ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಚುನಾವಣೆಗಾಗಿ 4 ಕ್ಷೇತ್ರಗಳಲ್ಲೂ ಗೊಂದಲ; ವರಿಷ್ಠರಿಗೆ ತಲೆನೋವು

ವಿಧಾನಸಭಾ ಚುನಾವಣೆ ಟಿಕೆಟ್‌ಗಾಗಿ ಬಿಜೆಪಿ ಮುಖಂಡರ ಮುಸುಕಿನ ಗುದ್ದಾಟ; ಕಾರ್ಯಕರ್ತರಲ್ಲಿ ಆತಂಕ
Last Updated 6 ನವೆಂಬರ್ 2022, 5:04 IST
ಅಕ್ಷರ ಗಾತ್ರ

ಚಾಮರಾಜನಗರ: ವಿಧಾನಸಭಾ ಚುನಾವಣೆ ಸಮೀಪದಲ್ಲಿರುವಂತೆಯೇ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಪಾಳಯದಲ್ಲಿ ಟಿಕೆಟ್‌ ಆಕಾಂಕ್ಷಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಗೊಂದಲ ದೃಷ್ಟಿಯಾಗಿದೆ. ಇದು ಪಕ್ಷದ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.

ಚಾಮರಾಜನಗರ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಇದರ ನಡುವೆಯೇ ಹೊರಗಿನಿಂದ ಬಂದವರು ಅಭ್ಯರ್ಥಿಗಳಾಗುತ್ತಾರೆ ಎಂಬ ವದಂತಿಯೂ ಹಬ್ಬಿದೆ. ಕೊಳ್ಳೇಗಾಲದಲ್ಲಿ ಶಾಸಕ ಎನ್‌.ಮಹೇಶ್ ಹಾಗೂ ಮುಖಂಡ ಜಿ.ಎನ್‌.ನಂಜುಂಡಸ್ವಾಮಿ ಅವರ ನಡುವಿನ ಕಲಹ ಬಹಿರಂಗಗೊಂಡಿದೆ. ಹನೂರಿನಲ್ಲಿ ಪರಿಮಳಾ ನಾಗಪ್ಪ ಹಾಗೂ ಬಿ.ವೆಂಕಟೇಶ್‌ ಬೆಂಬಲಿಗರ ಬಣ ರಾಜಕೀಯ ಸದ್ದು ಮಾಡುತ್ತಿದೆ. ಗುಂಡ್ಲುಪೇಟೆ ಕ್ಷೇತ್ರದಲ್ಲೂ ಶಾಸಕ ನಿರಂಜನಕುಮಾರ್‌ ವಿರುದ್ಧದ ಧ್ವನಿ ಪಕ್ಷದೊಳಗಿಂದಲೇ ಕೇಳಿ ಬಂದಿದೆ.

ಟಿಕೆಟ್‌ ಯಾರಿಗೆ?: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ( 4,913) ಸೋಲು ಕಂಡಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಆರಕ್ಕೂ ಹೆಚ್ಚು ಜನರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಪ್ರೊ.ಮಲ್ಲಿಕಾರ್ಜುನಪ್ಪ, ಎಂ.ರಾಮಚಂದ್ರ, ನಾಗಶ್ರೀ ಪ್ರತಾಪ್‌, ನಿಜಗುಣರಾಜು, ಅಮ್ಮನಪುರ ಮಲ್ಲೇಶ್‌, ಎ.ಆರ್.ಬಾಬು ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದರೆ ಇನ್ನೂ ಕೆಲವರು ತಾವೂ ಆಕಾಂಕ್ಷಿಗಳು ಎಂದು ಹೇಳಿಕೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೂ ಇಲ್ಲಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಅವರು ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಸಮಯದಲ್ಲಿ ಹೇಳಲಾಗುತ್ತಿತ್ತು. ಈಗ ಅದು ತೆರೆಮರೆಗೆ ಸರಿದಿದೆ. ಒಂದೆರಡು ತಿಂಗಳಿನಿಂದ, ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ಆಪ್ತರಾಗಿರುವ, ಕೆಆರ್‌ಐಡಿಎಲ್‌ ಅಧ್ಯಕ್ಷ ರುದ್ರೇಶ್‌ ಅವರು ಕ್ಷೇತ್ರದಾದ್ಯಂತ ಓಡಾಡುತ್ತಿದ್ದು, ಜನರನ್ನು ಭೇಟಿಯಾಗುತ್ತಿದ್ದಾರೆ. ಚುನಾವಣಾ ಟಿಕೆಟ್‌ ಮೇಲೆ ಕಣ್ಣಿಟ್ಟು ಅವರು ಜಿಲ್ಲೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ತಿಂಗಳ ಹಿಂದೆ ಆಕಾಂಕ್ಷಿಗಳ ಪೈಕಿ ನಾಲ್ವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ರುದ್ರೇಶ್‌ ವಿರುದ್ಧ ಆಕ್ರೋಶವನ್ನೂ ಹೊರಹಾಕಿದ್ದರು. ಹಾಗಿದ್ದರೂ ರುದ್ರೇಶ್‌ ಕ್ಷೇತ್ರ ಭೇಟಿ ಕಡಿಮೆಯಾಗಿಲ್ಲ. ವಿಜಯೇಂದ್ರ, ಮಲ್ಲಿಕಾರ್ಜುನಪ್ಪ ಅವರ ಹುಟ್ಟುಹಬ್ಬದ ನೆಪದಲ್ಲಿ ಶನಿವಾರ ಬೃಹತ್‌ ಆರೋಗ್ಯ ತಪಾಸಣಾ ಶಿಬಿರವನ್ನೂ ಅವರು ಹಮ್ಮಿಕೊಂಡಿದ್ದರು. ಜಿಲ್ಲೆಯ ಬಿಜೆಪಿ ಮುಖಂಡರು ಇದರಿಂದ ದೂರ ಉಳಿದಿದ್ದರು. ‘ಪಕ್ಷದ ಅಡಿಯಲ್ಲಿ ಕಾರ್ಯಕ್ರಮ ನಡೆಯದಿರುವುದರಿಂದ ಯಾರು ಭಾಗವಹಿಸಿಲ್ಲ’ ಎಂದು ಮುಖಂಡರು ಸಮಜಾಯಿಷಿ ನೀಡುತ್ತಿದ್ದಾರೆ.

‘ರುದ್ರೇಶ್‌ ಅವರು ಕ್ಷೇತ್ರ ಸಂಚಾರ ಮಾಡುತ್ತಿರುವುದು ಇಲ್ಲಿನ ಬಹುತೇಕ ಮುಖಂಡರಿಗೆ ಇಷ್ಟ ಇಲ್ಲ. ಬಹಿರಂಗವಾಗಿ ಅದನ್ನು ಯಾರೂ ಹೇಳಿಕೊಳ್ಳುತ್ತಿಲ್ಲ.ಸ್ಥಳೀಯ ಆಕಾಂಕ್ಷಿಗಳು ಬಹಿರಂಗವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಆಂತರಿಕವಾಗಿ ಯಾರೂ ಸೌಹಾರ್ದ ಸಂಬಂಧ ಹೊಂದಿಲ್ಲ’ ಎಂದು ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ.

ಕೊಳ್ಳೇಗಾಲದಲ್ಲಿ ಯಾರು?: ಎನ್‌.ಮಹೇಶ್‌ ಅವರು ಬಿಜೆಪಿ ಸೇರ್ಪಡೆಗೊಳ್ಳುವವರೆಗೂ ಕೊಳ್ಳೇಗಾಲ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿತ್ತು. ಅವರು ಸೇರುತ್ತಿದ್ದಂತೆಯೇ ಚಿತ್ರಣ ಬದಲಾಗಿದ್ದು, ನಗರಸಭಾ ಉಪಚುನಾವಣೆಯ ಫಲಿತಾಂಶದ ನೆಪದಲ್ಲಿ ಮಹೇಶ್‌ ಹಾಗೂ ಪ್ರಬಲ ಟಿಕೆಟ್‌ ಆಕಾಂಕ್ಷಿ ಜಿ.ಎನ್‌.ನಂಜುಂಡಸ್ವಾಮಿ ಅವರ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.

ಮುಂದಿನ ಚುನಾವಣೆಯಲ್ಲಿ ಮತ್ತೆ ಮಹೇಶ್‌ ಅವರನ್ನು ಶಾಸಕರಾನ್ನಾಗಿ ಆಯ್ಕೆ ಮಾಡಬೇಕು ಎಂದು ಬಹಳ ಹಿಂದೆ ಯಡಿಯೂರಪ್ಪ, ಇತ್ತೀಚೆಗೆ ಉಸ್ತುವಾರಿ ಸಚಿವ ಸೋಮಣ್ಣ ಹೇಳಿರುವುದು ನಂಜುಂಡಸ್ವಾಮಿ ಅವರಿಗೆ ಪಥ್ಯವಾಗಿಲ್ಲ. ಪಕ್ಷದ ರಾಜ್ಯದ ವರಿಷ್ಠರು ಕೂಡ ನಗರಸಭೆ ಫಲಿತಾಂಶದ ನೆಪದಲ್ಲಿ ಮಹೇಶ್‌ ಅವರನ್ನು ಹಾಡಿ ಹೊಗಳಿದ್ದಾರೆ.ನಂಜುಂಡಸ್ವಾಮಿ ಅವರು ಬಹಿರಂಗವಾಗಿ ಮಹೇಶ್‌ ವಿರುದ್ಧ ವಾಗ್ದಾಳಿ ನಡೆಸಿದ್ದರೂ ಮಹೇಶ್‌ ಅವರು ಪ್ರತಿಕ್ರಿಯಿಸುವುದಕ್ಕೆ ಹೋಗಿಲ್ಲ.

ಇದೇ ರೀತಿ ಮುಂದುವರಿದರೆ,ಚುನಾವಣೆಯ ಹೊತ್ತಿಗೆ ಇಬ್ಬರ ನಡುವಿನ ಕಂದಕ ಇನ್ನಷ್ಟು ಹೆಚ್ಚಾಗಲಿದ್ದು, ಇದು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕದಲ್ಲಿ ಪಕ್ಷದ ಕಾರ್ಯಕರ್ತರಿದ್ದಾರೆ.

ಹನೂರಿನಲ್ಲಿ ಬಣ ರಾಜಕೀಯ

ಹನೂರು ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್‌ ನಾಗಪ್ಪ ಅವರು3,513 ಮತಗಳಿಂದ ಸೋತಿದ್ದರು. ಈ ಬಾರಿಯೂ ಅವರು ಪಕ್ಷದಿಂದ ಟಿಕೆಟ್‌ ಬಯಸಿದ್ದಾರೆ.

ಬಿಜೆಪಿಯ ಒಬಿಸಿ ಸಮುದಾಯದ ಮುಖಂಡ ಬಿ.ವೆಂಕಟೇಶ್‌ ಅವರು ತಮ್ಮ ಸ್ವಯಂ ಸೇವಾ ಸಂಸ್ಥೆಯ ಮೂಲಕ ಕ್ಷೇತ್ರದಾದ್ಯಂತ ಸಾಮಾಜಿಕ ಸೇವಾ ಕಾರ್ಯ‌ಗಳನ್ನು ಕೈಗೊಂಡು ಜನರ ನಡುವೆ ಗುರುತಿಸಿಕೊಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲೂ ಪ್ರಯತ್ನ ಆರಂಭಿಸಿದ್ದಾರೆ.

ಮಾಜಿ ಶಾಸಕಿ ಪರಿಮಳಾ ನಾಗಪ್ಪ ಹಾಗೂ ವೆಂಕಟೇಶ್‌ ಅವರ ಬಣಗಳ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಇತ್ತೀಚೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ಮುಂಭಾಗವೇ ಇಬ್ಬರ ಕಡೆಯವರು ಪರಸ್ಪರ ವಾಗ್ವಾದಕ್ಕೆ ಇಳಿದಿದ್ದರು.

ಚುನಾವಣೆಯ ಸಮಯಕ್ಕೆ ಇದೇ ಪರಿಸ್ಥಿತಿ ಮುಂದುವರಿದರೆ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಧಕ್ಕೆಯಾಗಲಿದೆ ಎಂಬ ಕಳವಳವನ್ನು ನಿಷ್ಠಾವಂತ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.

ಗುಂಡ್ಲುಪೇಟೆಯಲ್ಲೂ ಒಗ್ಗಟ್ಟಿಲ್ಲ

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಸ್‌.ನಿರಂಜನಕುಮಾರ್‌ ಅವರು ಭರ್ಜರಿಯಾಗಿ ಗೆಲುವು ದಾಖಲಿಸಿ ಗುಂಡ್ಲುಪೇಟೆಯಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದರು. ಇತ್ತೀಚಿನವರೆಗೂ ಪಕ್ಷದಲ್ಲಿ ಅವರಿಗೆ ದೊಡ್ಡ ಮಟ್ಟಿನ ವಿರೋಧ ವ್ಯಕ್ತವಾಗಿರಲಿಲ್ಲ.

ಚಾಮುಲ್‌ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದ ಬಳಿಕ ಕ್ಷೇತ್ರದಲ್ಲಿ ಪಕ್ಷದ ಚಿತ್ರಣ ಕೊಂಚ ಬದಲಾಗಿದೆ.

ಮೈಸೂರು–ಚಾಮರಾನಗರ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಪಿ.ಸುನಿಲ್‌ ಅವರು ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ.

ಚಾಮುಲ್‌ ಚುನಾವಣೆ ಸಂದರ್ಭದಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಯಾಗಿ ತಮ್ಮನ್ನು ಆಯ್ಕೆ ಮಾಡದೇ ಇದ್ದುದಕ್ಕೆ ಅಸಮಾಧಾನಗೊಂಡಿದ್ದ ಸುನಿಲ್‌, ಶಾಸಕರಿಗೆ ಸೆಡ್ಡು ಹೊಡೆದು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಚಾಮುಲ್‌ ಅಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ಮಾತಿಗೆ ಮಣಿದು, ಪಕ್ಷ ಬೆಂಬಲಿತ ಅಭ್ಯರ್ಥಿಯನ್ನು (ನಾಗೇಂದ್ರ) ಬೆಂಬಲಿಸಿದ್ದರು.

‘ನಿರಂಜನಕುಮಾರ್‌ ಹಾಗೂ ಸುನಿಲ್‌ ನಡುವೆ ಉತ್ತಮ ಸಂಬಂಧವಿಲ್ಲ. ಚುನಾವಣೆಯ ಹೊತ್ತಿಗೆ ಸಮಸ್ಯೆ ಬಗೆಹರಿದರೆ ಪಕ್ಷಕ್ಕೆ ಒಳ್ಳೆಯದು. ಇಲ್ಲದಿದ್ದರೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಖಚಿತ’ ಎಂಬುದು ಅಲ್ಲಿನ ಕಾರ್ಯಕರ್ತರ ಮಾತು.

---

ಟಿಕೆಟ್‌ಗೆ ಆಕಾಂಕ್ಷಿಗಳು ಇರುವುದು ಸಹಜ. ಟಿಕೆಟ್‌ ಕೇಳಲು ಎಲ್ಲರಿಗೂ ಹಕ್ಕಿದೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ
ಮಂಗಲ ಶಿವಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT