ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಪದವೀಧರ

ಹನೂರು: ನಾಟಿಕೋಳಿ, ಮೇಕೆ ಸಾಕಣೆ, ತಂದೆಯ ಬೆಂಬಲ
Last Updated 10 ನವೆಂಬರ್ 2022, 15:52 IST
ಅಕ್ಷರ ಗಾತ್ರ

ಹನೂರು: ಪದವಿ ಪಡೆದು ಕೆಲಸ ಅರಸಿಕೊಂಡು ಯುವಕರು ಬೆಂಗಳೂರು, ಮೈಸೂರು ಮುಂತಾದ ನಗರಗಳ ಕಡೆ ಮುಖ ಮಾಡುತ್ತಿರುವ ಇಂದಿನ ದಿನಗಳಲ್ಲಿ ಇಲ್ಲೊಬ್ಬ ಯುವಕ ಪದವಿ ಪಡೆದರೂ ನಗರಗಳತ್ತ ಮುಖ ಮಾಡದೆ, ಹೈನುಗಾರಿಕೆ ಮಾಡುವ ಮೂಲಕ ವರ್ಷಕ್ಕೆ ಲಕ್ಷಾಂತರ ಆದಾಯ ಗಳಿಸುತ್ತಿದ್ದಾರೆ.

ಲೊಕ್ಕನಹಳ್ಳಿ ಗ್ರಾಮದ ಮನೋಹರನ್ ಮೈಸೂರಿನಲ್ಲಿ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್‌ಡಬ್ಲ್ಯು ಪದವಿ ಪಡೆದಿದ್ದಾರೆ. ಉದ್ಯೋಗವನ್ನು ಹುಡುಕುವ ಕೆಲಸಕ್ಕೆ ಅವರು ಮುಂದಾಗಲಿಲ್ಲ. ಇರುವ ಜಮೀನಿನಲ್ಲೇ ಸ್ವ ಉದ್ಯೋಗ ಮಾಡುವ ನಿರ್ಧಾರ ಕೈಗೊಂಡು, ಹೈನುಗಾರಿಕೆಗೆ ಇಳಿದರು. ಮನ

4 ಎಕರೆ ಜಮೀನಿನಲ್ಲಿ ಕೃಷಿ ಜತೆಗೆ ನಾಟಿಕೋಳಿ ಹಾಗೂ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಹಲವು ದಶಕಗಳಿಂದಲೂ ಈ ಭೂಮಿ ಕೃಷಿಗೆ ಮಾತ್ರ ಮೀಸಲಾಗಿತ್ತು. ಮಗನ ಹೊಸ ಸಾಹಸಕ್ಕೆ ತಂದೆಯೂ ಕೈಜೋಡಿಸುವ ಮೂಲಕ ಬೆನ್ನುಲುಬಾಗಿ ನಿಂತಿದ್ದಾರೆ.

‘ಏಳೆಂಟು ವರ್ಷಗಳ ಹಿಂದೆ ಮೇಕೆ, ಕೋಳಿಗಳಿಗೆ ಶೆಡ್ ಮಾಡುವ ಸಂದರ್ಭದಲ್ಲಿ ಯಾರೋ ಹೇಳಿದ ಮಾತನ್ನು ಕೇಳಿ ಮಗ ತಪ್ಪು ಮಾಡುತ್ತಿದ್ದಾನೆ ಎಂಬ ಆತಂಕ ಪಟ್ಟಿದ್ದೆ. ಆದರೆ ವರ್ಷ ಕಳೆಯುತ್ತಿದ್ದಂತೆ ಆತ ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿದ. ಇದನ್ನು ಗಮನಿಸಿ ನಾನು ಅವನಿಗೆ ಬೆನ್ನುಲುಬಾಗಿ ನಿಂತಿದ್ದೇನೆ. ಎಲ್ಲ ವ್ಯವಹಾರಗಳನ್ನು ಅವನೇ ನೋಡಿಕೊಳ್ಳುತ್ತಾನೆ. ಮೇಕೆಗಳನ್ನು ಮೇಯಿಸಿಕೊಂಡು ಅವುಗಳ ಆರೋಗ್ಯ, ಅನಾರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. ಕೃಷಿಗೆ ಮೀಸಲಾಗಿದ್ದ ಭೂಮಿಯಲ್ಲಿ ಇಂದು ಮಗ ಹೈನುಗಾರಿಕೆಯನ್ನು ಮಾಡಿ ಅಭಿವೃದ್ಧಿ ಹೊಂದುತ್ತಿರುವುದು ಸಂತಸ ತಂದಿದೆ’ ಎಂದು ಮನೋಹರನ್ ತಂದೆ ಸೋಮಣ್ಣ ಹೇಳಿದರು.

₹4 ಲಕ್ಷ ಆದಾಯ: ಕೃಷಿ ಹೊರತುಪಡಿಸಿ ಹೈನುಗಾರಿಕೆಯಲ್ಲೇ ವರ್ಷಕ್ಕೆ ₹4 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಪ್ರತಿ ವರ್ಷ ಮೇಕೆಯಿಂದ ₹3 ಲಕ್ಷ ಹಾಗೂ ನಾಟಿ ಕೋಳಿ ಸಾಕಣೆಯಿಂದ ₹1 ಲಕ್ಷ ಸಂಪಾದಿಸುತ್ತಿದ್ದಾರೆ. ಲೊಕ್ಕನಹಳ್ಳಿ ಭಾಗದಿಂದ ಹಾಗೂ ಜಿಲ್ಲೆಯ ವಿವಿಧೆಡೆಯಿಂದಲೂ ಗ್ರಾಹಕರು ಆಗಮಿಸಿ ಇವರ ಬಳಿ ಕೋಳಿ, ಮೇಕೆ ಖರೀದಿಸುತ್ತಾರೆ. ಎಂಟು ವರ್ಷಗಳಿಂದ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಇವರು ವ್ಯವಹಾರದಲ್ಲಿ ನೈಪುಣ್ಯ ಹೊಂದಿದ್ದು, ವರ್ಷದಿಂದ ವರ್ಷಕ್ಕೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

‘ಬಾಲ್ಯದಿಂದಲೂ ಪ್ರಾಣಿಗಳ ಮೇಲಿನ ಆಸಕ್ತಿ ಇಂದು ನನ್ನನ್ನು ಹೈನುಗಾರಿಕೆ ಮಾಡುವಂತೆ ಪ್ರೇರೇಪಿಸಿದೆ. ಬೇರೆ ಕಡೆ ಹೋಗಿ ತಿಂಗಳ ಸಂಬಳಕ್ಕಾಗಿ ದುಡಿಯುವ ಬದಲು ನಮ್ಮದೇ ಸ್ವಂತ ಉದ್ಯಮ ತೆರೆದು ದುಡಿದರೆ ಹೆಚ್ಚಾಗಿ ಸಂಪಾದಿಸಬಹುದು ಎಂಬ ಉದ್ದೇಶದಿಂದ ಇದನ್ನು ಆರಂಭಿಸಿದೆ. ಪ್ರಾರಂಭದಲ್ಲಿ ಸಾಕಷ್ಟು ಅಡೆತಡೆಗಳು ಬಂದವು. ಎಲ್ಲವನ್ನೂ ಸರಿದೂಗಿಸಿಕೊಂಡು ಬಂದೆ. ಈಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ’ ಎಂದು ಮನೋಹರನ್ ಹೇಳಿದರು.

ಮಾರ್ಚ್‌, ಏಪ್ರಿಲ್‌ನಲ್ಲಿ ಬೇಡಿಕೆ

ಹನೂರು ಭಾಗದಲ್ಲಿ ಇವರಿಗೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ವ್ಯಾಪಾರ ಹೆಚ್ಚಾಗಿರುತ್ತದೆ. ಈ ವೇಳೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ಮಾರಮ್ಮನ ಹಬ್ಬಗಳಿರುವುದರಿಂದ ಇವರು ಸಾಕಿರುವ ಮೇಕೆ, ಕೋಳಿಗಳಿಗೆ ಭಾರಿ ಬೇಡಿಕೆ ಇರುತ್ತದೆ. ಆದ್ದರಿಂದ ವರ್ಷದಿಂದ ಉತ್ತಮವಾಗಿ ಬೆಳೆಸಿ ಆ ವೇಳೆಯಲ್ಲಿ ಮಾರುತ್ತಾರೆ. ಗಂಡು ಮೇಕೆಗಳಿಗೆ ಹೆಚ್ಚು ಬೇಡಿಕೆಯಿದ್ದು, ಇದಕ್ಕಾಗಿ ತಮ್ಮ ಜಮೀನಿನಲ್ಲೇ ಅಲ್ಪ ಸ್ಥಳವನ್ನು ಮೇಕೆಗಳ ಮೇವು ಬೆಳೆಸಲು ಬಳಸಿಕೊಳ್ಳುತ್ತಿದ್ದಾರೆ. ಮೇಕೆಗಳನ್ನು ಜೀವಂತವಾಗಿ ಪ್ರತಿ ಕೆಜಿಗೆ ₹430ರಂತೆ ಮಾರುತ್ತಾರೆ.

--

4 ಎಕರೆ ಪೈಕಿ ಅಂದಾಜು ಒಂದು ಎಕರೆಯನ್ನು ಮಾತ್ರ ಹೈನುಗಾರಿಕೆ ಬಳಸಿಕೊಂಡು ಉಳಿದರಲ್ಲಿ ಕೃಷಿ ಮಾಡುತ್ತಿದ್ದೇನೆ
ಮನೋಹರನ್, ಪದವೀಧರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT