ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಸೋಂಕಿತನ ಸಂಪರ್ಕಿತರ ವರದಿ ನೆಗೆಟಿವ್‌

ದೂರವಾದ ಜಿಲ್ಲೆಯ ಆತಂಕ, 26 ಮಂದಿ ಮನೆಗೆ, ಮತ್ತೊಮ್ಮೆ ಪರೀಕ್ಷೆಗೆ ಚಿಂತನೆ
Last Updated 15 ಜೂನ್ 2020, 15:20 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಬೈನಿಂದ ಬಂದು, ಜಿಲ್ಲೆಯಲ್ಲಿ ಕೋವಿಡ್‌–19 ದೃಢಪಟ್ಟಿದ್ದ ವೈದ್ಯಕೀಯ ವಿದ್ಯಾರ್ಥಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ ಮೂವರು ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ 23 ಮಂದಿಯ ಗಂಟಲ ದ್ರವಗಳ ಮಾದರಿ ಪರೀಕ್ಷಾ ವರದಿ ಹೊರಬಿದ್ದಿದ್ದು, ಎಲ್ಲವೂ ನೆಗೆಟಿವ್‌ ಬಂದಿದೆ. ಇದರಿಂದಾಗಿ ಜಿಲ್ಲೆಯ‌ಲ್ಲಿ ಆವರಿಸಿದ್ದ ಕೋವಿಡ್‌–19 ಆತಂಕ ಕರಗಿದೆ.

ವೈದ್ಯಕೀಯ ವಿದ್ಯಾರ್ಥಿಯ ತಾಯಿ, ಅಣ್ಣ ಹಾಗೂ ಮಾವ ನೇರ ಸಂಪರ್ಕ ಹೊಂದಿದ್ದರು. ಮಾವನ ಕುಟುಂಬದ ಸದಸ್ಯರು, ಅವರ ಮನೆಯ ಎದುರಿನವರು ಹಾಗೂ ಮುಂಬೈನಿಂದ ಬಂದವರನ್ನು ಮೊದಲು ಇರಿಸಲಾಗಿದ್ದ ಹಾಸ್ಟೆಲ್‌ನಲ್ಲಿ ಇದ್ದವರು ಪರೋಕ್ಷ ಸಂಪರ್ಕಕ್ಕೆ ಬಂದಿದ್ದರು.

ಇವರನ್ನೆಲ್ಲ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಏಳು ದಿನಗಳ ನಂತರ ಗಂಟಲದ್ರವಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಎಲ್ಲರ ವರದಿ ನೆಗೆಟಿವ್‌ ಬಂದಿರುವುದರಿಂದಜಿಲ್ಲೆಯ ಜನರಲ್ಲಿದ್ದ ಆತಂಕ ನಿವಾರಣೆಯಾದಂತಾಗಿದೆ.

ಸೋಂಕಿಲ್ಲ ಎಂಬುದು ದೃಢಪಟ್ಟಿರುವುದರಿಂದ ಎಲ್ಲ 26 ಜನರನ್ನು ಮನೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಎಲ್ಲ 26 ಮಂದಿಗೂ 14 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ. ನಮ್ಮ ಧೈರ್ಯಕ್ಕಾಗಿ ಇನ್ನೊಂದು ಬಾರಿ ಪರೀಕ್ಷೆ ಮಾಡಲು ಚಿಂತನೆ ನಡೆಸಿದ್ದೇವೆ. ಸರ್ಕಾರದ ನಿಯಮಗಳ ಪ್ರಕಾರ 12ರಿಂದ 14 ದಿನಗಳ ಒಳಗೆ ಪರೀಕ್ಷೆ ಮಾಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಂಕಿತ ವೈದ್ಯಕೀಯ ವಿದ್ಯಾರ್ಥಿಗೆ ಕೋವಿಡ್‌–19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಗುಣಮುಖರಾಗುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಹಾಸ್ಟೆಲ್‌ಗಳಲ್ಲಿ 38 ಮಂದಿ:ಈ ಮಧ್ಯೆ, ಕೋವಿಡ್‌–19 ಪರೀಕ್ಷೆಗಾಗಿ ಸೋಮವಾರ 22 ಜನರ ಗಂಟಲಿನ ದ್ರವ ಮಾದರಿಗಳನ್ನು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

‘ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಬಂದಿರುವ 38 ಜನರನ್ನು ವಿವಿಧ ಹಾಸ್ಟೆಲ್‌ಗಳಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT