ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಕಡೆಗಣನೆ: ಅಂಗನವಾಡಿ ನೌಕರರಿಂದ ಉಪವಾಸ ಸತ್ಯಾಗ್ರಹ

Last Updated 15 ಮಾರ್ಚ್ 2021, 13:05 IST
ಅಕ್ಷರ ಗಾತ್ರ

ಚಾಮರಾಜನಗರ: ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಂಗನವಾಡಿ ನೌಕರರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.

‘ಸೇವಾ ಜೇಷ್ಠತೆಯ ಆಧಾರದಲ್ಲಿ ಗೌರವಧನ ಹೆಚ್ಚಳಕ್ಕಾಗಿ ₹153.25 ಕೋಟಿ, ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿಯರ ನೇಮಕಾತಿಗಾಗಿ ₹6.99 ಕೋಟಿ, ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ ₹131.42 ಕೋಟಿ ಹಾಗೂ ನಿವೃತ್ತಿ ಸೌಲಭ್ಯಕ್ಕಾಗಿ ₹47.82 ಕೋಟಿ ಸೇರಿದಂತೆ ಒಟ್ಟು ₹339.38 ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮನವಿ ಮಾಡಲಾಗಿತ್ತು. ಆದರೆ, ಸರ್ಕಾರ ಇದನ್ನು ಪರಿಗಣಿಸಿಲ್ಲ. ಈ ಹಣ ಬಿಡುಗಡೆ ಮಾಡಿದ್ದರೆ, 1.30 ಲಕ್ಷ ಕುಟುಂಬಗಳಿಗೆ ಅನುಕೂಲವಾಗುತ್ತಿತ್ತು’ ಎಂದು ನಿರಶನ ನಿರತರು ಹೇಳಿದರು.

‘ಅಂಗನವಾಡಿ ನೌಕರರಿಗೆ ಹೆಚ್ಚು ಸವಲತ್ತುಗಳಿಲ್ಲದಿದ್ದರೂ ಕೋವಿಡ್‌ ಸಂದರ್ಭದಲ್ಲಿ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಷರತ್ತುಗಳಿಲ್ಲದೇ ಕರ್ತವ್ಯ ನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ಕೆಲಸದ ಒತ್ತಡದಿಂದಾಗಿ 35 ಜನರು, ಕರ್ತವ್ಯದಲ್ಲಿದ್ದಾಗ 28 ಜನರು ಜೀವ ಕಳೆದುಕೊಂಡಿದ್ದಾರೆ. 173 ಮಂದಿ ಕೋವಿಡ್‌ಗೂ ತುತ್ತಾಗಿ ಆದಾಯವನ್ನೇ ಕಳೆದುಕೊಂಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಸರ್ಕಾರದ ಬೆನ್ನಿಗೆ ನಿಂತಿದ್ದ ಅಂಗನವಾಡಿ ನೌಕರರನ್ನು ಬಜೆಟ್‌ನಲ್ಲಿ ನಿರ್ಲಕ್ಷಿಸಲಾಗಿದೆ’ ಎಂದು ಅವರು ಆರೋಪಿಸಿದರು.

‘ಕೋವಿಡ್‌ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಪೌಷ್ಟಿಕ ಆಹಾರ ತಲುಪಿಸುವುದನ್ನು ಖಾತ್ರಿ ಪಡಿಸಬೇಕೆಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಎಚ್ಚರಿಕೆ ಕೊಟ್ಟಿತ್ತು. ಈ ಸಂದರ್ಭದಲ್ಲಿ ಸರ್ಕಾರದ ಘನತೆ ಕಾಪಾಡಿದ್ದು ಅಂಗನವಾಡಿ ನೌಕರರು. ಕೋವಿಡ್‌ ಸಂದರ್ಭದಲ್ಲೂ ಮಲೆನಾಡು, ಗುಡ್ಡಗಾಡು, ಕೊಳಚೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಕುಟುಂಬದ ವಾಹನಗಳನ್ನು ಬಳಸಿ ಆಹಾರ ಸಾಮಗ್ರಿಗಳುನ್ನು ಮನೆ ಮನೆಗೆ ಹಂಚಿದ್ದು, ಕ್ವಾರಂಟೈನ್‌ ಆದವರಿಗೆ ಮಾಸ್ಕ್‌, ಸ್ಯಾನಿಟೈಸರ್‌, ಮಾತ್ರೆಗಳನ್ನು ತಮ್ಮ ಸ್ವಂತ ಖರ್ಚಿನಿಂದ ಪೂರೈಸಿದ್ದಾರೆ. ಸಾರ್ವಜನಿಕರಿಂದ ಹಲ್ಲೆಗಳೊಗಾದರೂ ಎದೆಗುಂದದೆ ಕೆಲಸ ಮಾಡಿದ್ದಾರೆ. ಇಷ್ಟೆಲ್ಲ ಮಾಡಿದರೂ ಸರ್ಕಾರ ಅಂಗನವಾಡಿ ನೌಕರರಿಗೆ ಬಜೆಟ್‌ನಲ್ಲಿ ಅನುಕೂಲ ಕಲ್ಪಿಸಿಲ್ಲ’ ಎಂದು ಆರೋಪಿಸಿದರು.

ವಿವಿಧ ಕೆಲಸಗಳ ಬಹಿಷ್ಕಾರ: ‘ಸೇವಾ ಜ್ಯೇಷ್ಠತೆ ಆಧಾರದಲ್ಲಿ ಗೌರವ ಧನ ಹೆಚ್ಚಳ, ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ನೇಮಕ, ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ ಹಾಗೂ ನಿವೃತ್ತಿ ಸೌಲಭ್ಯ ನೀಡುವವರೆಗೆ ಹೆಚ್ಚುವರಿ ಕೆಲಸಗಳಾದ ಇ–ಸರ್ವೆ, ಆರ್‌ಡಿಪಿಆರ್‌ ನಿಂದ ಕೊಟ್ಟಿರುವ ಸರ್ವೆ, ಬಿಪಿಎಲ್‌ ಕಾರ್ಡ್‌ ಆರ್‌ಸಿಎಚ್‌ ಸರ್ವೆ, ಭಾಗ್ಯಲಕ್ಷ್ಮಿ, ಮಾತೃವಂದನಾ, ಮಾತೃಶ್ರೀ, ಸ್ತ್ರೀ ಶಕ್ತಿ, ಚುನಾವಣಾ ಕೆಲಸಗಳನ್ನು ಬಹಿಷ್ಕರಿಸಲು ಅಂಗನವಾಡಿ ನೌಕರರ ಸಂಘ ತೀರ್ಮಾನಿಸಿದೆ. ಅಲ್ಲದೇ ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯನರನ್ನು ನೀಡುವವರೆಗೆ ಅಡುಗೆ ಮಾಡುವುದಿಲ್ಲ’ ಎಂದು ಸತ್ಯಾಗ್ರಹ ನಿರತರು ಹೇಳಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ಸುಜಾತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಮಣಿ, ತಾಲ್ಲೂಕು ಅಧ್ಯಕ್ಷೆ ರೇವಮ್ಮ, ಕಾರ್ಯದರ್ಶಿ ಷಹಿದಾಬಾನು, ಖಜಾಂಚಿ ಕೆ.ಪಿ.ಯಶೋಧರಮ್ಮ, ಉಪಾಧ್ಯಕ್ಷೆ ಗುರುಲಿಂಗಮ್ಮ, ಯಶೋಧ, ನಂಜಾಮಣಿ, ಲೀಲಾವತಿ, ಪುಷ್ಪ, ಮಂಜುಳ, ರಾಜಮ್ಮ, ಸಾಕಮ್ಮ, ಜಮೀಲ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT