ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವು: ₹ 69.88 ಲಕ್ಷ ಮೌಲ್ಯದ ವಸ್ತುಗಳ ಹಸ್ತಾಂತರ

ವರ್ಷದಲ್ಲಿ 175 ಪ್ರಕರಣ, 64 ಪ್ರಕರಣಗಳ ಪತ್ತೆ, ₹146 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ
Last Updated 27 ನವೆಂಬರ್ 2021, 15:43 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಐದು ತಾಲ್ಲೂಕುಗಳ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ನಡೆದಿರುವ 175 ಕಳವು ಪ್ರಕರಣಗಳಲ್ಲಿ 64 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಕಳುವಾಗಿದ್ದ ₹1.46 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶನಿವಾರ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವತ್ತುಗಳನ್ನು ಹಿಂದಿರುಗಿಸುವ ಪೆರೇಡ್‌ನಲ್ಲಿ 47 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ₹69,88,555 ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.ಇದರಲ್ಲಿ ಚಿನ್ನಾಭರಣ, ನಗದು, ವಾಹನಗಳು, ದಿನಬಳಕೆಯ ವಸ್ತುಗಳು ಸೇರಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು, ‘2020ರ ಅಕ್ಟೋಬರ್‌ನಿಂದ 2021ರ ಅವಧಿಯಲ್ಲಿ 175 ಕಳವು ಪ್ರಕರಣ ದಾಖಲಾಗಿದೆ. ₹2,10,66,591 ಮೌಲ್ಯದ ವಸ್ತುಗಳು ಕಳುವಾಗಿವೆ. ನಮ್ಮ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮ ವಹಿಸಿ 64 ಪ್ರಕರಣಗಳನ್ನು ಪತ್ತೆ ಹಚ್ಚಿ ₹1,46,63,240 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳುವಾಗಿರುವ ವಸ್ತುಗಳ ಒಟ್ಟು ಮೌಲ್ಯದ ಪೈಕಿ ಶೇ 79.60ರಷ್ಟು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

‘₹14 ಲಕ್ಷ ಮೌಲ್ಯದ 399 ಗ್ರಾಂ ಚಿನ್ನಾಭರಣಗಳು, ಒಂದೂವರೆ ಕೆಜಿ ಬೆಳ್ಳಿಯ ಆಭರಣಗಳು, 29 ದ್ವಿಚಕ್ರವಾಹನಗಳು, ಆರು ಸರಕು ಸಾಗಣೆ ವಾಹನಗಳು, ಆರು ಮೊಬೈಲ್‌ ಸೆಟ್‌ಗಳು, ₹6.40 ಲಕ್ಷ ನಗದು ಸೇರಿದಂತೆ 47 ಪ್ರಕರಣಗಳಲ್ಲಿ ವಶ ಪಡಿಸಿಕೊಳ್ಳಲಾದ ₹68,88,555 ಬೆಲೆಯ ವಸ್ತುಗಳನ್ನು ವಾರಸುದಾರರಿಗೆ ವಾಪಸ್‌ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್‌ರಾಜ್‌ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಕಳುವು ಪ್ರಕರಣಗಳಲ್ಲಿ ಹಲವನ್ನು ಬೇಧಿಸಿದ್ದಾರೆ. ಶೇ 100ರಷ್ಟು ವಸ್ತುಗಳನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ ನಿಜ. ನಮ್ಮ ಪ್ರಯತ್ನವನ್ನು ಮುಂದುವರಿಸಿದ್ದೇವೆ. ಅಮೂಲ್ಯ ವಸ್ತುಗಳನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳುವ ಪ್ರಯತ್ನ ಇದು. ಕೋವಿಡ್‌ ಕಾರಣದಿಂದಾಗಿ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸುವುದಕ್ಕೆ ಆಗಿರಲಿಲ್ಲ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಾರಸುದಾರರಿಗೆ ಅವರ ವಸ್ತುಗಳನ್ನು ಹಸ್ತಾಂತರಿಸಲಾಯಿತು. ಪ್ರಕರಣಗಳನ್ನು ಪತ್ತೆಹಚ್ಚಲು ಶ್ರಮಿಸಿದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಡಿವೈಎಸ್‌ಪಿಗಳಾದ ಪ್ರಿಯದರ್ಶಿನಿ ಸಾಣೆಕೊಪ್ಪ, ನಾಗರಾಜು, ಎಲ್ಲ ಠಾಣೆಗಳ ಪೊಲೀಸ್‌ ಅಧಿಕಾರಿಗಳು ಇದ್ದರು.

ನಗದು ಕಳ್ಳತನ; ಶೀಘ್ರ ಆರೋಪಿಗಳ ಬಂಧನ

ಚಾಮರಾಜನಗರದಲ್ಲಿ ತಿಂಗಳ ಅವಧಿಯಲ್ಲಿ ನಡೆದ ಶಿಕ್ಷಕರೊಬ್ಬರ ₹2 ಲಕ್ಷ ಹಾಗೂ ರೈತ ದಂಪತಿಯ ₹9.5 ಲಕ್ಷ ನಗದು ಕಳ್ಳತನ ಪ್ರಕರಣಗಳ ಸಂಬಂಧ ಸಂಬಂಧಿಸಿದಂತೆ ಮಾಹಿತಿ ನೀಡಿದ ದಿವ್ಯಾ ಸಾರಾ ಥಾಮಸ್‌ ಅವರು, ‘ನಮಲ್ಲಿ ದೊಡ್ಡ ಮಟ್ಟಿನ ಕಳ್ಳತನ ನಡೆದಿಲ್ಲ ಎಂಬ ಸಂತೋಷ ಇತ್ತು. ಆದರೆ, ಈ ಎರಡು ಪ್ರಕರಣಗಳು ನಿಜಕ್ಕೂ ಬೇಸರ ತರಿಸುವಂತಹದ್ದು. ಪ್ರಕರಣ ನಡೆದ ತಕ್ಷಣವೇ ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ನಮಗೆ ಕೆಲವು ಮಹತ್ವದ ಸುಳಿವುಗಳು ಸಿಕ್ಕಿದ್ದು, ಇನ್ನು ಏಳರಿಂದ 10 ದಿನಗಳ ಒಳಗಾಗಿ ಪ್ರಕರಣಗಳನ್ನು ಭೇದಿಸಲಿದ್ದೇವೆ’ ಎಂದು ಹೇಳಿದರು.

‘ಸಿಸಿಟಿವಿ ವಿಡಿಯೊ ದೃಶ್ಯಾವಳಿ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಕಲೆ ಹಾಕಿದ್ದೇವೆ. ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಹೆಚ್ಚು ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ’ ಎಂದರು.

ಎರಡು ಪ್ರಕರಣಗಳಿಗೆ ಏನಾದರೂ ಸಂಬಂಧ ಇದೆಯೇ ಎಂದು ಕೇಳಿದ್ದಕ್ಕೆ, ‘ತನಿಖೆಯ ಹಂತದಲ್ಲಿರುವುದರಿಂದ ಅದನ್ನು ಹೇಳಲಾಗುವುದು’ ಎಂದಷ್ಟೇ ಉತ್ತರಿಸಿದರು.

ಎಚ್ಚರಿಕೆಯಿಂದರಿಬೇಕು: ‘₹2 ಲಕ್ಷ ಹಾಗೂ ₹9.5 ಲಕ್ಷ ನಗದು ಕಳ್ಳತನ ಆದ ಪ್ರಕರಣಗಳಲ್ಲಿ ನಾವು ಹಣ ಕಳೆದುಕೊಂಡವರನ್ನು ದೂರುವುದಿಲ್ಲ. ಆದರೆ, ಜನರು ಎಚ್ಚರಿಕೆಯಿಂದ ಇರಬೇಕು. ಹಣ ಹಿಡಿದುಕೊಂಡು ಓಡಾಡುವಾಗ ಹೆಚ್ಚು ಜಾಗ್ರತೆ ವಹಿಸಬೇಕು. ಗಮನ ಬೇರೆಡೆಗೆ ಸೆಳೆದು ಕಳ್ಳತನ ಮಾಡುವ ಪ್ರಕರಣಗಳು ಎಲ್ಲ ಕಡೆಯೂ ನಡೆಯುತ್ತಿದೆ. ಹಾಗಾಗಿ ಸಾರ್ವಜನಿಕರು ಎಚ್ಚರದಿಂದಿರಬೇಕು’ ಎಂದು ದಿವ್ಯಾ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT