ಸೋಮವಾರ, ಜನವರಿ 25, 2021
20 °C

ಮತಾಂತರ ವಿರೋಧಿ ಹೋರಾಟ ಸಮಿತಿಯಿಂದ ಬೃಹತ್‌ ರ‍್ಯಾಲಿ, ಜಿಲ್ಲಾಡಳಿತದ ವಿರುದ್ಧ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಚರ್ಚುಗಳು, ಕ್ರಿಶ್ಚಿಯನ್‌ ಮಿಷನರಿಗಳು ಹಾಗೂ ಪಾದ್ರಿಗಳು ಹಳ್ಳಿ ಹಳ್ಳಿಗೆ ತೆರಳಿ, ಚರ್ಚ್‌ಗಳನ್ನು ಕಟ್ಟಿ ಇಡೀ ಸಮುದಾಯವನ್ನು ಮತಾಂತರ ಮಾಡುತ್ತಿದ್ದಾರೆ. ರಾಷ್ಟ್ರದ್ರೋಹದ ಈ ಕೆಲಸದಲ್ಲಿ ಭಾರತ ವಿರೋಧಿ ಷಡ್ಯಂತ್ರ ಅಡಗಿದೆ’ ಎಂದು ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ ಕಾರಂತ ಅವರು ಸೋಮವಾರ ಆರೋಪಿಸಿದರು. 

ಮತಾಂತರ ವಿರೋಧಿ ಹೋರಾಟ ಸಮಿತಿ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಜನರು ವೈಯಕ್ತಿಕವಾಗಿ ತಮಗೆ ಇಷ್ಟ ಬಂದ ಧರ್ಮಕ್ಕೆ ಮತಾಂತರ ಆಗುತ್ತಿರುವುದರ ವಿರುದ್ಧ ನಮ್ಮ ಹೋರಾಟ ಅಲ್ಲ. ತಮಗೆ ಇಷ್ಟ ಧರ್ಮವನ್ನು ಆಯ್ಕೆ ಮಾಡುವ ಅಧಿಕಾರ ಅವರಿಗೆ ಇದೆ. ಆದರೆ, ಬಡವರಿಗೆ ಹಣ, ಸೌಲಭ್ಯಗಳ ಆಮಿಷವೊಡ್ಡಿ ಸಮುದಾಯಗಳ ಮೇಲೆ ನಡೆಯುತ್ತಿರುವ ಮತೀಯ ಆಕ್ರಮಣದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ’ ಎಂದು ಹೇಳಿದರು. 

‘ವ್ಯಾಟಿಕನ್‌ನಲ್ಲಿರುವ ಪೋಪ್‌ನ ಆದೇಶದಂದೆ ಜಗತ್ತಿನ ಪ್ರಮುಖ ಏಳು ದೇಶಗಳು ಭಾರತವನ್ನು ಗುರಿಯಾಗಿಸಿಕೊಂಡಿವೆ. ಇಡೀ ದೇಶವನ್ನು ಕ್ರಿಶ್ಚಿಯನ್‌ ರಾಷ್ಟ್ರವನ್ನಾಗಿಸಲು ಸಂಚು ರೂಪಿಸಲಾಗಿದೆ. ಅದಕ್ಕಾಗಿ ಮಿಷನರಿಗಳು ಹಣದ ಹೊಳೆಯನ್ನೇ ಹರಿಸುತ್ತಿವೆ. ಸೇವೆ, ಶಿಕ್ಷಣದ ಹೆಸರಿನಲ್ಲಿ ಹಣ ನೀಡಿ ಮತೀಯ ವ್ಯಭಿಚಾರ ಮಾಡುತ್ತಿವೆ’ ಎಂದು ಅವರು ಆರೋಪಿಸಿದರು. 

‘ಹಿಂದುತ್ವವನ್ನು ಕೊಲ್ಲುವುದು ಅವರ ಉದ್ದೇಶ.ಚರ್ಚ್‌ಗಳು ಹಿಂದುತ್ವದ ವಿರುದ್ಧ ಸಮರ ಸಾರಿವೆ. ಹಿಂದುಳಿದ ವರ್ಗಗಳ ಜನರನ್ನು ಮಾತ್ರ ಮತಾಂತರ ಮಾಡಲಾಗುತ್ತಿಲ್ಲ. ಮೇಲ್ವರ್ಗದವರನ್ನು ಮಾಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ವೀರಶೈವ–ಲಿಂಗಾಯತ ಸಮುದಾಯದ 400 ಕುಟುಂಬಗಳನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡಲಾಗಿದೆ’ ಎಂದು ಹೇಳಿದರು.

‘ಕೊಡವರನ್ನೂ ಮತಾಂತರ ಮಾಡಲಾಗುತ್ತಿದೆ. ಕೊಡವ ಭಾಷೆಯಲ್ಲೂ ಬೈಬಲ್‌ ಮುದ್ರಿಸಲಾಗಿದೆ. ಲಂಬಾಣಿಗಳ ಪ್ಯಾಸ್ಟರ್‌ಗಳೂ ಈಗ ಇದ್ದಾರೆ. ಒಂದೊಂದೇ ಸಮುದಾಯವನ್ನು ಮತಾಂತರ ಮಾಡುತ್ತಾ ಇಡೀ ದೇಶವನ್ನು ಕ್ರೈಸ್ತೀಕರಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ನಮ್ಮ ಮುಂದಿನ ತಲೆಮಾರಿಗೆ ಹಿಂದೂ ಧರ್ಮವನ್ನು ಉಳಿಸುವುದಕ್ಕಾಗಿ ಹೋರಾಟ ಮಾಡಲೇ ಬೇಕಿದೆ. ಚಾಮರಾಜನಗರದ ಹಿಂದೂಗಳು ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದೀರಿ. ಹೋರಾಟ ಈಗ ಆರಂಭವಾಗಿದೆ. ಹಳ್ಳಿ ಹಳ್ಳಿಗೆ ತೆರಳಿ, ಮತಾಂತರದ ವಿರುದ್ಧ ಪ್ರಬಲ ಜನಾಂದೋಲನ ಮಾಡುವ ಸಂಕಲ್ಪವನ್ನು ಮಾಡಬೇಕು’ ಎಂದು ಜಗದೀಶ ಕಾರಂತ ಹೇಳಿದರು.

ಬೃಹತ್‌ ರ‍್ಯಾಲಿ: ಇದಕ್ಕೂ ಮೊದಲು, ಪ್ರತಿಭಟನನಿರತರು ನಗರದಲ್ಲಿ ಬೃಹತ್‌ ರ‍್ಯಾಲಿ ನಡೆಸಿದರು. ಹಳೆ ಬಸ್‌ ನಿಲ್ದಾಣದ ಮಾರಿ ಗುಡಿಯಿಂದ ಆರಂಭವಾದ ಮೆರವಣಿಗೆ ಡೀವಿಯೇಷನ್‌‌ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನದತ್ತ ಸಾಗಿತು. 

ಜಿಲ್ಲಾಡಳಿತ ಭವನದ ದ್ವಾರದ ಬಳಿ ವಾಹನಕ್ಕೆ ಅವಕಾಶ ನೀಡುವ ವಿಚಾರದಲ್ಲಿ ಪ್ರತಿಭಟನನಿರತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ವಾಹನ ಪ್ರವೇಶಿಸಲು ಅವಕಾಶ ನೀಡಲಾಯಿತಾದರು, ಜಿಲ್ಲಾಡಳಿತ ಭವನದ ಬಳಿಗೆ ಹೋಗಲು ಅನುಮತಿ ಕೊಡಲಿಲ್ಲ. ಇದರಿಂದ ಕೆಲಕಾಲ ಗೊಂದಲ ಉಂಟಾಯಿತು. ಡಿವೈಎಸ್‌ಪಿ ಪ್ರಿಯದರ್ಶಿನಿ ಅವರು ರಾಷ್ಟ್ರಗೀತೆ ಹಾಡಿ ಪ್ರತಿಭಟನನಿರತರನ್ನು ಸಮಾಧಾನ ಪಡಿಸಲು ಯತ್ನಿಸಿದರು. ನಂತರ ಅದೇ ಸ್ಥಳದಲ್ಲಿ, ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನನಿರತರು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. 

ಜಿಲ್ಲಾ ಬಿಜೆಪಿ ಘಟಕ, ವಿಶ್ವ ಹಿಂದೂ ಪರಿಷತ್‌, ವನವಾಸಿ ಬಳಗ, ಹಿಂದೂ ಜಾಗರಣ ವೇದಿಕೆ ಮತ್ತಿತರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು. ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು, ಮುಖಂಡ ನಿಜಗುಣರಾಜು, ಬಾಲಸುಬ್ರಹ್ಮಣ್ಯಂ, ಹೋರಾಟ ಸಮಿತಿಯ ನಂದೀಶ್‌ ಕಬ್ಬೇಪುರ,  ಶಶಾಂಕ, ಸುಂದರರಾಜ ಮತ್ತಿತರರು ಇದ್ದರು. 

ಜಿಲ್ಲಾಧಿಕಾರಿ ವಿರುದ್ಧ ಆರೋಪ

‘ಚಾಮರಾಜನಗರದಲ್ಲೂ ವಿವಿಧ ಕಡೆಗಳಲ್ಲಿ ಅವ್ಯಾಹತವಾಗಿ ಮತಾಂತರ ನಡೆಯುತ್ತಿದೆ. ಜಿಲ್ಲೆಯ ಆಡಳಿತ ಯಂತ್ರವೇ ಅದಕ್ಕೆ ಸಹಕಾರ ನೀಡುತ್ತಿದೆ’ ಎಂದು ಹೇಳಿದ ಜಗದೀಶ ಕಾರಂತ ಅವರು, ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರ ವಿರುದ್ಧವೇ ಆರೋಪ ಮಾಡಿದರು. 

‘ಜಿಲ್ಲಾಧಿಕಾರಿ ಅವರು ಇತ್ತೀಚೆಗೆ ಒಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರ ಜೊತೆಗೆ ಪಾದ್ರಿಯೊಬ್ಬರನ್ನೂ ಕರೆದುಕೊಂಡು ಹೋಗಿದ್ದರು. ಸಭೆ ನಡೆಸು‌ವಾಗ ತಮ್ಮ ಜೊತೆಯಲ್ಲೇ ಕೂರಿಸಿದ್ದರು. ಹಿಂದೂ ದೇವಾಲಯಕ್ಕೆ ಪಾದ್ರಿಯನ್ನು ಕರೆದುಕೊಂಡು ಹೋಗುವ ಅವಶ್ಯಕತೆ ಏನಿತ್ತು? ಅದು ಅವಕಾಶ ಎಂದು ನನಗೆ ಅನಿಸುವುದಿಲ್ಲ. ಅದರ ಹಿಂದೆ ದುರುದ್ದೇಶ ಇರುವ ಹಾಗಿದೆ’ ಎಂದು ಹೇಳಿದರು. 

‘ಸಭೆಯಲ್ಲಿ ಪಾದ್ರಿ ಅವರಿಂದ ಜಿಲ್ಲಾಧಿಕಾರಿ ಅವರೇ ಮಾತನಾಡಿಸಿದ್ದಾರೆ ಎಂಬ ಮಾಹಿತಿಯೂ ಬಂದಿದೆ. ದೇವಸ್ಥಾನದ ಆಡಳಿತ ಮಂಡಳಿಗೆ ತಮ್ಮನ್ನೂ ಸೇರಿಸುವಂತೆ ಪಾದ್ರಿ ಕೇಳಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಹುದ್ದೆಗೆ ಕ್ರಿಶ್ಚಿಯನ್‌ ಸಮುದಾಯವರನ್ನೂ ಸೇರಿಸಬೇಕು ಎಂಬ ಪ್ರಸ್ತಾವವನ್ನು ಪಾದ್ರಿ ಮುಂದಿಟ್ಟಿದ್ದಾರೆ. ಜಿಲ್ಲಾಡಳಿತ ಇದಕ್ಕೆಲ್ಲ ಯಾಕೆ ಅವಕಾಶ ನೀಡಬೇಕು? ಇದರ ಹಿಂದಿನ ಉದ್ದೇಶ ಏನು’ ಎಂದು ಅವರು ಪ್ರಶ್ನಿಸಿದರು. 

ಮತಾಂತರ ವಿರೋಧಿ ಸಮಿತಿಯ ಸಹ ಸಂಚಾಲಕ ರಾಜೇಂದ್ರ ಅವರು ಮಾತನಾಡಿ, ‘ಜಿಲ್ಲೆಯ ವಿವಿಧ ಕಡೆಗಳಲ್ಲಿ ಅದರಲ್ಲೂ ವಿಶೇಷವಾಗಿ ಮಾರ್ಟಳ್ಳಿ ಭಾಗದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ’ ಎಂದು ಆರೋಪಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.