ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ಶಾಲೆ ವಂಚಿತ ಮಕ್ಕಳಿಗೆ ಹಾರ್ಮೋನಿಯಂ ಪಾಠ!

ಹಾರ್ಮೋನಿಯಂ ಮಾಸ್ಟರ್‌ ನಾಗಣ್ಣ ಅವರ ಮಾದರಿ ಕಾರ್ಯ
Last Updated 21 ಆಗಸ್ಟ್ 2021, 15:23 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಕೋವಿಡ್‌ ಕಾರಣದಿಂದ ಶಾಲಾ ಪಾಠದಿಂದ ವಂಚಿತರಾದ ಮಕ್ಕಳನ್ನು ಒಗ್ಗೂಡಿಸಿ ಅವರಿಗೆ ಸಂಗೀತ ಅಭ್ಯಾಸದ ಜೊತೆಗೆ ಶೈಕ್ಷಣಿಕ ಪಠ್ಯದಲ್ಲಿ ಬರುವ ಪದ್ಯಗಳನ್ನು ಕಲಿಸುತ್ತಿದ್ದಾರೆ ಮೂಡಲ ಅಗ್ರಹಾರ ಗ್ರಾಮದ ಹಾರ್ಮೋನಿಯಂ ಮಾಸ್ಟರ್‌ ನಾಗಣ್ಣ.

ಬಾಲ್ಯದಿಂದಲೇ ಕಲಾ ಸೇವೆಗೆ ಜೀವನವನ್ನು ಮುಡುಪಿಟ್ಟಿರುವ ನಾಗಣ್ಣ ಅವರಿಗೆ ಈಗ 74 ವರ್ಷ. ಕೋವಿಡ್‌ ಹಾವಳಿಯಿಂದಾಗಿ ರಂಗಭೂಮಿ ಕಾರ್ಯಕ್ರಮಗಳು ವಿರಳ. ಕಾರ್ಯಕ್ರಮಗಳಿಲ್ಲದ ಸಮಯದಲ್ಲಿ ಮನೆಮುಂದೆ ಕುಳಿತು ಯೋಚಿಸುತ್ತಿರುವಾಗ, ತಾವ್ಯಾಕೆ ಮಕ್ಕಳಿಗೆ ಸಂಗೀತ ಹೇಳಿಕೊಡಬಾರದು ಎಂದು ಕೊಂಡವರೇ, ಹಾರ್ಮೋನಿಯಂ ಪೆಟ್ಟಿಗೆ ಹಿಡಿದು ಹಾದಿ ಬೀದಿಯಲ್ಲಿ ಸುತ್ತಾಡುತ್ತಿದ್ದ ಮಕ್ಕಳನ್ನು ತಮ್ಮತ್ತ ಸೆಳೆದರು.

ಯಾವಾಗಲೂ ಆಟದಲ್ಲೇ ಮುಳುಗಿರುವ ಮಕ್ಕಳಿಗೆ ಸಂಗೀತ ಎಂದರೆ ಅಷ್ಟಕ್ಕಷ್ಟೆ. ಅವರನ್ನು ಸಂಗೀತದತ್ತ ಆಕರ್ಷಿಸುವುದಕ್ಕಾಗಿ ನಾಗಣ್ಣ ಅವರು ಆರಂಭದಲ್ಲಿ ರಾಷ್ಟ್ರಗೀತೆ ಜನಗಣಮನ..., ನಾಡಗೀತೆ ಜೈ ಭಾರತ ಜನನಿಯ ತನುಜಾತೇ.. ಮುಂತಾದ ಹಾಡುಗಳನ್ನು ಹಾರ್ಮೋನಿಯಂನಲ್ಲಿ ನುಡಿಸಿದರು. ಇದರಿಂದ ಆಕರ್ಷಿತರಾದ ಕೆಲವು ಮಕ್ಕಳು ನಾಗಣ್ಣ ಅವರ ಪಾಠ ಕೇಳಲು ಕುಳಿತುಕೊಂಡರು.

ಈಗ ನಾಗಣ್ಣ ಅವರು ತಮ್ಮ ಮನೆಯಲ್ಲಿ ಕುಳಿತು ಹಾರ್ಮೋನಿಯಂ‌ನಿಂದ ನಾದ ಹೊಮ್ಮಿಸುತ್ತಿದ್ದಂತೆಯೇ ಮಕ್ಕಳು ಅವರ ಸುತ್ತ ಬಂದು ಕುಳಿತುಕೊಳ್ಳುತ್ತಾರೆ.‘ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ..’ ಎಂದು ಹೇಳಿಕೊಡುವಾಗ ಮಕ್ಕಳು ಕಣ್ಣುಮುಚ್ಚಿಕೈ ಮುಗಿದು ಧ್ಯಾನಪರವಶರಾಗುತ್ತಾರೆ.

ಆರಂಭದಲ್ಲಿ ತಮ್ಮ ಮನೆಯ ಮಕ್ಕಳಿಗೆ ಸಂಗೀತ ಅಭ್ಯಾಸ ಹೇಳಿಕೊಡುತ್ತಿದ್ದ ನಾಗಣ್ಣ ಅವರ ಬಳಿ ಈಗ 10 ಮಕ್ಕಳು ಸಂಗೀತ ಅಭ್ಯಾಸಕ್ಕೆ ಬರುತ್ತಿದ್ದಾರೆ. ಮಹದೇಶ್ವರ, ಮಂಟೇಸ್ವಾಮಿ, ಸರಸ್ವತಿ, ಚಾಮುಂಡೇಶ್ವರಿ ಭಕ್ತಿ ಗೀತೆಗಳನ್ನು ಹೇಳಿಕೊಡುತ್ತಾರೆ. ಜತೆಗೆ ಬಸವೇಶ್ವರ, ಗುರುಮಲ್ಲೇಶ್ವರ ಭಜನಾ ಗೀತೆಗಳನ್ನು ಹೇಳಿಕೊಡುತ್ತಾರೆ.

ಬಾಲ್ಯದಲ್ಲೇ ರಂಗಭೂಮಿ ಸೆಳೆತ: ನಾಗಣ್ಣ ಅವರಿಗೆ ರಂಗಭೂಮಿಯ ಸೆಳೆತ ಬಾಲ್ಯದಿಂದಲೇ ಇತ್ತು. ಚಿಕ್ಕ ವಯಸ್ಸಿನಲ್ಲೇ ಗ್ರಾಮದ ನಾಗರಾಜಶಾಸ್ತ್ರಿ ಅವರಿಂದ ಸಂಗೀತ ಕಲಿತು, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವುದಕ್ಕಾಗಿ ಬಣ್ಣ ಹಚ್ಚಿದ್ದರು. ಅಂದಿನಿಂದ ಇಂದಿನವರೆಗೂ ಕಲಾ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಬೇಡರ ಕಣ್ಣಪ್ಪ, ಕುರುಕ್ಷೇತ್ರ, ಧಕ್ಷಯಜ್ಞ, ಪ್ರಭುಲಿಂಗಲೀಲೆ, ದಾನಶೂರ ಕರ್ಣ, ರಾಜವಿಕ್ರಮ... ಮುಂತಾದ ಪೌರಾಣಿಕ ನಾಟಕಗಳಲ್ಲದೇ, ಸಾಮಾಜಿಕ ನಾಟಕಗಳು ಸೇರಿದಂತೆ 1,500ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿ ಹಾರ್ಮೋನಿಯಂ ನುಡಿಸಿದ್ದಾರೆ.

ರಂಗಭೂಮಿಯ ಹಾರ್ಮೋನಿಯಂ ನಾಗಣ್ಣ

ಹರಿಕಥೆ ಸೇರಿದಂತೆ ಮಹದೇಶ್ವರ, ಮಂಟೇಸ್ವಾಮಿ ಜಾನಪದ ಕಾವ್ಯಗಳಿಗೂ ಹಾರ್ಮೋನಿಯಂ ನುಡಿಸಲು ತೆರಳುವ ನಾಗಣ್ಣ ಅವರು, ಚಾಮರಾಜನಗರ ಹಾಗೂ ನಂಜನಗೂಡು ತಾಲ್ಲೂಕುಗಳಲ್ಲಿ ಹಾರ್ಮೋನಿಯಂ ನಾಗಣ್ಣ ಎಂದೇ ಪ್ರಸಿದ್ಧಿ. ದಸರಾ ಸಮಯದಲ್ಲಿ ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಇವರಿಗೆ ಆಹ್ವಾನ ಇರುತ್ತದೆ. ಸಿದ್ಧಗಂಗೆ, ಮಹದೇಶ್ವರ ಬೆಟ್ಟ, ಮೈಸೂರಿನ ವಸ್ತುಪ್ರದರ್ಶನ, ಜಗನ್ಮೋಹನ ಅರಮನೆ ಸೇರಿದಂತೆ ನೆರೆಯ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಪೌರಾಣಿಕ ನಾಟಕಗಳಿಗೆ ಹಾರ್ಮೋನಿಯಂ ನುಡಿಸಿದ್ದಾರೆ.

ಮೈಸೂರು, ಮಂಡ್ಯ ಹಾಗೂ ಚಾಮರಾಜನಗರದ ವಿವಿಧ ಸ್ಥಳಗಳಲ್ಲಿರುವ ಸಿ.ಅಶ್ವಥ್ ಕಲಾ ಬಳಗ, ಗಂಧರ್ವ ಕಲಾ ಸಂಘ, ಸುತ್ತೂರು ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ.

‘ಮಕ್ಕಳಲ್ಲಿ ಸಂಗೀತ ಕಲಿಯಲು ಆಸಕ್ತಿ ಇಲ್ಲ. ಅವರಿಗೆ ಸಣ್ಣ ವಯಸ್ಸಿನಿಂದಲೇ ಸಂಗೀತದ ರುಚಿ ತೋರಿಸಬೇಕು. ಉಚಿತವಾಗಿ ಸಂಗೀತ ಹೇಳಿಕೊಡುತ್ತೇನೆ ಎಂದರೂ ಕೆಲವು ಮಕ್ಕಳು ಬರುವುದಿಲ್ಲ. ಬಲವಂತವಾಗಿ ಕೂರಿಸಿ ಅವರೇ ಹಾಡುವಂತೆ ಪ್ರೇರೇಪಿಸಿದಾಗ ಮಕ್ಕಳು ಬರುತ್ತಾರೆ’ ಎಂದು ನಾಗಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT