ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ನಲ್ಲಿ ಊಟ, ಬಸ್‌ ಸೌಲಭ್ಯಕ್ಕೆ ಆಗ್ರಹ

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ದಿಢೀರ್‌ ಪ್ರತಿಭಟನೆ
Last Updated 13 ಜನವರಿ 2023, 16:16 IST
ಅಕ್ಷರ ಗಾತ್ರ

ಚಾಮರಾಜನಗರ: ಹಾಸ್ಟೆಲ್‌ನಲ್ಲಿ ತಿಂಗಳಿನಿಂದ ಆಹಾರ ಸಿಗುತ್ತಿಲ್ಲ, ಸ್ನಾತಕೋತ್ತರ ಕೇಂದ್ರಕ್ಕೆ ಸಮರ್ಪಕ ಬಸ್‌ ಸೌಲಭ್ಯ ಇಲ್ಲ, ಕೇಂದ್ರದ ಕ್ಯಾಂಟೀನ್‌ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಶುಕ್ರವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಸ್ನಾತಕೋತ್ತರ ಕೇಂದ್ರದ ಮುಂಭಾಗ ಧರಣಿ ಕುಳಿತ ನೂರಾರು ವಿದ್ಯಾರ್ಥಿಗಳು ಸೌಲಭ್ಯಗಳಿಗಾಗಿ ಆಗ್ರಹಿಸಿ ಘೋಷಣೆ ಕೂಗಿದರು.

‘ಚಾಮರಾಜನಗರದಲ್ಲಿರುವ ಹುಡುಗರ ಹಾಸ್ಟೆಲ್‌ನಲ್ಲಿ ಒಂದು ತಿಂಗಳಿಂದ ಆಹಾರ ಕೊಡುತ್ತಿಲ್ಲ. ಇದರಿಂದ ತುಂಬಾ ತೊಂದರೆಯಾಗಿದ್ದು, ತಿಂಡಿ, ಊಟಕ್ಕಾಗಿ ಹೋಟೆಲ್‌ಗಳಿಗೆ ಹೋಗಬೇಕಾಗಿದೆ. ವಿದ್ಯಾರ್ಥಿನಿಯರಿಗೆ ಜೆಎಸ್‌ಎಸ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಹಾಸ್ಟೆಲ್‌ನಲ್ಲಿರುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಇನ್ನೂ ಸ್ಕಾಲರ್ ಶಿಪ್ ಬಂದಿಲ್ಲ. ₹10 ಸಾವಿರ ಶುಲ್ಕ ಕಟ್ಟುವಂತೆ ಹೇಳುತ್ತಾರೆ. ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬದವರಾಗಿದ್ದು ಅಷ್ಟು ಹಣ ಕಟ್ಟಲು ಆಗುತ್ತಿಲ್ಲ’ ಎಂದು ದೂರಿದರು.

ಸ್ನಾತಕೋತ್ತರ ಕೇಂದ್ರದ ಕ್ಯಾಂಟೀನ್‌ನಲ್ಲೂ ಎಲ್ಲರಿಗೂ ತಿಂಡಿ ಊಟ ಸಿಗುತ್ತಿಲ್ಲ. ಅಲ್ಲಿ ಸರಿಯಾದ ಮೂಲಸೌಕರ್ಯ ಇಲ್ಲ ಅದು ಆರೋಪಿಸಿದರು.

‘ಚಾಮರಾಜನಗರದಿಂದ ಸ್ನಾತಕೋತ್ತರ ಕೇಂದ್ರಕ್ಕೆ ಬಸ್ ವ್ಯವಸ್ಥೆ ಇಲ್ಲ. ಈ ಹಿಂದೆ ಕೇಂದ್ರಕ್ಕೆ ಮೂರು ಬಸ್‌ಗಳನ್ನು ಓಡಿಸಲಾಗುತ್ತಿತ್ತು. ಆದರೆ, ಈಗ ಒಂದು ಬಸ್ ಮಾತ್ರ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಮೈಸೂರು ಮುಖ್ಯರಸ್ತೆಯಿಂದ ಕೇಂದ್ರಕ್ಕೆ ಎರಡು ಕಿ.ಮೀ ದೂರವಿದ್ದು ಇಲ್ಲಿಯೂ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಈ ಸಂಬಂಧ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಅಹವಾಲುಗಳನ್ನು ಆಲಿಸಿ, ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಶುಕ್ರವಾರ ಕೇಂದ್ರದ ನಿರ್ದೇಶಕರು ಇರಲಿಲ್ಲ. ಹಾಗಾಗಿ ಸೋಮವಾರ ಅವರನ್ನು ಭೇಟಿ ಮಾಡಿ ಮನವಿ ಮಾಡಲು ವಿದ್ಯಾರ್ಥಿಗಳು ನಿರ್ಧರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT