ಶುಕ್ರವಾರ, ಜೂನ್ 18, 2021
24 °C
ಆರೂವರೆ ತಿಂಗಳಲ್ಲಿ 13 ಪ್ರಕರಣಗಳು ಬೆಳಕಿಗೆ, 20 ಸಾವಿರ ಕೆಜಿಗಿಂತಲೂ ಹೆಚ್ಚು ‘ಅನ್ನಭಾಗ್ಯ’ ಅಕ್ಕಿ ವಶ

ಅಕ್ರಮ ಪಡಿತರ ಅಕ್ಕಿ ಮಾರಾಟ ದಂಧೆ ಸಕ್ರಿಯ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಿಪಿಎಲ್‌ ಕಾರ್ಡ್‌ದಾರರಿಂದ ‘ಅನ್ನಭಾಗ್ಯ’ ಯೋಜನೆಯ ಉಚಿತ ಪಡಿತರ ಅಕ್ಕಿಯನ್ನು ಕಡಿಮೆ ಹಣಕ್ಕೆ ಖರೀದಿಸಿ, ಅದನ್ನು ಬೇರೆ ಕಡೆಗಳಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಮಾಫಿಯಾ ಜಿಲ್ಲೆಯಲ್ಲಿ ಸಕ್ರಿಯವಾಗಿದೆ.

ಈ ವರ್ಷದ ಏಪ್ರಿಲ್‌ ತಿಂಗಳಿನಿಂದ ಇಲ್ಲಿಯವರೆಗೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುವ 13 ಪ್ರಕರಣಗಳನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದ್ದು, 2 ಟನ್‌ಗಿಂತಲೂ ಹೆಚ್ಚು ಅಕ್ಕಿಯನ್ನು ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.‌

ಅಕ್ಟೋಬರ್‌ 18ರಂದು ಕೊಳ್ಳೇಗಾಲದಲ್ಲಿ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿ 1,227 ಕೆಜಿ ಪಡಿತರ ಅಕ್ಕಿಯನ್ನು ವಶಕ್ಕೆ ತೆಗೆದುಕೊಂಡಿರುವುದು ಇತ್ತೀಚೆಗೆ ಬೆಳಕಿಗೆ ಬಂದಿರುವುದು ಇತ್ತೀಚೆಗೆ ನಡೆದಿರುವ ಪ್ರಕರಣ. 

ಕೊಳ್ಳೇಗಾಲ, ಯಳಂದೂರು ಮತ್ತು ಚಾಮರಾಜನಗರ ತಾಲ್ಲೂಕುಗಳಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುವ ಹಾಗೂ ಮಾರಾಟ ಮಾಡುವ ದಂಧೆ ಹೆಚ್ಚಾಗಿ ನಡೆಯುತ್ತಿದ್ದು, ಉಳಿದ ತಾಲ್ಲೂಕುಗಳಲ್ಲಿ ಒಂದೆರಡು ಪ್ರಕರಣಗಳಷ್ಟೇ ವರದಿಯಾಗಿವೆ.

ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆಯಲ್ಲಿ ಸೆಪ್ಟೆಂಬರ್‌ 17ರಂದು ಪತ್ತೆಯಾದ 350 ಕೆಜಿ ಪಡಿತರ ಅಕ್ಕಿ ಸಾಗಣೆ ಪ‍್ರಕರಣ ಬಿಟ್ಟು, ಉಳಿದ ಎಲ್ಲ ಪ್ರಕರಣಗಳಲ್ಲಿ 750 ಕೆಜಿಗಿಂತಲೂ ಹೆಚ್ಚು ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ. ಜೂನ್‌ 25ರಂದು ಕೊಳ್ಳೇಗಾಲದಲ್ಲಿ ಬೆಳಕಿಗೆ ಬಂದ ಪ್ರಕರಣದಲ್ಲಿ 5,788 ಕೆಜಿ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿತ್ತು.

ಆರೂವರೆ ತಿಂಗಳ ಅವಧಿಯಲ್ಲಿ ವಿವಿಧ ಕಡೆಗಳಲ್ಲಿ 3,863 ಮತ್ತು 933 ಕೆಜಿ (ಚಾಟಿಪುರ) 2,065 ಕೆಜಿ (ಯಳಂದೂರು), 1,730 ಕೆಜಿ (ಯಳಂದೂರು), 1,308 ಕೆಜಿ (ಮಾಂಬಳ್ಳಿ ಗ್ರಾಮ), 990 ಕೆಜಿ (ಕೊಳ್ಳೇಗಾಲ), 853 ಕೆಜಿ (ಸಂತೇಮರಹಳ್ಳಿ) 797 ಕೆಜಿ (ಗುಂಡ್ಲುಪೇಟೆ) ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.  

ಹೇಗೆ ನಡೆಯುತ್ತದೆ ಅಕ್ರಮ?: ‘ಪಡಿತರ ಅಕ್ರಮ ಸಾ‌ಗಣೆ ದಂಧೆಕೋರರು, ಬಿಪಿಎಲ್‌ ಕಾರ್ಡ್‌ದಾರರಿಂದಲೇ ಕೆಜಿಗೆ ₹10–₹12 ನೀಡಿ ಖರೀದಿಸುವುದು ಬೆಳಕಿಗೆ ಬಂದಿದೆ.  ಖರೀದಿಸಿದ ಅಕ್ಕಿಯನ್ನು ಪಾಲಿಷ್‌ ಮಾಡಿ ಕೆಜಿಗೆ ₹25–₹30ಗೆ ಬೇರೆ ಕಡೆ ಮಾರಾಟ ಮಾಡುತ್ತಿದ್ದಾರೆ. ರಹಸ್ಯವಾಗಿ ಸಾಗಣೆ ಮಾಡುವ ಸಂದರ್ಭದಲ್ಲಿ ಸಿಕ್ಕಿ ಬೀಳುತ್ತಿದ್ದಾರೆ’ ಎಂದು ಹೇಳುತ್ತಾರೆ ಅಧಿಕಾರಿಗಳು. 

ಜಿಲ್ಲೆಯಲ್ಲಿ 2.89 ಲಕ್ಷ ಕುಟುಂಬಗಳು (ಅಂತ್ಯೋದಯ 21,265 ಕಾರ್ಡ್‌ಗಳೂ ಸೇರಿ) ಬಿಪಿಎಲ್‌ ಕಾ‌ರ್ಡ್‌ ಹೊಂದಿದ್ದಾರೆ. ಅಂತೋದ್ಯಯ ಕಾರ್ಡ್‌ ಹೊಂದಿರುವ ಕುಟುಂಬಕ್ಕೆ ಪ್ರತಿ ತಿಂಗಳು 35 ಕೆಜಿ ಅಕ್ಕಿ ಹಾಗೂ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬದ ಸದಸ್ಯರಿಗೆ ತಲಾ 7 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ.

ನ್ಯಾಯಬೆಲೆ ಅಂಗಡಿಯಿಂದ ಉಚಿತವಾಗಿ ಪಡೆದ ಅಕ್ಕಿಯಲ್ಲಿ, ಸ್ವಲ್ಪ ಮನೆಯಲ್ಲಿ ಇಟ್ಟುಕೊಂಡು ಉಳಿದುದನ್ನು ಕಾರ್ಡ್‌ದಾರರು ದುಡ್ಡಿಗಾಗಿ ಮಾರಾಟ ಮಾಡುತ್ತಿದ್ದಾರೆ ಎಂಬುದು ಅಧಿಕಾರಿಗಳ ವಾದ. 

‘ಬಯೊಮೆಟ್ರಿಕ್‌ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಪ‍ಡಿತರ ನ್ಯಾಯಬೆಲೆ ಅಂಗಡಿಗಳಲ್ಲಿ ಹಾಗೂ ಇಲಾಖೆಯ ದಾಸ್ತಾನು ಕೊಠಡಿಗಳಿಂದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಅಥವಾ ಇತರೆಡೆಗೆ ಸಾಗಿಸಲು ಈ ಸಾಧ್ಯವೇ ಇಲ್ಲ’ ಎಂದು ಹೇಳುತ್ತಾರೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಆರ್‌.ರಾಚಪ್ಪ. 

ಜಿಲ್ಲೆಯಲ್ಲಿ 15 ಸಾವಿರದಿಂದ 20 ಸಾವಿರದಷ್ಟು ಮಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ಕೂಡ ಕಾಳಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ‘ಅನ್ನಭಾಗ್ಯ’ ಅಕ್ಕಿಯಲ್ಲಿ ಅನ್ನ ಮಾಡಲು ಸಾಧ್ಯವಿಲ್ಲ. ಅದನ್ನು ದೋಸೆ ಹಾಗೂ ಇನ್ನಿತರ ತಿಂಡಿ ಮಾಡಲು ಬಳಸಬಹುದು. ಹಾಗಾಗಿ, ಅದಕ್ಕೆ ಬೇಕಾದಷ್ಟನ್ನು ಉಳಿಸಿಕೊಂಡು ಉಳಿದ ಅಕ್ಕಿಯನ್ನು ಕಾರ್ಡ್‌ದಾರರು ಮಾರಾಟ ಮಾಡುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ. 

ಕಾರ್ಡ್‌ ರದ್ದು: ಜಿಲ್ಲಾಧಿಕಾರಿ ಎಚ್ಚರಿಕೆ

ಈ ಮಧ್ಯೆ, ಕೊಳ್ಳೇಗಾಲದಲ್ಲಿ ಪಡಿತರ ಅಕ್ರಮ ಸಾಗಣೆ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು, ‘ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂಥವರ ಕಾರ್ಡುಗಳನ್ನು ರದ್ದುಗೊಳಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ. 

‘ಕೆಲ ಕಾರ್ಡುದಾರರು, ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಅಕ್ಕಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಪಡಿತರ ಅಕ್ಕಿ ಖರೀದಿ ಮಾರಾಟ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದ್ದು,  ಕಾರ್ಡ್‌ದಾರರಿಂದಲೇ ಅಕ್ಕಿ ಖರೀದಿಸಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಸಬ್ಸಿಡಿ ಅನಿಲ ಸಿಲಿಂಡರ್‌ ಮಾರಾಟ

ಜಿಲ್ಲೆಯಲ್ಲಿ ಸಬ್ಸಿಡಿಯುಕ್ತ ಅಡುಗೆ ಅನಿಲ ಸಿಲಿಂಡರ್‌ ಅನ್ನೂ ಮಾರಾಟ ಮಾಡುವವರು ಇದ್ದಾರೆ. ಆಗಸ್ಟ್‌ 9ರಂದು ಕೊಳ್ಳೇಗಾಲದಲ್ಲಿ 11 ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದೆ. 

ಹೋಟೆಲ್‌, ಸಣ್ಣ ಕ್ಯಾಂಟೀನ್‌ಗಳಿಗೆ ಹೆಚ್ಚಿನ ಬೆಲೆಗೆ ಸಿಲಿಂಡರ್‌ ಮಾರಾಟ ಮಾಡಲಾಗುತ್ತಿದೆ. ಪಡಿತರ ಅಕ್ಕಿಗೆ ಹೋಲಿಸಿದರೆ ಸಿಲಿಂಡರ್‌ ಮಾರಾಟ ಮಾಡುವವರು ಕಡಿಮೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು