ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭಾ ಬಜೆಟ್: ಸಂಪನ್ಮೂಲ ಕ್ರೋಡೀಕರಣ, ಸೌಕರ್ಯಕ್ಕೆ ಒತ್ತು ನೀಡಿ; ಸದಸ್ಯರ ಒತ್ತಾಯ

Published 16 ಫೆಬ್ರುವರಿ 2024, 2:50 IST
Last Updated 16 ಫೆಬ್ರುವರಿ 2024, 2:50 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಬರುವ ನಗರಸಭೆ ಬಜೆಟ್‌ನಲ್ಲಿ ಸಂಪನ್ಮೂಲ ಕ್ರೋಡೀಕರಣ ಮತ್ತು ನಗರವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಹೆಚ್ಚು ಒತ್ತು ನೀಡಬೇಕು ಎಂದು ಸದಸ್ಯರು ಆಯುಕ್ತ ರಾಮದಾಸ್‌ ಅವರನ್ನು ಒತ್ತಾಯಿಸಿದರು. 

ನಗರದ ನಗರಸಭಾ ಸಭಾಂಗಣದಲ್ಲಿ ನಡೆದ 2024–25ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ನಗರಸಭಾ ಸದಸ್ಯರು, ಹಲವು ಸಲಹೆಗಳನ್ನು, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 

‘ರಾಜ್ಯ ಸರ್ಕಾರದ ಅನುದಾನ ಬರುವುದು ಒಂದು ಕಡೆಯಾದರೆ, ನಗರಸಭೆಯೇ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಮುಂದಾಗಬೇಕು. ಇದಕ್ಕಾಗಿ ತೆರಿಗೆ ಸಂಗ್ರಹವನ್ನು ಕಟ್ಟು ನಿಟ್ಟಾಗಿ ಮಾಡಬೇಕು ಎಂದು ಹೇಳಿದರು. ಉದ್ದಿಮೆ ನವೀಕರಣ, ನಗರಸಭೆ ಕಟ್ಟಡಗಳ ಬಾಡಿಗೆ ವಸೂಲಾತಿಗೆ ಗಮನ ಹರಿಸಬೇಕು. ಬಾಡಿಗೆ ನೀಡದವರ ಅಥವಾ ಶುಲ್ಕ ಪಾವತಿಸದರ ಪರವಾನಗಿಯನ್ನು ನಿರ್ಧಾಕ್ಷಿಣ್ಯವಾಗಿ ರದ್ದು ಪಡಿಸಬೇಕು’ ಎಂದು ಸದಸ್ಯರು ಪ್ರಸ್ತಾಪಿಸಿದರು. 

‘ನಗರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಅನೈರ್ಮಲ್ಯ, ಬೀದಿ ದೀಪಗಳ ಸಮಸ್ಯೆ ಹೆಚ್ಚಿದ್ದು, ಜನರು ಸದಸ್ಯರು, ಅಧಿಕಾರಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹಾಗಾಗಿ ಬಜೆಟ್‌ನಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಹೆಚ್ಚು ಅನುದಾನ ಮೀಸಲಿಡಬೇಕು’ ಎಂದು ಸಲಹೆ ನೀಡಿದರು. 

'ನಗರಸಭಾ ಕಚೇರಿಯಲ್ಲಿ ಮದ್ಯವರ್ತಿಗಳ ಹಾವಳಿ ಜಾಸ್ತಿಯಾಗಿದ್ದು, ಅವರಿಗೆ ಅವಕಾಶ ನೀಡದೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಇ–ಸ್ವತ್ತು, ಖಾತೆ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು’ ಎಂದರು. 

‘ಸಾರ್ವಜನಿಕ ಶೌಚಾಲಯ ನಿರ್ಮಾಣ, ನಿರ್ವಹಣೆ, ಉದ್ಯಾನಗಳ ಸ್ಚಚ್ಚತೆ, ಅಭಿವೃದ್ಧಿಗೆ ಗಮನಹರಿಸಬೇಕು. ಪ್ರತಿ ವಾರ್ಡಿಗೂ ನಾಮಫಲಕ ಅಳವಡಿಕೆ, ಮಹನೀಯರ ಪ್ರತಿಮೆಗಳ ನಿರ್ಮಣ, ನಗರದ ಸೌಂದರ್ಯಕ್ಕೆ ಅನುದಾನ ನೀಡಬೇಕು’ ಎಂದು ಸದಸ್ಯರು ಒತ್ತಾಯಿಸಿದರು.  

ಸದಸ್ಯರಾದ ಸುದರ್ಶನಗೌಡ, ರಾಘವೇಂದ್ರ, ಚಿನ್ನಮ್ಮ, ನೀಲಮ್ಮ, ಕಲಾವತಿ, ಬಸವಣ್ಣ, ಕುಮುದಾ, ಭಾಗ್ಯಮ್ಮ, ಸುಧಾ, ಆಶಾ, ಮಹೇಶ್, ಮನೋಜ್‌ಪಟೇಲ್, ಅಬ್ರಾರ್‌, ಶಿವರಾಜ್, ಗಾಯಿತ್ರಿ, ಮಮತಾ ಇತರರು ಪಾಲ್ಗೊಂಡು ಸಲಹೆ ನೀಡಿದರು 

ಆಯುಕ್ತ ರಾಮದಾಸ್ ಮಾತನಾಡಿ,‘ಸದಸ್ಯರ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದ.  ನಗರಸಭಾ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಸಲಹೆ ಪಡೆದು ಬಜೆಟ್‌ ದಿನಾಂಕ ನಿಗದಿಪಡಿಸಲಾಗುವುದು’ ಎಂದರು. 

ಅಧಿಕಾರಿ ವರ್ಗ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT