ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹ್ಯಾಟ್ರಿಕ್‌ ವೀರ’ ಪುಟ್ಟರಂಗಶೆಟ್ಟಿ ಮೇಲೆ ನಿರೀಕ್ಷೆಗಳ ಭಾರ

ಜಿಲ್ಲಾ ಕೇಂದ್ರ ಚಾಮರಾಜನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ತವಕಿಸುತ್ತಿರುವ ಜನತೆ
Last Updated 18 ಜುಲೈ 2018, 17:47 IST
ಅಕ್ಷರ ಗಾತ್ರ

ಚಾಮರಾಜನಗರ: ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರವನ್ನು (ಚಾಮರಾಜನಗರ) ಸಿ.ಪುಟ್ಟರಂಗಶೆಟ್ಟಿ ಪ್ರತಿನಿಧಿಸುತ್ತಿರುವುದು ಇದು ಮೂರನೇ ಬಾರಿ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಒಂದಷ್ಟು ಅನುದಾನ ತಂದು ಜಿಲ್ಲಾ ಕೇಂದ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲು ಅವರು ಯಶಸ್ವಿಯಾಗಿದ್ದರೂ, ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸಲು‌ಸಾಧ್ಯವಾಗಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಇಲ್ಲಿನ ಜನರ ಪಾಲಿಗೆ ಕನಸಾಗಿಯೇ ಉಳಿದಿದೆ. ಸತತ ಮೂರನೇ ಬಾರಿ‌ಗೆದ್ದು ಹ್ಯಾಟ್ರಿಕ್‌ ವೀರ ಎನಿಸಿಕೊಂಡು, ಮೈತ್ರಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿರುವ ಪುಟ್ಟರಂಗಶೆಟ್ಟರ ಮೇಲೆ ಕ್ಷೇತ್ರದ ಜನರು ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ.

ಮೋಳೆಗಳ ಅಭಿವೃದ್ಧಿ ಮರೀಚಿಕೆ: ಉಪ್ಪಾರ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮೋಳೆಗಳ ಅಭಿವೃದ್ಧಿ ಎಂಬುದು ಇನ್ನೂ ಮರೀಚಿಕೆಯಾಗಿದೆ. ಮೂಲಸೌಕರ್ಯಗಳ ಕೊರತೆ ಅಲ್ಲಿ ಎದ್ದು ಕಾಣುತ್ತಿದೆ.ರಸ್ತೆ, ನೀರು, ಚರಂಡಿ, ವಿದ್ಯುತ್‌ನಂತಹ ಸೌಲಭ್ಯಗಳು ಈ ಪ್ರದೇಶಗಳಿಗೆಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ. ಒಂದೆರಡು ಅಲ್ಲ; ಬಹುತೇಕ ಎಲ್ಲ ಮೋಳೆಗಳಲ್ಲಿ ಇದೇ ಸಮಸ್ಯೆ.

ಯಾವುದಾದರೂ ಒಂದು ಮೋಳೆಗೆ ಭೇಟಿ ನೀಡಿದರೆ ಸಾಕು, ಅಲ್ಲಿನ ಜನ ಸಮಸ್ಯೆಗಳ ಪಟ್ಟಿಯನ್ನೇ ಮುಂದಿಡುತ್ತಾರೆ. ತಮ್ಮದೇ ಸಮುದಾಯದವರು ಮೂರು ಬಾರಿ ಶಾಸಕರಾಗಿದ್ದರೂ, ಮೋಳೆಗಳ ಅಭಿವೃದ್ಧಿಗೆ ಏನೂ ಮಾಡಿಲ್ಲ ಎಂಬ ಕೊರಗು ಜನರಲ್ಲಿದೆ.

‘ದೊಡ್ಡ ಮೋಳೆ ಗ್ರಾಮ ಜಿಲ್ಲಾ ಕೇಂದ್ರದಿಂದ ಐದಾರು ಕಿ.ಮೀಗಳಷ್ಟು ದೂರದಲ್ಲಿದೆಯಷ್ಟೇ. ಇಲ್ಲಿನ ಪರಿಸ್ಥಿತಿ ಹೀಗೆ ಇದೆ ಎಂದರೆ, ಈ ಕ್ಷೇತ್ರದಲ್ಲಿರುವಉಳಿದ ಮೋಳೆಗಳ ಸ್ಥಿತಿಯನ್ನು ನೀವೇ ಊಹಿಸಿ. ಪುಟ್ಟರಂಗಶೆಟ್ಟಿ ಅವರು ಮೂರು ಬಾರಿ ಶಾಸಕರಾದರೂ ಏನೂ ಪ್ರಯೋಜನ ಆಗಿಲ್ಲ’ ಎಂದು ದೊಡ್ಡ ಮೋಳೆಯ ಯುವ ಮುಖಂಡ ಅನುರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶೌಚಾಲಯಗಳ ಕೊರತೆ: ಚಾಮರಾಜನಗರ ಪಟ್ಟಣ ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೌಚಾಲಯಗಳಿಲ್ಲ. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದರೂ, ಜನರು ಇನ್ನೂ ಅವುಗಳನ್ನು ಬಳಸುತ್ತಿಲ್ಲ. ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಇದೆ. ಕೆಲವು ಕಡೆಗಳಲ್ಲಿ ಕುಟುಂಬಗಳೂ ಶೌಚಾಲಯ ಹೊಂದಿಲ್ಲ. ಎಲ್ಲ ವಾರ್ಡ್‌ಗಳಿಗೆ ಶೌಚಾಲಯ ಮಂಜೂರಾಗಿದೆ, ನಾಲ್ಕೈದು ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಮುಗಿದಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದರೂ, ಕಾಮಗಾರಿ ಆರಂಭವಾಗಿಲ್ಲ. ಕನಿಷ್ಠ, ಪಟ್ಟಣದಲ್ಲಿ ಶೌಚಾಲಯದ ವ್ಯವಸ್ಥೆಯನ್ನಾದರೂ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಬಾರದ ಕೈಗಾರಿಕೆಗಳು: ಬದನಗುಪ್ಪೆ ಮತ್ತು ಕೆಲ್ಲಂಬಳ್ಳಿ ಸರ್ವೆ ನಂಬರ್‌ಗಳಲ್ಲಿ 1,400 ಎಕರೆಗಳಷ್ಟು ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕೆ ಮೀಸಲಿಡಲಾಗಿದ್ದರೂ, ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಒಂದುಜವಳಿ ಕಂಪನಿ ಹಾಗೂ ಕೆಲವು ಗ್ರಾನೈಟ್‌ ಸಂಸ್ಥೆಗಳು ಇಲ್ಲಿ ಘಟಕ ಸ್ಥಾಪಿಸಲು ಮುಂದೆ ಬಂದಿರುವುದನ್ನು ಬಿಟ್ಟರೆ, ಬೇರೇನೂ ಪ್ರಗತಿಯಾಗಿಲ್ಲ. ಸಚಿವರಾಗಿರುವ ಪುಟ್ಟರಂಗಶೆಟ್ಟಿ ಅವರು ಉದ್ಯಮಗಳನ್ನು ಕ್ಷೇತ್ರಕ್ಕೆ ತರಲು ಶ್ರಮಿಸಬೇಕು ಎಂದು ಹೇಳುತ್ತಾರೆ ಇಲ್ಲಿನ ಜನರು.

ನಿರುದ್ಯೋಗ ಸಮಸ್ಯೆ: ಕ್ಷೇತ್ರವನ್ನು ಬಾಧಿಸುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ. ಜಿಲ್ಲೆಯಲ್ಲಿ ಉದ್ಯೋಗಾವಕಾಶ ಇಲ್ಲದಿರುವುದರಿಂದ ಇಲ್ಲಿನ ಯುವ ಜನರು ಮೈಸೂರು, ಬೆಂಗಳೂರಿನಂತಹ ನಗರಗಳತ್ತ ಮುಖ ಮಾಡಬೇಕಾದ ಸ್ಥಿತಿ ಇದೆ. ಕನಿಷ್ಠ ಪಕ್ಷ ಕೆಲವು ಉದ್ದಿಮೆಗಳಾದರೂ ಚಾಮರಾಜನಗರಕ್ಕೆ ಬಂದರೆ ಒಂದಷ್ಟು ಜನರಿಗೆ ಉದ್ಯೋಗ ಸಿಗಬಹುದು ಎಂಬ ಆಶಯವನ್ನು ಜನರು ವ್ಯಕ್ತಪಡಿಸುತ್ತಾರೆ.

ನಿಲ್ದಾಣಗಳ ಸ್ಥಳಾಂತರ ಯಾವಾಗ?: ಸದ್ಯ ಚಾಮರಾಜನಗರದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜಾಗದ ಸಮಸ್ಯೆ ಇದೆ. ಜಿಲ್ಲಾ ಕ್ರೀಡಾಂಗಣಕ್ಕೆ ಸೇರಿದ ಜಾಗದಲ್ಲಿ ಖಾಸಗಿ ಬಸ್‌ ನಿಲ್ದಾಣ ಕಾರ್ಯನಿರ್ವಹಿಸುತ್ತಿದೆ. ತಾತ್ಕಾಲಿಕವಾಗಿ ರೂಪಿಸಿದ್ದ ವ್ಯವಸ್ಥೆ ಶಾಶ್ವತವಾಗಿ ಬದಲಾಗಿದೆ. ಎರಡು ಬಸ್‌ ನಿಲ್ದಾಣಗಳನ್ನೂ ಹೊಸ ಜಾಗಕ್ಕೆ ಸ್ಥಳಾಂತರಿಸುವ ಅಗತ್ಯವಿದೆ. ಖಾಸಗಿ ಬಸ್‌ ನಿಲ್ದಾಣವನ್ನು ಸ್ಥಳಾಂತರಿಸಿದರೆ ಕ್ರೀಡಾಂಗಣಕ್ಕೆ ಸಾಕಷ್ಟು ಜಾಗ ಲಭ್ಯವಾಗಿ, ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದು ಪಟ್ಟಣದ ಕ್ರೀಡಾಸಕ್ತರು ಹೇಳುತ್ತಾರೆ.

ನೀರಿನ ಸಮಸ್ಯೆಗೆ ಸಿಗುವುದೇ ಪರಿಹಾರ?

ಕುಡಿಯುನ ನೀರಿನ ಸಮಸ್ಯೆ ಕ್ಷೇತ್ರದ ಜನರನ್ನು ಬಹುವಾಗಿ ಕಾಡುತ್ತಿದೆ. ಚಾಮರಾಜನಗರ ಪಟ್ಟಣದಲ್ಲಿ ಮೂರು ದಿನಕ್ಕೊಮ್ಮೆ ಇಲ್ಲವೇವಾರಕ್ಕೊಂದು ಬಾರಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ತಿ.ನರಸೀಪುರದಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಪದೇ ಪದೇ ದುರಸ್ತಿಗೆ ಬರುತ್ತಿರುವುದರಿಂದ ನೀರಿನ ಪೂರೈಕೆಗೆ ತೊಂದರೆಯಾಗುತ್ತಿದೆ ಎಂಬ ಕಾರಣವನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಈಗಿರುವ ನೀರು ಪೂರೈಕೆ ವ್ಯವಸ್ಥೆಯಲ್ಲಿ ಮಾರ್ಗ ಮಧ್ಯೆ ಇತರ 36 ಹಳ್ಳಿಗಳಿಗೂ ನೀರು ಪೂರೈಸಲಾಗುತ್ತಿದೆ.

ನರಸೀಪುರದಿಂದ ಚಾಮರಾಜನಗರಕ್ಕೆ ನೇರವಾಗಿ ನೀರು ಪೂರೈಕೆ ಮಾಡಲು ₹210 ಕೋಟಿ ವೆಚ್ಚದಲ್ಲಿ ಹೊಸ ಪ್ರಸ್ತಾವವೊಂದು ಸರ್ಕಾರದ ಮುಂದಿದೆ. ಆದರೆ, ಇದು2020ರ ವೇಳೆಗೆ ಜಾರಿಗೆ ಬರಲಿದೆ. ಆದರೆ,ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಿದರೆ ಹೊಸ ಯೋಜನೆಯನ್ನು ಶೀಘ್ರದಲ್ಲಿ ಕಾರ್ಯಾರಂಭ ಮಾಡುವಂತೆ ಮಾಡಬಹುದು ಎಂಬುದು ಇಲ್ಲಿನ ಜನರ ಅಭಿಪ್ರಾಯ.

ಕೆರೆ ಅಭಿವೃದ್ಧಿ: ಕ್ಷೇತ್ರದಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಮತದಾರರ ಇನ್ನೊಂದು ಬೇಡಿಕೆ. ಕೆರೆಗಳಿಗೆ ನೀರು ತುಂಬಿಸಿದರೆ, ಅಂತರ್ಜಲ ಮಟ್ಟ ಹೆಚ್ಚಿ, ಕೃಷಿಕರಿಗೆ ಮತ್ತು ಜನರಿಗೆ ಅನುಕೂಲವಾಗಲಿದೆ.

ನಮ್ಮಲ್ಲಿ ರಸ್ತೆಗಳು ಸರಿಯಿಲ್ಲ. ಚರಂಡಿ ವ್ಯವಸ್ಥೆ ಇಲ್ಲ. ಕುಡಿಯುವ ನೀರು ಕೂಡ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಕೆಲವು ಮನೆಗಳಿಗೆ ವಿದ್ಯುತ್‌ ಸಂಪರ್ಕ ‌ಕಲ್ಪಿಸಿಲ್ಲ. ಪ್ರತಿದಿನವೂ ಕಷ್ಟ ಪಡುತ್ತಿದ್ದೇವೆ. ಶಾಸಕರು ಮೋಳೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು
ಶೀಲಾ, ದೊಡ್ಡ ಮೋಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT