ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಹೆಸರಿಗಷ್ಟೇ ಹೊನ್ನ ಹೊಳೆ, ಒಡಲೆಲ್ಲ ಬರೀ ಕೊಳೆ

ಕಾವೇರಿ ಉಪ ನದಿ ಸುವರ್ಣಾವತಿಗೆ ಸೇರುತ್ತಿದೆ ಕೊಳಚೆ ನೀರು, ಶುದ್ಧೀಕರಿಸಿ ಹರಿಸಲು ಒತ್ತಾಯ
Last Updated 29 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕನ್ನು ಪೂರ್ವ, ಪಶ್ಚಿಮವಾಗಿ ವಿಭಾಗಿಸುವ ಸುವರ್ಣಾವತಿ ನದಿಗೆ ‘ಹೊನ್ನ ಹೊಳೆ’ ಎಂಬ ಹೆಸರು ಇದೆ. ಒಂದು ಕಾಲದಲ್ಲಿ ಶುದ್ಧ ಕುಡಿಯುವ ನೀರು ಮತ್ತು ಅಂತರ್ಜಲ ಸಮೃದ್ಧತೆಗೆ ನೆರವಾಗಿದ್ದ ಸುವರ್ಣಾವತಿ ಹೊಳೆ ಬತ್ತಿ ಹೋಗಿ ಹಲವು ವರ್ಷಗಳೇ ಸಂದಿವೆ.

ಕಬಿನಿ ಜಲಾಶಯ ತುಂಬಿದರೆ ಮಾತ್ರ, ಸುವರ್ಣೆಯಲ್ಲಿ ಒಂದಿಷ್ಟು ಸಮಯ ನೀರು ಹರಿಯುತ್ತದೆ. ಅಭಿವೃದ್ಧಿಯ ಹಿಂದೆ ಓಡುತ್ತಿರುವ ತಾಲ್ಲೂಕಿನ ಪಟ್ಟಣ ಹಾಗೂ ಗ್ರಾಮಗಳಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಲಕ್ಷಾಂತರ ಲೀಟರ್ ಕೊಳಚೆ ನೀರು ಈಗ ಹೊನ್ನ ಹೊಳೆಯ ಒಡಲಿಗೆ ಸೇರುತ್ತಿದೆ. ಈ ಕಲುಷಿತ ನೀರು ನದಿ ಪಾತ್ರವನ್ನು ಮಲಿನಗೊಳಿಸುತ್ತಿದೆ. ಮುಂದಿನ ಪೀಳಿಗೆಗೆ ನದಿಯನ್ನು ಉಳಿಸಬೇಕಾದರೆ, ಮೊದಲು ಹೊಳೆಗೆ ತ್ಯಾಜ್ಯ ನೀರು ಸೇರುವುದನ್ನು ತಡೆಯಬೇಕು ಎಂದು ಹೇಳುತ್ತಾರೆ ಪರಿಸರ ಪ್ರೇಮಿಗಳು.

ನದಿ ದಂಡೆ ಸಮೀಪದ ಜನವಸತಿ ಪ್ರದೇಶಗಳಲ್ಲಿ ಬಳಕೆ ಮಾಡಿದ ದ್ರವ ತ್ಯಾಜ್ಯ, ಶೌಚದ ಕಲ್ಮಶ, ಪಟ್ಟಣದ ಕೊಳಚೆ ನೇರವಾಗಿ ನದಿಗೆ ಸೇರುತ್ತಿದೆ. ಹಲವು ಕಡೆಗಳಲ್ಲಿ ಸ್ಥಳೀಯ ಆಡಳಿತಗಳೇ ಕಾಂಕ್ರೀಟ್‌ ಚರಂಡಿಯನ್ನು ನೇರವಾಗಿ ನದಿಗೆ ಸಂಪರ್ಕಿಸಿವೆ.

ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಹರಿಯುವ ನದಿಯ ನೀರಿನೊಂದಿಗೆ ಈ ತ್ಯಾಜ್ಯದ ರಾಶಿಯೂ ಸೇರುತ್ತಿದೆ. ಇದರಿಂದಾಗಿ ಹೊಳೆಯಲ್ಲಿ ಕಂಡುಬರುತ್ತಿದ್ದ ಸಸಿಲೆ ಮೀನು ಮತ್ತು ಜಲಚರ ಜೀವಿಗಳಿಗೆ ಕಂಟಕ ಎದುರಾಗಿದೆ.

‘ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಮಲಿನ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು, ಜೈವಿಕ ಆಮ್ಲಜನಕ ಪ್ರಮಾಣ (ಬಯೊಲಾಜಿಲ್ ಆಕ್ಸಿಜನ್ ಡಿಮ್ಯಾಂಡ್) ನಿಯಂತ್ರಿಸಿ ಸಂಸ್ಕರಣೆ ಮಾಡಿದ ನೀರನ್ನು ನದಿಗೆ ಹರಿಸಬೇಕು ಎಂದು ಹೈಕೋರ್ಟ್ ನೀಡಿರುವ ಸೂಚನೆಯ ಪಾಲನೆ ಆಗುತ್ತಿಲ್ಲ’ ಎಂಬುದು ಪರಿಸರ ಪ್ರೇಮಿಗಳ ದೂರು.

30 ಕಿ.ಮೀ ಹರಿಯುವ ನದಿ: ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಬಿಆರ್‌ಟಿ ವನ್ಯಧಾಮ. ಇಲ್ಲಿಂದ ಬೆಟ್ಟದ ಸಣ್ಣ ತೊರೆಗಳು ಸುವರ್ಣಾವತಿ ಜಲಾಶಯ ಕೂಡಿಕೊಳ್ಳುತ್ತವೆ. ಜಲಾವರ ತುಂಬಿದಾಗಸುವರ್ಣಾವತಿ ನದಿಗೆ ನೀರು ಹರಿಸಲಾಗುತ್ತದೆ. ನಂತರ ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ನದಿ ಸುಮಾರು 30 ಕಿ.ಮೀ ಹರಿದು ಕಾವೇರಿ ನದಿಯ ಉಪನದಿಯಾಗಿ ಸೇರಿಹೋಗುತ್ತಾಳೆ.

ಒಡಲು ಖಾಲಿ: ಹಲವು ದಶಕಗಳಿಂದ ಸುವರ್ಣಾವತಿ ನದಿಯ ಒಡಲನ್ನು ಮರಳಿಗಾಗಿ ಬಗೆಯಲಾಗುತ್ತಿದೆ. ಕೆಲವು ಕಡೆಗಳಲ್ಲಿ ಹೊಳೆ ಪಾತ್ರವೇ ಬದಲಾಗಿದೆ. ನೀರು ನದಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿದು ಹಲವು ವರ್ಷಗಳೇ ಉರುಳಿವೆ. ಈ ನಡುವೆ, ಕಬಿನಿ ಜಲಾಶಯದಿಂದ ಬೇಸಿಗೆ ಅವಧಿಯಲ್ಲಿ ನೀರು ಹರಿದಾಗ, ಚಾಮರಾಜನಗರ ತಾಲ್ಲೂಕಿನ ಹೊಮ್ಮ ಗ್ರಾಮದ ಬಳಿ ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತದೆ. ಇದರಿಂದ ಈ ಭಾಗಗಳ ನದಿ ಸಮೀಪದ ಕೊಳವೆ ಬಾವಿ, ಕೆರೆ ಮತ್ತು ಜಾನುವಾರುಗಳಿಗೆ ನೀರು ಪೂರೈಕೆ ಆಗುತ್ತದೆ.

ಯಳಂದೂರು ತಾಲ್ಲೂಕಿನ ಅಂಬಳೆ, ಯರಿಯೂರು, ಗಣಿಗನೂರು, ಮದ್ದೂರು, ಅಗರ-ಮಾಂಬಳ್ಳಿ, ಕೊಳ್ಳೇಗಾಲ ತಾಲ್ಲೂಕಿನ ಮುಡಿಗುಂಡ ಮತ್ತಿತರ ಗ್ರಾಮಗಳ ಮಲಿನಯುಕ್ತ ನೀರು ಹೊಳೆಗೆ ನೇರವಾಗಿ ಹರಿಯುತ್ತಿದೆ. ನಾಗರಿಕರು ಒಳ ಚರಂಡಿ (ಯುಜಿಡಿ) ಇಲ್ಲದ ನೆಪದಿಂದ ನದಿ ಸಮೀಪ ಕಾಲುವೆಗಳಿಗೆ ದಿನನಿತ್ಯದ ದ್ರವ ತ್ಯಾಜ್ಯಗಳನ್ನು ಹೊಳೆಗೆ ಹರಿಸುತ್ತಾರೆ. ಅಲ್ಲದೇ, ತಾಲ್ಲೂಕಿನಲ್ಲಿರುವ ರೇಷ್ಮೆ ಸಂಸ್ಕರಣ ಘಟಕಗಳ ವಿಷಯುಕ್ತ ತ್ಯಾಜ್ಯ ಕೂಡ ನದಿಗೆ ಹರಿಯುತ್ತದೆ. ಇದಕ್ಕೆ ಕಡಿವಾಣ ಬೀಳುವ ಅಗತ್ಯವಿದೆ ಎಂದು ಹೇಳುತ್ತಾರೆ ಪ್ರಜ್ಞಾವಂತ ನಾಗರಿಕರು.

ನಾಗರಿಕರು ಏನಂತಾರೆ?

ಪಂಚಾಯಿತಿಗಳು ಕೊಳಚೆ ನೀರನ್ನು ಶುದ್ಧಗೊಳಿಸಿ ಹರಿಸುವ ಬಗ್ಗೆ ಯಾವ ಯೋಜನೆಗಳನ್ನು ರೂಪಿಸಿಲ್ಲ. ನೇರವಾಗಿಕೊಳಚೆ ನೀರು ‌ನದಿಗೆ ಸೇರುತ್ತಿರುವುದರಿಂದ ನದಿ ಕಲುಷಿತಗೊಳ್ಳುತ್ತಿದೆ. ಇರುವ ಜಲಚರಗಳಿಗೂ ಸಂಕಷ್ಟ ಎದುರಾಗಿದೆ. ತಾಲ್ಲೂಕು ಆಡಳಿತ ತಕ್ಷಣವೇ ನದಿಗೆ ತ್ಯಾಜ್ಯ ‌ನೀರು ‌ಸೇರದಂತೆ ಮಾಡಬೇಕು. ಬತ್ತಿ ಹೋದ ನದಿಯನ್ನು ಪುನರುಜ್ಜೀವನ ಗೊಳಿಸಲು‌ ಕ್ರಮ‌ಕೈಗೊಳ್ಳಬೇಕು

- ಅಂಬಳೆ ಶಿವಾನಂದಸ್ವಾಮಿ,ವಕೀಲ

ಕೆಲವು ಗ್ರಾಮಗಳಲ್ಲಿ ಎಲ್ಲ ಕಲ್ಮಶ ನೀರನ್ನು ನದಿಗೆ ಸೇರಿಸಲಾಗುತ್ತದೆ. ನದಿಯಿಂದ ಕೆರೆಗೆ ನೀರನ್ನು ತುಂಬಿಸುವಾಗ ತ್ಯಾಜ್ಯವೂ ಸೇರುತ್ತದೆ. ಇದು ಜಾನುವಾರು ಹಾಗೂ ಜಲಜೀವಿಗಳ ಸೇವನೆಗೂ ಮಾರಕ. ನದಿ ತೀರದ ಮುಂದಿನ ಗ್ರಾಮ ಮತ್ತು ಪಟ್ಟಣದ ಜನರ ಆರೋಗ್ಯದಮೇಲೂ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ, ಕೊಳಚೆ ಸೇರದಂತೆ ಕ್ರಮವಹಿಸಬೇಕು

- ಸಂತೇಮರಹಳ್ಳಿ ಸ್ನೇಕ್‌ ಮಹೇಶ್,ಪರಿಸರ ಪ್ರೇಮಿ

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಚರಂಡಿ ನೀರು ನೇರವಾಗಿ ನದಿ ಸೇರುವಂತೆ ಸಿಮೆಂಟ್ ಡೆಕ್ ನಿರ್ಮಿಸಲಾಗಿದೆ. ಇದರಿಂದ ಜನರು ದ್ರವ ತ್ಯಾಜ್ಯಗಳನ್ನು ನದಿಗೆ ಸುಲಭವಾಗಿ ಹರಿಸುತ್ತಾರೆ. ಇದರಿಂದ ರೋಗ-ರುಜಿನ ಹರಡುತ್ತದೆ. ನದಿ ಪರಿಸರ ಉಳಿಸುವಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು

-ಶಕೀಲ್ ಅಹಮದ್,ಮಾಂಬಳ್ಳಿ

ತ್ಯಾಜ್ಯ ನೀರು ಶುದ್ಧೀಕರಣಕ್ಕೆ ಕ್ರಿಯಾ ಯೋಜನೆ

ಎಲ್ಲ ಬಡಾವಣೆಗಳ ಯುಜಿಡಿ ಜಾಲ ಬೆಸೆದು, ಮಲಿನ ನೀರು ಶುದ್ಧೀಕರಿಸಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಈಗ ಯರಿಯೂರು ಕಾಲುವೆ ಮೂಲಕ ದ್ರವ ತ್ಯಾಜ್ಯ ಹೊರ ಸಾಗಿಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮದಂತೆ ನದಿಗೆ ಕೊಳಚೆ ನೀರು ಸೇರದಂತೆ ಎಚ್ಚರ ವಹಿಸಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ಮುಡಿಗುಂಡ ಸಮೀಪ ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕ ತೆರೆದು, ಕಾಂಪೋಸ್ಟ್ ಗೊಬ್ಬರ ತಯಾರಿಸಲು ಸಿದ್ಧತೆ ನಡೆಸಲಾಗಿದೆ.

-ಎಂ.ಸಿ. ನಾಗರತ್ನ,ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಯಳಂದೂರು

ತ್ಯಾಜ್ಯ ನೀರು ತಡೆಗೆ ಕ್ರಮ

ನದಿ ದಂಡೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ (ಪಿಡಿಒ) ಈ ಬಗ್ಗೆ ಶೀಘ್ರಮಾಹಿತಿ ಪಡೆಯಲಾಗುವುದು. ಗ್ರಾಮಗಳ ಕೊಳಚೆ ನೀರನ್ನು ಶುದ್ಧೀಕರಿಸಿ ನಂತರ ಹೊಳೆಗೆ ಬಿಡುವಂತೆ ಸೂಚಿಸಲಾಗುವುದು. ಶುದ್ಧೀಕರಿಸಿದ ನೀರನ್ನು ಆಸಕ್ತ ರೈತರಿಗೆ ಮರು ಬಳಕೆಗೆ ಒದಗಿಸಲು ಚರ್ಚೆ ನಡೆಸಲಾಗುವುದು.

-ಬಿ.ಕೆ.ಸುದರ್ಶನ್, ತಹಶೀಲ್ದಾರ್, ಯಳಂದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT