ಮಂಗಳವಾರ, ಡಿಸೆಂಬರ್ 1, 2020
22 °C
ಯುಟ್ಯೂಬ್‌ ಚಾನೆಲ್‌ ನೋಡದ ಹೆಚ್ಚು ವಿದ್ಯಾರ್ಥಿಗಳು

ದ್ವಿತೀಯ ಪಿಯು: ನಿರೀಕ್ಷೆ ತಲುಪದ ಆನ್‌ಲೈನ್‌ ಪಾಠ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಕಾರಣಕ್ಕೆ ಪಿಯು ಕಾಲೇಜು ಆರಂಭವಾಗದೇ ಇರುವುದರಿಂದ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸುವುದಕ್ಕಾಗಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಆರಂಭಿಸಿದ್ದ ಯುಟ್ಯೂಬ್‌ ಚಾನೆಲ್‌ ಅಧಿಕಾರಿಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತಲುಪಿಲ್ಲ. 

ಆಗಸ್ಟ್‌ 19ರಂದು ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಯುಟ್ಯೂಬ್‌ ಚಾನೆಲ್‌ (DDPUE Chamarajanagar) ಆರಂಭಿಸಿತ್ತು.

ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2020–21ನೇ ಶೈಕ್ಷಣಿಕ ಸಾಲಿಗೆ 5,334 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ಸೇರ್ಪಡೆಗೊಂಡಿದ್ದಾರೆ. ಯುಟ್ಯೂಬ್‌ ಚಾನೆಲ್‌ ಅನ್ನು ಇದುವರೆಗೆ 994 ಮಂದಿ ಮಾತ್ರ ಸಬ್‌ಸ್ಕ್ರೈಬ್‌ ಮಾಡಿದ್ದಾರೆ.  

ವಿವಿಧ ವಿಷಯಗಳ ಉಪನ್ಯಾಸಕರು 35ರಿಂದ 55 ನಿಮಿಷಗಳ ಕಾಲ ಪಾಠ ಮಾಡಿದ ವಿಡಿಯೊಗಳನ್ನು ಈ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಇಲಾಖೆಯು ಇದುವರೆಗೆ, ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ವಿವಿಧ ವಿಷಯಗಳ 53 ವಿಡಿಯೊಗಳನ್ನು ಅಪ್‌ಲೋಡ್‌ ಮಾಡಿದೆ. ‌ಕೆಲವು ನಿರ್ದಿಷ್ಟ ವಿಷಯಗಳ ವಿಡಿಯೊ ಪಾಠಗಳನ್ನು ಮಾತ್ರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ಇನ್ನೂ ಕೆಲವು ವಿಡಿಯೊಗಳನ್ನು ಬೆರಳೆಣಿಕೆಯಷ್ಟು ಮಂದಿ ಮಾತ್ರ ವೀಕ್ಷಿಸಿದ್ದಾರೆ.

ವಾಣಿಜ್ಯ ವಿಷಯದ ಅಕೌಂಟೆನ್ಸಿ, ಭೂಗರ್ಭ ವಿಜ್ಞಾನ, ಕನ್ನಡ ಮುಂತಾದ ಕೆಲವೇ ಕೆಲವು ವಿಷಯಗಳ ಪಾಠವನ್ನು 1,300ರಿಂದ 1,600 ಮಂದಿ ವೀಕ್ಷಣೆ ಮಾಡಿದ್ದರೆ, ಉಳಿದ ವಿಷಯಗಳ ಪಾಠಗಳನ್ನು 300ರಿಂದ 600 ಮಂದಿಯಷ್ಟೆ ವೀಕ್ಷಣೆ ಮಾಡಿದ್ದಾರೆ. 

ಎಲ್ಲ ವಿದ್ಯಾರ್ಥಿಗಳು ಯುಟ್ಯೂಬ್‌ ಚಾನೆಲ್‌ ನೋಡುತ್ತಿಲ್ಲ ಎಂಬುದನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಎಸ್‌.ಕೃಷ್ಣಮೂರ್ತಿ ಒಪ್ಪಿಕೊಳ್ಳುತ್ತಾರೆ. 

‘ವಿದ್ಯಾರ್ಥಿಗಳು ಚಾನೆಲ್‌ ಅನ್ನು ಸಬ್‌ಸ್ಕ್ರೈಬ್‌ ಮಾಡಿ, ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡುವ ಪಾಠಗಳನ್ನು ನೋಡಬೇಕು ಎಂದು ಎಲ್ಲ ಕಾಲೇಜುಗಳಿಗೆ ಸೂಚನೆ ನೋಡಲಾಗಿದೆ. ಕೆಲವು ಮಕ್ಕಳು ನೋಡುತ್ತಿದ್ದಾರೆ. ಕೋವಿಡ್‌ ಕಾಲದಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂದು ನಾವು ಪ್ರಯತ್ನ ಮಾಡಿದ್ದೇವೆ. ಬೇರೆ ಜಿಲ್ಲೆಗಳಲ್ಲಿ ಇಂತಹ ಪ್ರಯತ್ನ ಆಗಿಲ್ಲ. ನಮಗೂ ಇದು ಹೊಸದು. ಸ್ವಲ್ಪ ಮಟ್ಟಿಗೆ ಯಶಸ್ಸು ಗಳಿಸಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಾವು ಕಂಡುಕೊಂಡಂತೆ ಜಿಲ್ಲೆಯಲ್ಲಿರುವ ಒಟ್ಟು ಪಿಯುಸಿ ವಿದ್ಯಾರ್ಥಿಗಳ ಪೈಕಿ ಶೇ 40ರಷ್ಟು ಮಂದಿಯ ಬಳಿ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗಳಿಲ್ಲ. ಹಾಗಾಗಿ ಅವರು ವೀಕ್ಷಣೆ ಮಾಡುವುದಕ್ಕೆ ಅವಕಾಶವೇ ಇಲ್ಲ’ ಎಂದು ಅವರು ಹೇಳಿದರು. 

ಹಂಚಿ ಹೋದ ವಿದ್ಯಾರ್ಥಿಗಳು: ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಯುಟ್ಯೂಬ್‌ ಚಾನೆಲ್‌ ನೋಡುವ ಸಾಧ್ಯತೆ ಕಡಿಮೆ ಎಂದು ಹೇಳುತ್ತಾರೆ ಆನ್‌ಲೈನ್‌ ತರಗತಿಗಳ ನೋಡೆಲ್‌ ಅಧಿಕಾರಿ ಷಡಕ್ಷರಿ ಅವರು. 

‘ರಾಜ್ಯ ಮಟ್ಟದಲ್ಲಿ ಒಂದು ಚಾನೆಲ್‌ ಇದೆ. ಖಾಸಗಿ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಆನ್‌ಲೈನ್‌ ತರಗತಿಗಳನ್ನು ಮಾಡುತ್ತಿವೆ. ಅಲ್ಲಿನ ವಿದ್ಯಾರ್ಥಿಗಳು ಆ ತರಗತಿಗಳಿಗೆ ಕೂರುವರೇ ವಿನಾ, ನಮ್ಮ ಚಾನೆಲ್‌ ನೋಡುವ ಸಾಧ್ಯತೆ ಕಡಿಮೆ. ಹೀಗಾಗಿ ಆನ್‌ಲೈನ್‌ ತರತಿಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಂಚಿಹೋಗಿದ್ದಾರೆ’ ಎಂದು ಅವರು ಹೇಳಿದರು. 

‘ನಾವು ಕಾಲೇಜುಗಳ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಯುಟ್ಯೂಬ್ ಚಾನೆಲ್‌ ಆರಂಭಿಸಿದ್ದೇವೆ. ಭೌಗೋಳಿಕ ವಿಜ್ಞಾನ, ಅಕೌಂಟೆನ್ಸಿ, ಕನ್ನಡ ವಿಷಯಗಳ ಪಾಠವನ್ನು ಹೆಚ್ಚಿನ ವಿದ್ಯಾರ್ಥಿಗಳು ಕೇಳಿದ್ದಾರೆ. ನಮ್ಮ ನಿರೀಕ್ಷೆಯ ಮಟ್ಟಿಗೆ ಯುಟ್ಯೂಬ್‌ ಚಾನೆಲ್‌ ತಲುಪಿಲ್ಲ ನಿಜ. ಆದರೆ, ನೂರಾರು ವಿದ್ಯಾರ್ಥಿಗಳು ಅದರ ಅನುಕೂಲ ಪಡೆಯುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಯತ್ನಕ್ಕೆ ಶ್ಲಾಘನೆ

ಪದವಿಪೂರ್ವ ಶಿಕ್ಷಣ ಇಲಾಖೆ ರಾಜ್ಯ ಮಟ್ಟದಲ್ಲಿ ಯುಟ್ಯೂಬ್‌ ಚಾನೆಲ್‌ ಮಾಡಿದೆ. ದಕ್ಷಿಣ ಕನ್ನಡದ ಪಿಯು ಇಲಾಖೆ ಸ್ಥಳೀಯ ಮಟ್ಟದಲ್ಲಿ ಯುಟ್ಯೂಬ್‌ ಚಾನೆಲ್‌ ಮಾಡಿದ್ದು, ಈಗ ಅದನ್ನು ರಾಜ್ಯಮಟ್ಟಕ್ಕೆ ಸೇರ್ಪಡೆಗೊಳಿಸಲಾಗಿದೆ. ಶಿವಮೊಗ್ಗದ ಪಿಯು ಇಲಾಖೆಯು ಇಂಗ್ಲಿಷ್‌ ಉಪನ್ಯಾಸಕರ ವೇದಿಕೆಯ ಯುಟ್ಯೂಬ್‌ ಚಾನೆಲ್‌ ಮೂಲಕ ಇಂಗ್ಲಿಷ್‌ ಪಾಠ ಮಾಡುತ್ತಿದೆ. ಅದು ಬಿಟ್ಟರೆ ಬೇರೆ ಎಲ್ಲೂ ಪ್ರತ್ಯೇಕ ಯುಟ್ಯೂಬ್‌ ಚಾನೆಲ್‌ ಪ್ರಯತ್ನ ನಡೆದಿಲ್ಲ.

ಹಾಗಾಗಿ, ಜಿಲ್ಲೆಯ ಮಕ್ಕಳನ್ನು ಗುರಿಯಾಗಿಸಿಕೊಂಡು ಜಿಲ್ಲಾ ಪಿಯು ಇಲಾಖೆ ಮಾಡಿರುವ ಚಾನೆಲ್‌ಗೆ ಇಲಾಖೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇತರರು ಇದೇ ಮಾದರಿ ಪಾಲಿಸುವಂತೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಭೂಗರ್ಭ ವಿಜ್ಞಾನ ಪಾಠ ರಾಜ್ಯಕ್ಕೆ

ರಾಜ್ಯ ಮಟ್ಟದ ಯುಟ್ಯೂಬ್‌ ಚಾನೆಲ್‌ಗಾಗಿ ಭೂಗರ್ಭ ವಿಜ್ಞಾನ ವಿಷಯದ ಪಾಠಗಳ ವಿಡಿಯೊವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಇಲಾಖೆಯು ಜಿಲ್ಲೆಗೆ ನೀಡಿದೆ. 

ಇದುವರೆಗೆ 20 ವಿಡಿಯೊಗಳನ್ನು ಕಳುಹಿಸಲಾಗಿದ್ದು, ಎಂಟು ವಿಡಿಯೊಗಳು ಪ್ರಕಟಗೊಂಡಿವೆ ಎಂದು ಷಡಕ್ಷರಿ ಅವರು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.