ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಪೊಲೀಸರ ವಿರುದ್ದ ಪಿಎಫ್‌ಐ ಪ್ರತಿಭಟನೆ

Last Updated 24 ಫೆಬ್ರುವರಿ 2021, 13:21 IST
ಅಕ್ಷರ ಗಾತ್ರ

ಚಾಮರಾಜನಗರ: ಉತ್ತರಪ್ರದೇಶದ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಇರುವ ಲಾರಿ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ರಸ್ತೆ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶ ಸರ್ಕಾರ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಎರಡನೆಯ ಅತಿ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಕೋಮು ಪ್ರಚೋದಿತ ಹಿಂಸಾಚಾರ ನಿರಂತರವಾಗಿ ನಡೆಯುತ್ತಿದೆ. ಮೇಲ್ವರ್ಗಗಳಿಂದ ದಲಿತರ ಮೇಲಿನ ಪದೇ ಪದೇ ದಾಳಿ ನಡೆಯುತ್ತಿವೆ. ಮಾನವ ಹಕ್ಕು ಉಲ್ಲಂಘನೆ ಮತ್ತು ಮುಸ್ಲಿಂ, ದಲಿತರ ವಿರುದ್ಧ ಕೋಮು ಪಕ್ಷಪಾತಕ್ಕಾಗಿಉತ್ತರ ಪ್ರದೇಶ ಪೊಲೀಸರು ಕುಖ್ಯಾತರಾಗಿದ್ದಾರೆ’ ಎಂದು ಆರೋಪಿಸಿದರು.

‘ಅನ್ಸಾದ್ ಹಾಗೂ ಫಿರೋಜ್ ಎಂಬ ಕೇರಳದ ಇಬ್ಬರು ಅಮಾಯಕ ಯುವಕರ ಬಂಧನವು ಪಿಎಫ್‌ಐ ವಿರುದ್ಧ ಪ್ರತೀಕಾರದ ಅಜೆಂಡಾದ ಭಾಗವಾಗಿದೆ. ಅವರ ವಿರುದ್ಧ ಅಲ್ಲಿನ ಪೊಲೀಸರು ಹೊರಿಸಿರುವ ಎಲ್ಲ ಆರೋಪಗಳು ವಿಶ್ವಾಸಾರ್ಹತೆಯ ಕೊರತೆ ಎದುರಿಸುತ್ತಿವೆ. ಇವರಿಬ್ಬರೂ ಪಿಎಫ್‌ಐ ಸದಸ್ಯರಾಗಿದ್ದು, ಸಂಘಟನೆಯ ವಿಸ್ತರಣಾ ಕಾರ್ಯಗಳಿಗಾಗಿ ಪಶ್ಚಿಮ ಬಂಗಾಳ ಹಾಗೂ ಬಿಹಾರಕ್ಕೆ ಭೇಟಿ ನೀಡಿದ್ದರು’ ಎಂದು ಹೇಳಿದರು.

‘ಇದೇ 11ರಂದು ಸಂಜೆ ಮುಂಬೈಗೆ ತೆರಳಲು ಅವರು ಕಟಿಹಾರ್‌ನಲ್ಲಿ ರೈಲು ಹತ್ತಿದ್ದರು. ಅಂದು ಅವರು ಮನೆಯವರಿಗೆ ಕರೆ ಮಾಡಿ ಮಾತನಾಡಿದ್ದರು. ಆ ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರ ಕುಟುಂಬದ ಸದಸ್ಯರು 14 ಮತ್ತು 15ರಂದು ಕೇರಳದ ಸ್ಥಳೀಯ ಠಾಣೆಗಳಲ್ಲಿ ದೂರು ನೀಡಿದ್ದರು. ದೂರು ದಾಖಲಾದ ಬಳಿಕ ಉತ್ತರ ಪ್ರದೇಶದ ಎಟಿಎಸ್‌ ಪೊಲೀಸರು ತರಾತುರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಭಯೋತ್ಪಾನಾ ದಾಳಿ ಯೋಜನೆ ಮತ್ತು ತಯಾರಿ ನಡೆಸಿರುವ ಆರೋಪದಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ ಎಂಬ ಕಪೋಲಕಲ್ಪಿತ ಕಥೆಯನ್ನು ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದರು.

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳುತ್ತಿದ್ದವರನ್ನು ಬಂಧಿಸಿ, ಅವರ ಮುಖವನ್ನು ಮುಚ್ಚಿ ಮಾಧ್ಯಮದ ಮುಂದೆ ಭಯೋತ್ಪಾದಕರು ಎಂದು ಬಿಂಬಿಸಲಾಗುತ್ತಿದೆ. ಯೋಗಿ ಆದಿತ್ಯನಾಥ ಆಡಳಿತದಲ್ಲಿ ಉತ್ತರ ಪ್ರದೇಶವು ಜಂಗಲ್‌ ರಾಜ್‌ ಆಗಿರುವುದಕ್ಕೆ ಇದು ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಎಫ್ಐ ಜಿಲ್ಲಾಧ್ಯಕ್ಷ ಕಫೀಲ್ ಅಹಮ್ಮದ್, ಜಿಲ್ಲಾ ಕಾರ್ಯದರ್ಶಿ ಶುಯೇಬ್ ಖಾನ್, ಚಾಮರಾಜನಗರ ವಿಭಾಗದ ಅಧ್ಯಕ್ಷ ಸಿದ್ದಿಕ್ ಉಲ್ಲಾ, ಕಾರ್ಯದರ್ಶಿ ಸುಹೇಲ್ ಪಾಷಾ, ಮಜರ್ಖಾನ್, ಸೈಫ್‌ಉಲ್ಲಾ, ಇಫ್ತೆಖಾರ್ ಅಹಮದ್, ಫರ್ಹತ್ ಉಲ್ಲಾ, ಸೈಯದ್ ಇರ್ಫಾನ್, ತೌಸಿಯ ಬಾನು, ಸುಮಾ ರಾಜೇಂದ್ರ, ರುಮನಾ, ನೂರ್ ಅಸ್ಮಾ, ರೇಷ್ಮಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT