ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಕನಾಥ್ ಕೋಳಿ, ಟರ್ಕಿಶ್ ಕ್ಯಾಟ್ ಸಾಕಣೆಯಿಂದ ಲಾಭ

ಬೆಂಕಿ, ಪೈಟರ್, ಟರ್ಕಿ, ಸ್ಥಳೀಯ ಕುಕ್ಕಟಗಳಿಂದ ಖಚಿತ ಆದಾಯ
Last Updated 18 ಆಗಸ್ಟ್ 2022, 15:48 IST
ಅಕ್ಷರ ಗಾತ್ರ

ಯಳಂದೂರು:ಮನೆಯ ಸುತ್ತಲೂ ಕಡಕನಾಥ ಕೋಳಿ, ಫೈಟರ್ ಕಾಕ್, ಬೆಂಕಿ ಚಿಕನ್, ಟರ್ಕಿ ಕುಕ್ಕುಟಗಳ ಸಂಚಾರ. ಮನೆಯ ಒಳಗೆ ವಿದೇಶಿ ಬೆಕ್ಕುಗಳ ಆರ್ಭಟ..

ಇದು ಯರಿಯೂರು ಗೋವಿಂದು ಅವರ ಮನೆಯ ಚಿತ್ರಣ.

ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ, ಗೋವಿಂದು ಅವರಿಗೆ ಕೃಷಿ, ಪ್ರಾಣಿಗಳ ಸಾಕಣೆಯ ಸೆಳೆತ. ಬಹುಬೇಗ ಬೆಳೆಯುವ ವಿವಿಧ ರಾಜ್ಯಗಳ ನಾಟಿ ಕೋಳಿಗಳನ್ನು ಸಾಕಿ ಸಣ್ಣ ಪ್ರಮಾಣದಲ್ಲಿ ವರಮಾನವನ್ನೂ ಅವರು ಪಡೆಯುತ್ತಿದ್ದಾರೆ.

ಪಟ್ಟಣಕ್ಕೆ ಹೊಂದಿಕೊಂಡ ಯರಿಯೂರು ಗ್ರಾಮದಲ್ಲಿ ಗೋವಿಂದು ಅವರು ಅರ್ಧ ಎಕರೆ ತೆಂಗಿನ ತೋಟ ಅಭಿವೃದ್ಧಿ ಪಡಿಸಿದ್ದಾರೆ. ಇಲ್ಲಿಯೇ ವ್ಯವಸ್ಥಿತವಾಗಿ ಕುಕ್ಕುಟೋದ್ಯಮ ಪ್ರಯೋಗ ಆರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಹಿತ್ತಿಲಿನಲ್ಲಿ ಸಾಕುವ ನಾಟಿ ಕೋಳಿಗಳನ್ನು ಮನೆಯಲ್ಲಿ ಪ್ರಯೋಗಕ್ಕೆ ಒಳಪಡಿಸಿದ್ದಾರೆ.

'ದೇಶಿ ಕೋಳಿ ಸಾಕಲು ಹೆಚ್ಚಿನ ಹಣ ಹೂಡಬೇಕಿಲ್ಲ. ವಿಶೇಷ ಆರೈಕೆ ಅಗತ್ಯವಿಲ್ಲ. ಹಳ್ಳಿ ತೋಟಗಳಲ್ಲಿ ಬಿಟ್ಟುಕೊಂಡು ಸಣ್ಣ ಪ್ರಮಾಣದಲ್ಲಿ ನಿರಂತರ ಆದಾಯ ಪಡೆಯಬಹುದು. ಇವುಗಳನ್ನು ಮಾಂಸ ಮತ್ತು ಮೊಟ್ಟೆಯ ಉದ್ಧೇಶಕ್ಕೂ ಸಾಕಬಹುದು' ಎಂದು ಹೇಳುತ್ತಾರೆ ಗೋವಿಂದು.

ಗಿರಿರಾಜ, ಗಿರಿರಾಣಿ, ಸ್ವರ್ಣಧಾರಾ, ಸಿಲ್ಕ್, ಬೆಂಕಿ.. ಇವು ಜವಾರಿ ತಳಿಗಳ ಎಲ್ಲ ಲಕ್ಷಣಗಳನ್ನು ಹೊಂದಿವೆ. ಕಂದು ಬಣ್ಣದ ಮೊಟ್ಟೆ, ಮೂರು ಪಟ್ಟು ಹೆಚ್ಚಿನ ಮಾಂಸ ನೀಡಬಲ್ಲವು. ಇವುಗಳಿಗೆ ಹಾರ್ಮೋನ್‌ಗಳನ್ನು ನೀಡಬೇಕಿಲ್ಲ. 2 ರಿಂದ 3 ತಿಂಗಳಲ್ಲಿ ಮಾರಾಟಕ್ಕೆ ಬರುತ್ತವೆ. ಸಾಕುವುದು ಲಾಭಕರ. ಮಹಿಳೆ ಮತ್ತು ಮಕ್ಕಳೊಂದಿಗೂ ಹೊಂದಿಕೊಂಡು ಬೆಳೆಯುತ್ತವೆ.

‘ಮೂರು ತಿಂಗಳ ಹಿಂದೆ ₹20 ಸಾವಿರ ಖರ್ಚು ಮಾಡಿ 10 ಎಳೆಯ ಕೋಳಿ ಮರಿಗಳನ್ನು ಖರೀದಿಸಿದ್ದೆ. ಇವುಗಳ ಸಂತಾನದಿಂದ 75 ಕೋಳಿ ಮಾರಾಟಕ್ಕೆ ಸಿದ್ಧವಾಗಿವೆ. ಇವುಗಳ ಮಾರಾಟದಿಂದ ಕನಿಷ್ಠ ಎಂದರೂ ₹75 ಸಾವಿರ ಕೈಸೇರಲಿದೆ' ಎನ್ನುತ್ತಾರೆ ಗೋವಿಂದು.

ಪರ್ಷಿಯಾ ಬೆಕ್ಕಿಗೆ ಬೇಡಿಕೆ: ‘ನಾಯಿ, ಕೋಳಿಗಳ ಜೊತೆ ಗೋವಿಂದು ಅವರ ಮನೆಯಲ್ಲಿ ವಿದೇಶಿ ತಳಿಯ ಬೆಕ್ಕುಗಳೂ ಇವೆ. ಹುಲಿ ಮತ್ತು ಚಿರತೆಯನ್ನು ಹೋಲುವ ಪರ್ಷಿಯಾ ಮೂಲದ ಬೆಕ್ಕಿನಮರಿಗಳಿಗೆ ನಗರ ಪಟ್ಟಣಗಳಲ್ಲಿ ಬಲು ಬೇಡಿಕೆ ಇದೆ. ಪ್ರತಿ ಬೆಕ್ಕು ₹ 20 ಸಾವಿರಕ್ಕೆ ಮಾರಾಟ ಆಗುತ್ತವೆ. ಪ್ರತಿ ಕಡಕನಾಥ್ ಕೋಳಿ ₹ 700, ಟರ್ಕಿ ₹2000, ಬೆಂಕಿ ₹750, ತಮಿಳುನಾಡು ನಾಟಿ ಮತ್ತು ಸಿಲ್ಕ್‌ಗೆ ₹500 ದರ ಇದೆ. ಮಕ್ಕಳ ಖುಷಿಗಾಗಿ ಆರಂಭಿಸಿದ ಕೋಳಿ ಸಾಕಣೆಯನ್ನು ಈಗ ಉದ್ಯಮ ಮಾಡುವತ್ತ ಚಿಂತನೆ ನಡೆಸಿದ್ದೇವೆ’ ಎನ್ನುತ್ತಾರೆ ಗೋವಿಂದು ಪತ್ನಿ ಎಂ.ಸಲೀನಾ.

ರುಚಿ ಮೊಗ್ಗು ಅರಳಿಸುವ ಕಡಕನಾಥ

‘ಮಧ್ಯ ಪ್ರದೇಶದ ಅರಣ್ಯ ಸಮುದಾಯಗಳು ಸಾಕಣೆ ಮಾಡುತ್ತಿದ್ದ ಕಡಕನಾಥ ಕೋಳಿಗಳು ಕಡು ಕಪ್ಪು. ಮಾಂಸ ಮತ್ತು ರಕ್ತದ ಬಣ್ಣವೂ ಕಪ್ಪು. ಯಾವುದೇ ರೋಗ ಬಾಧೆಗೂ ಇವು ಬಗ್ಗುವುದಿಲ್ಲ. ಇದರ ಮಾಂಸದ ಸಾರು ರುಚಿ ಮೊಗ್ಗುಗಳನ್ನು ಅರಳಿಸುತ್ತವೆ. ಮೈಕೈ ನೋವು ತೊಲಗಿಸುತ್ತದೆ. ಬಣ್ಣಬಣ್ಣದ ಗರಿಗಳನ್ನು ಹೊಂದಿರುವ ಬೆಂಕಿ ಕೋಳಿಗಳನ್ನು ಜನ ಇಷ್ಟಪಟ್ಟು ಕೊಳ್ಳುತ್ತಾರೆ. ಫೈಟರ್ ಗಂಡು ಕೋಳಿಗೆ ಹೆಚ್ಚಿನ ಧಾರಣೆ ಇದೆ. 3 ತಿಂಗಳಲ್ಲಿ ಹೆಚ್ಚಿನ ಆರೈಕೆ ಇಲ್ಲದೆ ಬೆಳೆಯುವ ಇವುಗಳ ಬೆಲೆಯೂ ಅಧಿಕ’ ಎನ್ನುತ್ತಾರೆ ಕೋಳಿ ವ್ಯಾಪಾರಿ ಪಟ್ಟಣದ ಸುರೇಶ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT