ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ ಸಿಮ್ಸ್ ನೌಕರರಿಂದ ಧರಣಿ: ಬಂಧನ, ಬಿಡುಗಡೆ

ವಿವಿಧ ಬೇಡಿಕೆ ಈಡೇರಿಕೆಗಾಗಿ ಎಐಯುಟಿಯುಸಿ ನೌಕರರ ಪ್ರತಿಭಟನೆ
Published 25 ಮಾರ್ಚ್ 2024, 16:23 IST
Last Updated 25 ಮಾರ್ಚ್ 2024, 16:23 IST
ಅಕ್ಷರ ಗಾತ್ರ

ಚಾಮರಾಜನಗರ: ಕಾರ್ಮಿಕರಿಗೆ ಆಗುತ್ತಿರುವ ಶೋಷಣೆಯನ್ನು ಪಶ್ನಿಸಿದ ಕಾರಣಕ್ಕೆ ವಜಾಗೊಳಿಸಿರುವ ನೌಕರರನ್ನು ಕೂಡಲೇ ಮರು ನೇಮಕ ಮಾಡಿಕೊಳ್ಳಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್‌) ಕಾರ್ಮಿಕರ ಸಂಘ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಪದಾಧಿಕಾರಿಗಳು ಮತ್ತು ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ನಗರದ ಜಿಲ್ಲಾ ಅಸ್ಪತ್ರೆಯ ಮುಂಭಾಗದಲ್ಲಿ ಧರಣಿ ಕುಳಿತ ಪ್ರತಿಭಟನಕಾರರು ಸಿಮ್ಸ್‌, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

‘ಸಿಮ್ಸ್ ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರರು ನೇಮಕ ಮಾಡಿಕೊಳ್ಳುವಾಗ ಬಹಳ ಶೋಷಣೆ ನಡೆಯುತ್ತಿದೆ. ನೌಕರರಿಗೆ ಸರಿಯಾಗಿ ಸಂಬಳ ನೀಡುವುದಿಲ್ಲ. ಹೆಚ್ಚು ದುಡಿಸಿಕೊಳ್ಳುವುದು ಸೇರಿದಂತೆ ಕಾರ್ಮಿಕ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗುತ್ತಿದೆ. ಈ ಬಗ್ಗೆ ಕಾರ್ಮಿಕರಿಗೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸಲು ಮುಂದಾಗ ನೌಕರನ್ನೇ ವಜಾಗೊಳಿಸಲಾಗಿದೆ. ಈ ನೌಕರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳುವಂತೆ ಒತ್ತಾಯ ಮಾಡುತ್ತಾ ಬಂದಿದ್ದರೂ ಸಹ ಸಿಮ್ಸ್ ಹಾಗೂ ಟೆಂಡರ್ ದಾರರು ಸೊಪ್ಪು ಹಾಕುತ್ತಿಲ್ಲ’ ಎಂದು ದೂರಿದರು.

‘ಉಪ ಕಾರ್ಮಿಕರ ಆಯುಕ್ತರ ಆದೇಶದಂತೆ ಐದು ಜನ ಕಾರ್ಮಿಕರ ಮೂರು ತಿಂಗಳ ವೇತನವನ್ನು ತಕ್ಷಣವೇ ಪಾವತಿ ಮಾಡಬೇಕು. ಮತ್ತು ಆದೇಶದಂತೆ ಶುಶ್ರೂಷಕರ ವೇತನವನ್ನು ಪಾವತಿ ಮಾಡಬೇಕು. ಕೋವಿಡ್‌ ವಾರಿಯರ್ಸ್‌ ಆಗಿ ಕೆಲಸ ಮಾಡಿದ ಶುಶ್ರೂಷಕರಾದ ಪೂರ್ಣಿಮಾ ಮತ್ತು ರಂಜಿತಾ ಅವರಿಗೆ ಹೆರಿಗೆ ರಜಾ ಕಾರಣಕ್ಕೆ ಕೆಲಸ ನಿರಾಕರಿಸಿದ್ದು, ತಕ್ಷಣವೇ ಕಾರ್ಮಿಕರ ಅಧಿಕಾರಿಗಳ ಮುಂದೆ ಒಪ್ಪಿಗೊಂಡಂತೆ ಕೆಲಸ ನೀಡಬೇಕು’ ಎಂದು ಆಗ್ರಹಿಸಿದರು. 

‘ಹೊರ ಗುತ್ತಿಗೆ ಎಜೆನ್ಸಿಯು ಎರಡು ವರ್ಷಗಳ ಕಾಲ ಪ್ರತಿ ತಿಂಗಳು ₹2,000 ಹಣವನ್ನು ಕಾನೂನು ಬಾಹಿರವಾಗಿ ಕಡಿತ ಮಾಡಿರುವುದನ್ನು ‍ಪ್ರಶ್ನಿಸಿದಾಗ 2022ರ ಆಗಸ್ಟ್‌ನಿಂದಕೆಲಸ ನಿರಾಕರಿಸಿರುವ 15 ಮಂದಿ ಕೋವಿಡ್‌ ವಾರಿಯರ್ಸ್‌ ಆಗಿ ಕೆಲಸ ಮಾಡಿ ಕೆಲಸಕ್ಕೆ ಅರ್ಜಿ ಸಲ್ಲಿಸಿರುವ ಮೊದಲ ಬ್ಯಾಚ್‌ನ ಶುಶ್ರೂಷಕರನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು. ನಮ್ಮ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಡೀನ್ ಅವರು ಪೊಲೀಸರನ್ನು ಬಳಸಿಕೊಂಡು ನಮ್ಮನ್ನು ಬಂಧಿಸಿದ್ದಾರೆ’ ಎಂದು ದೂರಿದರು.

ಪ್ರತಿಭಟನಕಾರರು ಎರಡು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು. ಸ್ಥಳಕ್ಕೆ ಬಂದ ಪೊಲೀಸರು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹೆಚ್ಚು ಕಾಲ ಧರಣಿ ನಡೆಸಲು ಅನುಮತಿ ಇಲ್ಲ ಎಂದು ಹೇಳಿ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. 

ಸಂಘದ ಅಧ್ಯಕ್ಷ ಚಂದ್ರಶೇಖರ್ ಮೇಟಿ, ಪ್ರಧಾನ ಕಾರ್ಯದರ್ಶಿ ಡಿ. ಮಹದೇವ್, ಖಜಾಂಚಿ ಕುಮಾರ್, ಉಪಾಧ್ಯಕ್ಷ ಬೀರೇಗೌಡ, ಜಂಟಿ ಕಾರ್ಯದರ್ಶಿ ಮಹೇಶ್, ವಿನಯ್, ಸಂಘಟನೆಗಳ ಮುಖಂಡರಾದ ಡಿಎಸ್‌ಎಸ್‌ನ ಸಂಯೋಜಕ ಕೆ.ಎಂ.ನಾಗರಾಜು, ಸಂಚಾಲಕ ಸಿ.ಎಂ.ಶಿವಣ್ಣ, ಸಿ.ಎಂ.ಕೃಷ್ಣಮೂರ್ತಿ, ಹೊಂಡರಬಾಳು ವಾಸು, ಬಾಬು, ರಾಮಸಮುದ್ರ ಸುರೇಶ್, ಪ್ರಶಾಂತ್ ಇತರರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT