ಮಂಗಳವಾರ, ಏಪ್ರಿಲ್ 20, 2021
29 °C
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ, ಶುಕ್ರವಾರ ಬೆಂಗಳೂರಿನಲ್ಲಿ ಕರಾಳ ದಿನ ಆಚರಣೆಗೆ ನಿರ್ಧಾರ

ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ಯೋಜನೆ ಖಂಡಿಸಿ ವಾಟಾಳ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನೆರೆಯ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಕಾವೇರಿ–ವೆಲ್ಲಾರು–ವೈಗೈ–ಗುಂಡಾರು ನದಿ ಜೋಡಣೆ ಯೋಜನೆಯನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಅವರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಯೋಜನೆಯನ್ನು ಖಂಡಿಸಿ ಶುಕ್ರವಾರ ಬೆಂಗಳೂರಿನಲ್ಲಿ ಕರಾಳ ದಿನ ಆಚರಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. 

ಜಿಲ್ಲಾಡಳಿತ ಭವನದ ಎದುರು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ಅವರು, ತಮಿಳುನಾಡು, ಕೇಂದ್ರ ಹಾಗೂ ರಾಜ್ಯದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ನಂತರ ಮಾತನಾಡಿದ ವಾಟಾಳ್‌ ನಾಗರಾಜ್‌ ಅವರು, ‘ತಮಿಳುನಾಡು ಸರ್ಕಾರ ರಹಸ್ಯವಾಗಿ ನದಿ ಜೋಡಣೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕೇಂದ್ರ ಸರ್ಕಾರ ಮೊದಲನೆಯ ಹಂತದಲ್ಲಿ ₹7,000 ಕೋಟಿ ಬಿಡುಗಡೆ ಮಾಡಿದೆ. ಮುಂದಿನ ಹಂತದಲ್ಲೂ ಹಣಕಾಸು ನೆರವು ನೀಡುವ ಸಾಧ್ಯತೆ ಇದೆ. ಈ ಯೋಜನೆ ಕರ್ನಾಟಕದ ಪಾಲಿಗೆ ಅಪಾಯಕಾರಿಯಾಗಿದೆ’ ಎಂದರು. 

‘ತಮಿಳುನಾಡಿನಲ್ಲಿ ಜಯಲಲಿತಾ ಅವರು ನಿಧನರಾದ ನಂತರ ಈಗ ಅಸ್ತಿತ್ವದಲ್ಲಿರುವ ಸರ್ಕಾರ ಬಿಜೆಪಿ, ಆರ್‌ಎಸ್‌ಎಸ್‌ ಏಜೆಂಟ್‌ ಆಗಿದ್ದು, ಇದೇ ಕಾರಣಕ್ಕೆ ಪ್ರಧಾನಿ ಅವರು ಕಾವೇರಿ ನದಿಗೆ 118 ಕಿ.ಮೀ ಕಾಲುವೆ ನಿರ್ಮಿಸಲು ಬಳುವಳಿ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಗುಪ್ತಚರ ಇಲಾಖೆ ವಿಫಲ: ‘ತಮಿಳುನಾಡು ಸರ್ಕಾರ ಯೋಜನೆ ರೂಪಿಸುತ್ತಿದ್ದರೆ, ಅದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿಯೇ ಇಲ್ಲ. ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬುದ್ಧಿಯೇ ಇಲ್ಲ. ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಅವರು ನಾಲಾಯಕ್‌. 118 ಕೀ. ಮೀ ಕಾಲುವೆ ತೊಡಲು ತಮಿಳುನಾಡು ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿ ಕೇಂದ್ರ ಸರ್ಕಾರದಿಂದ ಅನುದಾನ ತೆಗೆದುಕೊಂಡಿರುವುದು ಯಡಿಯೂರಪ್ಪ ಅವರಿಗೆ ಗೊತ್ತಿಲ್ಲ’ ಎಂದು ಕಿಡಿಕಾರಿದರು. 

‘ಅಧಿಕಾರದಲ್ಲಿ ಉಳಿದುಕೊಳ್ಳುವುದಕ್ಕಾಗಿ ಯಡಿಯೂರಪ್ಪ ಅವರು ಕೆಟ್ಟರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ರಾಜ್ಯ ಬೇಕಾಗಿಲ್ಲ. ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಇವರಿಗೆ ತಾಕತ್ತಿಲ್ಲ’ ಎಂದರು.

ಬಂದ್‌ ಎಚ್ಚರಿಕೆ: ಬೆಂಗಳೂರಿನಲ್ಲಿ ಎಲ್ಲ ಕನ್ನಡಪರ ಸಂಘಟನೆಗಳ ಸಭೆ ಕರೆಯಲಾಗಿದೆ. ಇದೇ 27ರೊಳಗೆ ತಮಿಳುನಾಡಿನಲ್ಲಿ ಕಾವೇರಿ ಯೋಜನೆ ಕಾಮಗಾರಿ ತಡೆಯದೇ ಹೋದರೆ ತಮಿಳುನಾಡು, ಕೇಂದ್ರ ಸರ್ಕಾರ, ಯಡಿಯೂರಪ್ಪ ವಿರುದ್ಧ ರಾಜ್ಯದಾದ್ಯಂತ ಬಂದ್‌ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಶುಕ್ರವಾರ (ಫೆ.26) ಪ್ರಧಾನಿ ನರೇಂದ್ರಮೋದಿ, ತಮಿಳುನಾಡು ಸರ್ಕಾರ, ಯಡಿಯೂರಪ್ಪ ವಿರುದ್ದ ಕನ್ನಡ ಸಂಘಗಳ ಒಕ್ಕೂಟದ ವತಿಯಿಂದ ಕರಾಳ ದಿನಾಚರಣೆ ಆಚರಿಸಲಾಗುವುದು ವಾಟಾಳ್‌ ನಾಗರಾಜ್‌ ಅವರು ಹೇಳಿದರು. 

ಚಾ.ರಂ.ಶ್ರೀನಿವಾಸಗೌಡ, ಕಾರ್‌ನಾಗೇಶ್, ಶಿವಲಿಂಗಮೂರ್ತಿ, ನಾಗರಾಜುಮೂರ್ತಿ, ವರದನಾಯಕ, ಪ್ರತಾಪ್, ಸಚಿನ್ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು