ಬುಧವಾರ, ಆಗಸ್ಟ್ 10, 2022
25 °C
ಒಂಬತ್ತು ತಿಂಗಳು ಕಳೆದರೂ ಪಾವತಿಯಾಗದ ಹಣ, ಅನಗತ್ಯ ವಿಳಂಬದ ಆರೋಪ

ರಾಷ್ಟ್ರಪತಿ ಭೇಟಿ: ₹ 1.84 ಕೋಟಿ ಬಿಲ್‌ ಬಾಕಿ!

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ಬೋಧನಾ ಆಸ್ಪತ್ರೆಯ ಉದ್ಘಾಟನೆಗಾಗಿ ರಾಷ್ಟ್ರಪತಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಹಾರ, ಶಾಮಿಯಾನ ಸೇರಿದಂತೆ ಇತರ ವ್ಯವಸ್ಥೆಗಳನ್ನು ಮಾಡಿದ್ದ ಸಂಸ್ಥೆಗಳಿಗೆ ಇನ್ನೂ ಬಿಲ್‌ ಪಾವತಿಯಾಗಿಲ್ಲ!

2021ರ ಅಕ್ಟೋಬರ್‌ 7ರಂದು ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಗರಕ್ಕೂ ಬಂದಿದ್ದ ಅವರು 450 ಹಾಸಿಗೆ ಸಾಮರ್ಥ್ಯದ ಸಿಮ್ಸ್‌ ಬೋಧನಾ ಆಸ್ಪತ್ರೆಯನ್ನೂ ಉದ್ಘಾಟಿಸಿದ್ದರು.

ಈ ಸಂದರ್ಭದಲ್ಲಿ ಆಹಾರ ಪೂರೈಕೆ, ಶಾಮಿಯಾನ, ಧ್ವನಿ, ಬೆಳಕಿನ ವ್ಯವಸ್ಥೆ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಿದ ವಿವಿಧ ಸಂಸ್ಥೆಗಳ ಬಿಲ್‌ ₹1.84 ಕೋಟಿ ಆಗಿತ್ತು.

ಕಾರ್ಯಕ್ರಮ ನಡೆದು 9 ತಿಂಗಳು ಕಳೆದರೂ, ಪಾವತಿಯಾಗಿಲ್ಲ. ಸಂಸ್ಥೆಗಳು ತಮ್ಮ ಕೈಯಿಂದ ದುಡ್ಡು ಹಾಕಿ ವ್ಯವಸ್ಥೆ ಮಾಡಿದ್ದವರು ಬಿಲ್‌ ವಸೂಲಾತಿಗಾಗಿ ಹರಸಾಹಸ ಪಡುತ್ತಿವೆ. 

‘ಬಿಲ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿದ್ದು, ಶೀಘ್ರದಲ್ಲಿ ಪಾವತಿಯಾಗಲಿದೆ ಎಂದು ವೈದ್ಯಕೀಯ ಕಾಲೇಜಿನ ಆಡಳಿತ ಹಲವು ತಿಂಗಳುಗಳಿಂದ ಹೇಳುತ್ತಲೇ ಬಂದಿದೆ. ಆದರೆ, ಇನ್ನೂ ಹಣ ಸಿಕ್ಕಿಲ್ಲ. ಕೇಳಿದಾಗಲೆಲ್ಲ ಕೇವಲ ಭರವಸೆ ಮಾತ್ರ ಸಿಗುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸಂಸ್ಥೆಯೊಂದರ ಪ್ರತಿನಿಧಿಯೊಬ್ಬರು ‌‘ಪ್ರಜಾವಾಣಿ’ಗೆ ತಿಳಿಸಿದರು.    

ಉದ್ಘಾಟನಾ ಕಾರ್ಯಕ್ರಮದ ದಿನದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಹಾಗೂ ತಂಡಕ್ಕೆ ಆಹಾರ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಮೈಸೂರಿನ ಒಂದು ಸಂಸ್ಥೆಗೆ ಮತ್ತು ಭದ್ರತಾ ಸಿಬ್ಬಂದಿ, ಗಣ್ಯರು ಹಾಗೂ ಅತಿಥಿಗಳಿಗೆ ಆಹಾರ ಪೂರೈಸಲು ಇನ್ನೊಂದು ಸಂಸ್ಥೆಗೆ ವಹಿಸಲಾಗಿತ್ತು ಎಂದು ವೈದ್ಯಕೀಯ ಕಾಲೇಜಿನ ಮೂಲಗಳು ತಿಳಿಸಿವೆ. 

ರಾಷ್ಟ್ರಪತಿ ಹಾಗೂ ಅವರ ಪರಿವಾರದವರಿಗೆ ಆಹಾರ ಪೂರೈಸಿದ್ದ ಸಂಸ್ಥೆಗೆ ₹12.5 ಲಕ್ಷ ಹಾಗೂ ಇನ್ನೊಂದು ಸಂಸ್ಥೆಗೆ ₹8.56 ಲಕ್ಷ ಬಿಲ್‌ ಪಾವತಿಯಾಗಬೇಕಿದೆ. ಅದೇ ರೀತಿ, ಶಾಮಿಯಾನ ಬೆಳಕು, ಧ್ವನಿವರ್ಧಕ ವ್ಯವಸ್ಥೆ ಮಾಡಿದ್ದ ಸಂಸ್ಥೆಗಳಿಗೂ ಬಿಲ್‌ ಪಾವತಿಯಾಗಿಲ್ಲ. 

‘ಕೋವಿಡ್‌ನಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದೇವೆ. ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಬೇಗ ಪಾವತಿಯಾಗುವ ನಿರೀಕ್ಷೆಯಲ್ಲಿ ಒಪ್ಪಿಕೊಂಡಿದ್ದೆವು. ಒಂಬತ್ತು ತಿಂಗಳಿಂದ ಹಣ ಬಾರದೆ ನಮ್ಮ ವ್ಯವಹಾರಕ್ಕೆ ತೊಂದರೆಯಾಗಿದೆ. ವೈದ್ಯಕೀಯ ಕಾಲೇಜಿನ ಆಡಳಿತದವರು, ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳತ್ತ ಕೈ ತೋರಿಸುತ್ತಿದ್ದಾರೆ’ ಎಂದು ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದರು.  

‘ಯಾವ ಕಾರಣಕ್ಕೆ ಹಣ ಬಿಡುಗಡೆ ಮಾಡಲು ಮೀನ ಮೇಷ ಎಣಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಕಾರಣವನ್ನೂ ಹೇಳುತ್ತಿಲ್ಲ. ಆದರೆ, ಬಿಲ್‌ ಮಾತ್ರ ಪಾವತಿಯಾಗುತ್ತಿಲ್ಲ’ ಎಂದು ಅವರು ತಿಳಿಸಿದರು. 

ಶೀಘ್ರ ಪಾವತಿ: ಡಾ.ಸಂಜೀವ್‌
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಮ್ಸ್‌ನ ಡೀನ್‌ ಹಾಗೂ ನಿರ್ದೇಶಕ ಡಾ.ಡಿ.ಎಂ.ಸಂಜೀವ್‌ ಅವರು, ‘ಬಿಲ್‌ ಪಾವತಿಗಾಗಿ ಪ್ರಯತ್ನ ನಡೆಸುತ್ತಲೇ ಇದ್ದೇನೆ. ರಾಜ್ಯ ಮಟ್ಟದಿಂದ ಹಣ ಬಿಡುಗಡೆಯಾಗಬೇಕು. ಬಿಲ್‌ ಪಾವತಿಸುವ ಕಡತಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಸಹಿ ಹಾಕಿದ್ದಾರೆ. ಶೀಘ್ರವಾಗಿ ಎಲ್ಲ ಬಿಲ್‌ ಪಾವತಿಯಾಗಲಿದೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು