ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ದುರಂತ: ಕ್ರಮಕ್ಕೆ ಆಗ್ರಹಿಸಿ ಎನ್‌ಎಸ್‌ಯುಐ ಪ್ರತಿಭಟನೆ

Last Updated 18 ಆಗಸ್ಟ್ 2021, 16:40 IST
ಅಕ್ಷರ ಗಾತ್ರ

ಚಾಮರಾಜನಗರ: ‌ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ದುರಂತದಿಂದ ಮೃತಪಟ್ಟವರ ಕುಟುಂಬಗಳಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಪ್ರವಾಸಿಮಂದಿರದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದುರಂತ ಸಂಭವಿಸಿ ನೂರು ದಿನಗಳು ಕಳೆದರೂ ಮೃತಪಟ್ಟ 36 ಜನರ ಕುಟುಂಬಗಳಿಗೆ ಸರ್ಕಾರ ನ್ಯಾಯ ನೀಡುವಲ್ಲಿ ವಿಫಲವಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಸಾವುಗಳು ಸಂಭವಿಸಿವೆ. ಇದು ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡಿದ ಕೊಲೆ. ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸವನ್ನು ಸರ್ಕಾರ, ಜಿಲ್ಲಾಡಳಿತ ಎರಡೂ ಮಾಡಿಲ್ಲ ಎಂದು ಅವರು ದೂರಿದರು.

ಸಂತ್ರಸ್ತರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರ ಕೆಲಸ ನೀಡಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.

ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಯುವ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿ ಚೇತನ್ ದೊರೆರಾಜ್ ಅವರು ಮಾತನಾಡಿದರು.

ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಯತ್ನ: ಆರಂಭದಲ್ಲಿ ಜಿಲ್ಲಾಡಳಿತ ಭವನದ ಎದುರಿಗಿನ ಉದ್ಯಾನದಲ್ಲಿ ಪ್ರತಿಭಟನಕಾರರು ಧರಣಿ ಕುಳಿತರು. ಮನವಿ ಸ್ವೀಕರಿಸಲು ಅಧಿಕಾರಿಗಳು ಬಾರದೇ ಇದ್ದಾಗ ಕೋಪಗೊಂಡ ಪ್ರತಿಭಟನಕಾರರು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಭವನದ ಪ್ರವೇಶದ್ವಾರದ ಮುಂದೆ ಜಮಾಯಿಸಿದ ಅವರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದರು. ಅವರನ್ನು ಪೊಲೀಸರು ತಡೆದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ದೇವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭನಟಕಾರರ ಮನವೊಲಿಸಿದರು.

ಎನ್‌ಎಸ್‌ಯುಐನ ಜಿಲ್ಲಾ ಉಸ್ತುವಾರಿ ರಫೀಕ್‌ ಅಲಿ ಎಚ್‌.ಎ, ಕೀರ್ತಿ ಗಣೇಶ್, ಸಯ್ಯದ್ ಮುಜೀಬ್, ಅಶೋಕ್, ಸತೀಶ್, ನಾಗು, ಸ್ವಾಮಿ, ಬಾಲರಾಜ್, ಸಾಗರ್, ದರ್ಶನ್, ಚಂದ್ರು, ಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT