ಸೋಮವಾರ, ಆಗಸ್ಟ್ 2, 2021
23 °C

ಅಧಿಕ ಶುಲ್ಕ: ಖಾಸಗಿ ಶಾಲೆ ವಿರುದ್ಧ ಡಿಡಿಪಿಐಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ನಗರದ ಸೇಂಟ್‌ ಫ್ರಾನ್ಸಿಸ್‌ ಶಾಲೆಯಲ್ಲಿ ಸರ್ಕಾರ ಸೂಚಿಸಿದ್ದಕ್ಕಿಂತ ಅಧಿಕ ಶುಲ್ಕ ಪಡೆಯಲಾಗುತ್ತಿದೆ. ಪಾವತಿಸಿದ ಹಣಕ್ಕೆ ರಸೀದಿ ನೀಡಲಾಗುತ್ತಿಲ್ಲ’ ಎಂದು ಆರೋಪಿಸಿ ನಾಲ್ವರು ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ (ಡಿಡಿಪಿಐ) ದೂರು ನೀಡಿದ್ದಾರೆ. 

‘ಶಾಲೆಯಲ್ಲಿ 2021–22ನೇ ಸಾಲಿಗೆ ವಿದ್ಯಾರ್ಥಿಗಳ ಪ್ರವೇಶಾತಿ ನಡೆಯುತ್ತಿದೆ. ಆರು ತಿಂಗಳ ಮುಂಗಡ ಶುಲ್ಕ ₹10,400 ಪಡೆದುಕೊಂಡಿದ್ದಾರೆ. 2020–21ನೇ ಸಾಲಿನ ಶುಲ್ಕದಲ್ಲಿ ₹15,950 ಪಾವತಿ ಮಾಡಲಾಗಿತ್ತು. ಈಗ ಕಳೆದ ವರ್ಷ ಉಳಿಕೆ ಮೊತ್ತ ₹7,250 ಪಾವತಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಈ ಸಾಲಿನಲ್ಲಿ ಶುಲ್ಕ ಕಟ್ಟುವವರಿಗೆ ಯಾರಿಗೂ ರಶೀದಿ ನೀಡುತ್ತಿಲ್ಲ’ ಎಂದು ನಾಲ್ವರು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. 

‘ಶಾಲೆಯ ಆಡಳಿತ ಮಂಡಳಿಯು 2020ರ ಜೂನ್‌ 19ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ತಿರಸ್ಕರಿಸಿ ಅಧಿಕ ಶುಲ್ಕವನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸರ್ಕಾರದ ಆದೇಶವನ್ನು ಪಾಲಿಸುವಂತೆ ಶಾಲೆಗೆ ಸೂಚನೆ ನೀಡಬೇಕು’ ಎಂದು ಪೋಷಕರಾದ ಸಿ.ಕೆ.ರಂಗರಾಮು, ಚಿಕ್ಕರಾಜು, ಶಿವಕುಮಾರ್‌ ಹಾಗೂ ಸೈಯದ್‌ ಶಫಿ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ. 

‘ಶೇ 70ರಷ್ಟು ಬೋಧನಾ ಶುಲ್ಕ ನೀಡಿದರೆ ಸಾಕು ಎಂದು ರಾಜ್ಯ ಸರ್ಕಾರ ಕಳೆದ ವರ್ಷ ಸೂಚಿಸಿದೆ. ಶಾಲಾ ಆಡಳಿತ ಮಂಡಳಿಗಳ ಕಷ್ಟ ನಮಗೂ ಅರ್ಥವಾಗುತ್ತದೆ. ಶಿಕ್ಷಕರು ಸಾಧ್ಯವಾದಷ್ಟು ಮಟ್ಟಿಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನೂ ನಡೆಸಿದ್ದಾರೆ. ನಾವು ಶೇ 70ಕ್ಕಿಂತ ಹೆಚ್ಚೇ ಶುಲ್ಕ ಪಾವತಿಸಿದ್ದೇವೆ. ಈ ವರ್ಷ ಕಳೆದ ವರ್ಷದ ಬಾಕಿ ಹಣಕ್ಕೆ ಒತ್ತಡ ಹಾಕುತ್ತಿದ್ದಾರೆ. ಅದನ್ನು ಪಾವತಿಸಿದರೂ ರಶೀದಿ ನೀಡುತ್ತಿಲ್ಲ. ಆಡಳಿತ ಮಂಡಳಿ ಮನವಿಗೆ ಸ್ಪಂದಿಸಿಲ್ಲ. ಹಾಗಾಗಿ ದೂರು ನೀಡಿದ್ದೇವೆ. ಹೆಚ್ಚುವರಿ ಜಿಲ್ಲಾಧಿಕಾರಿ ಅವರನ್ನೂ ಭೇಟಿ ಮಾಡಿದ್ದೇವೆ’ ಎಂದು ದೂರದಾರ ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು