ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷ ಹುಲಿಗಣತಿ: ಸಿದ್ಧತೆ ಆರಂಭ

ಬಂಡೀಪುರ: ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತರಬೇತಿ ಕಾರ್ಯಾಗಾರ
Last Updated 8 ಆಗಸ್ಟ್ 2021, 15:11 IST
ಅಕ್ಷರ ಗಾತ್ರ

ಚಾಮರಾಜನಗರ: 2022ರಲ್ಲಿ ದೇಶದಾದ್ಯಂತ ನಡೆಯಲಿರುವ ಹುಲಿ ಗಣತಿಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಸಿದ್ಧತೆ ಆರಂಭಿಸಿದ್ದು, ಗಣತಿಯ ಪ್ರಕ್ರಿಯೆಯನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಎನ್‌ಟಿಸಿಎ ತಜ್ಞರು ವಿವಿಧ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಗೆ ತರಬೇತಿ ನೀಡಿದ್ದಾರೆ.

ದೇಶದ ದಕ್ಷಿಣ ವಲಯದ ಎಲ್ಲ ರಾಜ್ಯಗಳ ಹುಲಿ ಸಂರಕ್ಷಿತ ಪ್ರದೇಶಗಳ ಆಯ್ದ ಸಿಬ್ಬಂದಿಗೆ ಬಂಡೀಪುರಕ್ಕೆ ಸಮೀಪದಲ್ಲಿರುವ, ನೆರೆಯ ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ದಿನಗಳ ಕಾಲ ತರಬೇತಿ ಕಾರ್ಯಾಗಾರ ನಡೆಸಲಾಗಿದ್ದು, ಭಾನುವಾರ ಮುಕ್ತಾಯ ಕಂಡಿದೆ.

ಆ.6ರಿಂದ 8ರವರೆಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳ ಸಿಬ್ಬಂದಿ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಗೋವಾ ರಾಜ್ಯಗಳ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದಾರೆ. ಎನ್‌ಟಿಸಿಯ ಕರ್ನಾಟಕ ವಿಭಾಗದ ಐಜಿ ಮುರಳಿ ಹಾಗೂ ದೆಹಲಿಯ ಡಿಐಜಿ ರಾಜೇಂದ್ರ ಗಾರ್ವಾರ್ಡ್‌ ಅವರು ಕಾರ್ಯಾಗಾರದಲ್ಲಿ ಭಾಗವಹಿಸಿ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದ್ದಾರೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಾದ್ಯಂತ ಹುಲಿಗಣತಿ ನಡೆಯುತ್ತದೆ. ಈ ಹಿಂದೆ 2018ರಲ್ಲಿ ನಡೆದಿತ್ತು. ಆಗ 2,967 ಹುಲಿಗಳ ಲೆಕ್ಕ ಸಿಕ್ಕಿತ್ತು.

ಆ್ಯಪ್‌ ಮೂಲಕ ಗಣತಿ:ಈ ಬಾರಿ ಪೂರ್ಣ ಪ್ರಮಾಣದಲ್ಲಿ ಎಂ–ಸ್ಟ್ರೈಪ್ಸ್‌(M-STrIPES– ಮಾನಿಟರಿಂಗ್ ಸಿಸ್ಟಮ್ ಫಾರ್‌ ಟೈಗರ್ಸ್‌: ಇಂಟೆನ್ಸಿವ್‌ ಪ್ರೊಟೆಕ್ಷನ್‌ ಹಾಗೂ ಇಕಾಲಾಜಿಕಲ್‌ ಸ್ಟೇಟಸ್‌’)‌ ಎಂಬ ಆ್ಯಪ್ ಮೂಲಕ ಗಣತಿ ನಡೆಯಲಿದೆ. ಹಾಗಾಗಿ, ತಜ್ಞರು ಮೊಬೈಲ್‌ ಆ್ಯಪ್‌ ಬಳಸಿ ಹುಲಿಗಳ ಗಣತಿ ಮಾಡುವ ಕ್ರಮವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟಿದ್ದಾರೆ.

‘ಕಳೆದ ಬಾರಿ ಸ್ವಲ್ಪ ಭಾಗ ಆ್ಯಪ್‌ ಮೂಲಕ ಹಾಗೂ ಉಳಿದ ಭಾಗವನ್ನು ಬರವಣಿಗೆ ಮೂಲಕ ದಾಖಲಿಸಿ ಗಣತಿ ನಡೆಸಲಾಗಿತ್ತು. ಈ ಬಾರಿ ಆ್ಯಪ್‌ ಮೂಲಕವೇ ಗಣತಿ ಕಾರ್ಯ ನಡೆಯಲಿದೆ’ ಎಂದು ಚಾಮರಾಜನಗರ ಪ್ರಾದೇಶಿಕ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಮನೋಜ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆನೆ, ಪರಭಕ್ಷಕ, ಬಲಿಪ್ರಾಣಿಗಳ ಗಣತಿ: ಹುಲಿ ಗಣತಿಯ ಜೊತೆಗೆ ಇತರ ಪರಭಕ್ಷಕ ಪ್ರಾಣಿಗಳು, ಆನೆ, ಬಲಿ ಪ್ರಾಣಿಗಳ ಗಣತಿಯೂ ಈ ಬಾರಿ ನಡೆಯಲಿದೆ.

‘ಪ್ರತಿ ರಕ್ಷಿತಾರಣ್ಯದಲ್ಲಿರುವ ಬೀಟ್‌ ಮಟ್ಟದಲ್ಲಿ ಯಾವುದೆಲ್ಲ ಪ್ರಾಣಿಗಳು ಇವೆ ಎಂಬುದನ್ನು ಗಣತಿಯ ವೇಳೆ ಗುರುತಿಸಲಾಗುತ್ತದೆ. ಪ್ರತಿಯೊಂದು ಪ್ರಾಣಿಯನ್ನೂ ನೋಡಲೇ ಬೇಕೆಂದಿಲ್ಲ. ಅವುಗಳ ಹೆಜ್ಜೆಗುರುತು, ಮಲ.. ಇನ್ನಿತರ ಕುರುಹುಗಳನ್ನು ಗುರುತಿಸಿ ವಿವರ ದಾಖಲಿಸಲಾಗುತ್ತದೆ’ ಎಂದು ಮನೋಜ್‌ ಕುಮಾರ್‌ ಅವರು ವಿವರಿಸಿದರು.

ತರಬೇತಿ ಪಡೆದವರಿಂದ ಇತರರಿಗೆ ಮಾರ್ಗದರ್ಶನ

ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಕಾರ್ಯಾಗಾರದಲ್ಲಿ ಪ್ರತಿ ಹುಲಿ ಸಂರಕ್ಷಿತ ಪ್ರದೇಶದಿಂದ ತಲಾ ನಾಲ್ವರು ಸಿಬ್ಬಂದಿ ಮಾತ್ರ ಭಾಗಿಯಾಗಿದ್ದಾರೆ. ಇದರಲ್ಲಿ ಪಾಲ್ಗೊಂಡವರು ಸಂರಕ್ಷಿತ ಪ್ರದೇಶ ಹಾಗೂ ಇತರ ರಕ್ಷಿತಾರಣ್ಯಗಳ ಸಿಬ್ಬಂದಿಗೆ ಗಣತಿಯ ಬಗ್ಗೆ ತರಬೇತಿ ನೀಡಲಿದ್ದಾರೆ.

‘ನಮ್ಮ ಜಿಲ್ಲೆಯಿಂದ ಬಿಆರ್‌ಟಿ ಹಾಗೂ ಬಂಡೀಪುರದಿಂದ ಎಂಟು ಸಿಬ್ಬಂದಿ ಗಣತಿ ಮಾಡುವ ವಿಧಾನ ಕಲಿತಿದ್ದಾರೆ. ಹಿರಿಯ ಅಧಿಕಾರಿಗಳೂ ಪಾಲ್ಗೊಂಡಿದ್ದಾರೆ. ಮುಂದೆ ಇವರು ಇತರ ಸಿಬ್ಬಂದಿಗೆ ಅಲ್ಲಿ ಕಲಿತಿರುವುದನ್ನು ತಿಳಿಸಲಿದ್ದಾರೆ. ಹುಲಿ ಗಣತಿಗೆ ಸಂಬಂಧಿಸಿದಂತೆ ಇದು ಆರಂಭಿಕ ಹೆಜ್ಜೆಯಷ್ಟೇ. ಎಲ್ಲ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ತಯಾರು ಮಾಡುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ದೇಶದಾದ್ಯಂತ ಈ ಪ್ರಕ್ರಿಯೆ ಈಗ ನಡೆಯುತ್ತಿದೆ’ ಎಂದು ಮನೋಜ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

---

ಮೂರು ದಿನಗಳ ಕಾಲ ನಡೆದ ತರಬೇತಿಯಲ್ಲಿ ನಮ್ಮ ಸಿಬ್ಬಂದಿಯೂ ಭಾಗವಹಿಸಿದ್ದಾರೆ. ಅವರು ಉಳಿದವರಿಗೆ ತರಬೇತಿ ನೀಡಲಿದ್ದಾರೆ

-ಡಾ.ಜಿ.ಸಂತೋಷ್‌ಕುಮಾರ್‌, ಬಿಆರ್‌ಟಿ ಡಿಸಿಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT