೊಳೆದುಕೊಂಡುಕೊಂಡಿದೆ’ ಎಂಬ ಆರೋಪವನ್ನು ಸಂತ್ರಸ್ತರ ಕುಟುಂಬದವರು ಮಾಡುತ್ತಿದ್ದಾರೆ.

‘ಹೈಕೋರ್ಟ್‌ ನೇಮಿಸಿರುವ ತನಿಖಾ ಸಮಿತಿಯ ವರದಿಯು ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸ್ಪಷ್ಟವಾಗಿ ಬೆಟ್ಟು ಮಾಡಿ ತೋರಿಸಿದರೂ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಯಾಕೆ ಹಿಂದೇಟು ಹಾಕುತ್ತಿದೆ? ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಅವರಿಗೆ ಯಾಕೆ ಸಾಧ್ಯವಾಗುತ್ತಿಲ್ಲ? 24 ಜೀವಗಳು ಅಷ್ಟು ಕೇವಲವಾದವೇ’ ಎಂಬ ಪ್ರಶ್ನೆಗಳನ್ನು ಸಂತ್ರಸ್ತರ ಕುಟುಂಬ ಸದಸ್ಯರು, ವಿರೋಧ ಪಕ್ಷಗಳ ಮುಖಂಡರು ಹಾಗೂ ಜಿಲ್ಲೆಯ ನಾಗರಿಕರು ಕೇಳುತ್ತಿದ್ದಾರೆ.

ಮೇ 2ರ ರಾತ್ರಿ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಖಾಲಿಯಾಗಿ, ಮೈಸೂರಿನಿಂದ ಸರಿಯಾದ ಸಮಯಕ್ಕೆ ಸಿಲಿಂಡರ್‌ ಪೂರೈಕೆಯಾಗದೇ ಇದ್ದುದರಿಂದ 24 ಕೋವಿಡ್‌ ರೋಗಿಗಳು ಮೃತಪಟ್ಟಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎನ್‌.ಗೋಪಾಲಗೌಡ ನೇತೃತ್ವದಲ್ಲಿ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿತ್ತು. ಹೈಕೋರ್ಟ್‌ಗೆ ವರದಿ ನೀಡಿದ್ದ ಸಮಿತಿಯು ಮೇ 2ರ ರಾತ್ರಿಯಿಂದ 3ರ ಮುಂಜಾವಿನ ಅವಧಿಯಲ್ಲಿ 24 ಜನರೂ ಆಮ್ಲಜನಕ ಕೊರತೆಯಿಂದಲೇ ಮೃತಪಟ್ಟಿದ್ದಾರೆ. ಆಮ್ಲಜನಕ ಪೂರೈಸಲು ಜಿಲ್ಲಾಡಳಿತ ಹಾಗೂ ಆಸ್ಪತ್ರೆಯ ಆಡಳಿತ ವಿಫಲವಾಗಿದೆ ಎಂದು ಹೇಳಿತ್ತು.

ಕುಟುಂಬಗಳನಿರ್ಲಕ್ಷ್ಯ: ಘಟನೆ ನಡೆದ ನಂತರ ಜಿಲ್ಲಾಡಳಿತ ಮೃತಪಟ್ಟವರ ಕುಟುಂಬದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂಬುದು ಸಂತ್ರಸ್ತರ ಕುಟುಂಬದ ಸದಸ್ಯರ ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡರ ದೂರು.

‘ಘಟನೆ ನಡೆದು ತಿಂಗಳಾಯಿತು. ಸರ್ಕಾರ ಈಗ ಪರಿಹಾರ ಘೋಷಿಸಿದೆ. ಹಣ ಸಿಕ್ಕಿದರೂ, ಸತ್ತವರು ವಾಪಸ್‌ ಬರುವುದಿಲ್ಲ. ಆದರೆ, ದುರ್ಘಟನೆ ನಡೆದ ಬಳಿಕ ಸರ್ಕಾರದ ವತಿಯಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವುದೋ ಅಥವಾ ಜಿಲ್ಲಾಧಿಕಾರಿ, ತಹಶೀಲ್ದಾರ್‌, ವೈದ್ಯರು ಅಥವಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಕುಟುಂಬದವನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿಲ್ಲ. ಇದು ನೋವಿನ ವಿಚಾರ’ ಎಂದು ಘಟನೆಯಲ್ಲಿ ಅಣ್ಣನನ್ನು ಕಳೆದುಕೊಂಡ, ಚಾಮರಾಜನಗರದ ನಿವಾಸಿ, ನಗರಸಭಾ ಸದಸ್ಯ ಸಿ.ಚಂದ್ರಶೇಖರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದುರಂತದಲ್ಲಿ ಪ್ರಾಣಕಳೆದುಕೊಂಡ 36 ಜನರ ಕುಟುಂಬದವರನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ. ಆಮ್ಲಜನಕ ಪೂರೈಸಬೇಕಾಗಿದ್ದುದು ಸರ್ಕಾರದ ಜವಾಬ್ದಾರಿ. ಹೈಕೋರ್ಟ್‌ ಛೀಮಾರಿ ಹಾಕಿದ ನಂತರ ಪರಿಹಾರ ಘೋಷಿಸಿದೆ. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರದ ನಡೆಗೆ ಅಸಮಾಧಾನ
ಆಮ್ಲಜನಕ ಕೊರತೆಯಾಗಿರುವುದು ದೃಢಪಟ್ಟು, ಜಿಲ್ಲಾಡಳಿತದ ನಿರ್ಲಕ್ಷ್ಯದ ಬಗ್ಗೆ ತನಿಖಾ ವರದಿ ಪ‍್ರಸ್ತಾಪ ಮಾಡಿದರೂ ಸಂಬಂಧಿಸಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿರುವುದು ರಾಜಕೀಯ ವಲಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

‘ಅಧಿಕಾರಿಗಳ ನಿರ್ಲಕ್ಷ್ಯ ಎಂಬುದನ್ನು ತನಿಖಾ ವರದಿ ಸ್ಪಷ್ಟವಾಗಿ ಹೇಳಿದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ವಿಚಾರಣೆ ಕಾಯ್ದಿಟ್ಟು ಅವರನ್ನು ಅಮಾನತು ಮಾಡುವುದಕ್ಕೆ ಅವಕಾಶ ಇದೆ. ಆದರೆ, ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಸಂಬಂಧಿಸಿದ ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಮುಂದಾಗಿಲ್ಲ’ ಎಂದು ಆರ್‌.ಧ್ರುವನಾರಾ‌ಯಣ ಅವರು ದೂರಿದರು.

‘ಈ ಘಟನೆಗೆ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ನೇರ ಕಾರಣ. ಹಾಗಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಸರ್ಕಾರ ಯಾರಿಗೆ ಭಯಪಡುತ್ತಿದೆ’ ಎಂಬುದು ತಿಳಿಯುತ್ತಿಲ್ಲ ಎಂದು ಚಂದ್ರಶೇಖರ್‌ ಅವರು ಬೇಸರ ವ್ಯಕ್ತಪಡಿಸಿದರು.

ನಡೆಯದ ಪ್ರತಿಭಟನೆಗಳು!
ಸಾಮಾನ್ಯವಾಗಿ ರಾಜ್ಯ ಹಾಗೂ ದೇಶದಲ್ಲಿ ಸಂಭವಿಸುವ ವಿವಿಧ ಘಟನೆಗಳು, ಅನ್ಯಾಯ ಖಂಡಿಸಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿರುತ್ತವೆ.

ದಲಿತ, ಪ್ರಗತಿಪರ, ಕನ್ನಡ, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರತಿ ದಿನ ಒಂದಿಲ್ಲೊಂದು ಕಾರಣಕ್ಕೆ ಪ್ರತಿಭಟನೆಗಳನ್ನು ನಡೆಸುತ್ತಿರುತ್ತವೆ. ಪ್ರತಿಭಟನೆ ಮಾಡದಿದ್ದರೂ, ಪತ್ರಿಕಾ ಪ್ರಕಟಣೆ ಹೊರಡಿಸಿ ಖಂಡನಾ ಹೇಳಿಕೆ ಪ್ರಕಟಿಸುತ್ತವೆ. ಆದರೆ, ಆಮ್ಲಜನಕ ದುರಂತದ ಬಗ್ಗೆ ಸ್ಥಳೀಯ ಸಂಘಟನೆಗಳಿಂದ ಯಾವುದೇ ಪ್ರತಿಭಟನೆ ನಡೆಯಲಿಲ್ಲ.ಮಾಧ್ಯಮ ಹೇಳಿಕೆಗಳನ್ನೂ ಹೊರಡಿಸಲಿಲ್ಲ. ಇದಕ್ಕೆ ಲಾಕ್‌ಡೌನ್‌ ಕೂಡ ಒಂದು ಕಾರಣ.ಆದರೆ, ಈ ಹಿಂದೆ ಪ್ರತಿಭಟನೆಗೆ ನಿರ್ಬಂಧ ಇದ್ದ ಸಂದರ್ಭದಲ್ಲೂ ಹಲವು ಪ್ರತಿಭಟನೆಗಳು ನಿರಾತಂಕವಾಗಿ ನಡೆಸಿವೆ.

ಎಸ್‌ಡಿಪಿಐ ಮಾತ್ರ ಆರಂಭದಿಂದಲೂ ಘಟನೆ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದೆ. ಕಾಂಗ್ರೆಸ್‌ ಪಕ್ಷ ಕೂಡ ಸರ್ಕಾರದ ವಿರುದ್ಧ ಧ್ವನಿ ಎತ್ತಿದೆ.

*
ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದ್ದೆಯೋ ಗೊತ್ತಿಲ್ಲ. ಲಾಕ್‌ಡೌನ್‌ ಇಲ್ಲದಿದ್ದರೆ ಏಕಾಂಕಿಯಾಗಿ ಸತ್ಯಾಗ್ರಹ ಮಾಡುತ್ತಿದ್ದೆ.
-ಸಿ.ಚಂದ್ರಶೇಖರ್‌, ಅಣ್ಣನನ್ನು ಕಳೆದುಕೊಂಡವರು

*
ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯವು ತಪ್ಪಿತಸ್ಥರನ್ನು ಶಿಕ್ಷಿಸಿ, ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಒದಗಿಸಲಿದೆ ಎಂಬ ವಿಶ್ವಾಸ ಇದೆ.
-ಆರ್‌.ಧ್ರವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ

*
ಪ್ರಕರಣ ತನಿಖೆ ಹಂತದಲ್ಲಿದೆ. ಹೈಕೋರ್ಟ್‌ ಕೂಡ ವಿಚಾರಣೆ ನಡೆಸುತ್ತಿದೆ. ಎಲ್ಲವೂ ಸರ್ಕಾರದ ಗಮನದಲ್ಲಿದೆ. ತನಿಖೆ ಪೂರ್ಣಗೊಂಡ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ.
-ಆರ್‌.ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT