ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ವರುಣನ ಆರ್ಭಟ: ಬಿತ್ತನೆಗೆ ಅಡ್ಡಿ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಮುಂದುವರಿದ ಮಳೆ, ನಿಲ್ಲುವುದಕ್ಕೆ ಕಾಯುತ್ತಿರುವ ಕೃಷಿಕರು
Published 23 ಮೇ 2024, 5:33 IST
Last Updated 23 ಮೇ 2024, 5:33 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕು ವ್ಯಾಪ್ತಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಬಿತ್ತನೆಗೆ ಅಡ್ಡಿಯಾಗಿದೆ. 

ಬೆಳಿಗ್ಗೆ ಸ್ವಲ್ಪ ಬಿಸಿಲು ಬಂದರೂ, ನಂತರ ಮೋಡ ಕವಿದು ಒಮ್ಮೆ ಜೋರು ನಂತರ ಜಿಟಿ ಮಳೆಯಾಗುತ್ತಿದೆ. ತಾಲ್ಲೂಕಿನಾದ್ಯಾಂತ ಈಗಾಗಲೇ ಬಿತ್ತನೆ ಮುಗಿದಿರಬೇಕಿತ್ತು. 15 ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದಿರುವುದರಿಂದ ಬಿತ್ತನೆ ತಡವಾಗಿದೆ. ಭೂಮಿಯಲ್ಲಿ ಹೆಚ್ಚು ತೇವಾಂಶ ಇರುವುದರಿಂದ ಜಮೀನಿಗೆ ಟ್ರ್ಯಾಕ್ಟರ್‌ಗಳು ಬರುತ್ತಿಲ್ಲ. ಉಳುಮೆ ಸಾಧ್ಯವಾಗುವುದಿಲ್ಲ. ಹಾಗಾಗಿ ಒಂದು ಬಾರಿ ಉಳುಮೆ ಮಾಡಿ ರೋಟಾವೇಟರ್ ಓಡಿಸುವ ಸಂದರ್ಭದಲ್ಲಿ ಮಳೆಯಾದ್ದರಿಂದ ಇನ್ನೂ ಬಿತ್ತನೆಗೆ ಸಿದ್ದತೆಯಾಗಿಲ್ಲ.

ಆರಂಭದ ಎರಡು ಮೂರು ಮಳೆಗೆ ಕೆಲವು ರೈತರು ಭೂಮಿ ಹದಗೊಳಿಸಿ ಇಟ್ಟಿದ್ದರು. ಅವರು ಮಾತ್ರ ಈಗ ಬಿತ್ತನೆ ಮಾಡಿದ್ದಾರೆ. ಮಳೆ ಪ್ರತಿ ದಿನ ಬರುತ್ತಿರುವುದರಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ. ಜೋರಾಗಿ ಮಳೆಯಾದ ಸಂದರ್ಭದಲ್ಲಿ ಜಮೀನಿನಲ್ಲಿ ನೀರು ನಿಲ್ಲುತ್ತಿದ್ದು, ಬಿತ್ತನೆ ಮಾಡಿದ ಬೀಜಗಳು ಕೊಚ್ಚಿ ಹೋಗುವ ಆತಂಕವೂ ಎದುರಾಗಿದೆ. 

ಹಂಗಳ ಹೋಬಳಿಯಲ್ಲಿ ಈ ಬಾರಿ ಹೆಚ್ಚು ಮಳೆಯಾಗಿದೆ. ಜಮೀನುಳಲ್ಲಿ ತೇವಾಂಶ ಹೆಚ್ಚಾಗಿದೆ. ಈಗಾಗಿ ಉಳುಮೆ ಮಾಡಿಸಲಾಗದೆ ಅರಿಸಿನ, ಈರುಳ್ಳಿ , ಬೆಳ್ಳುಳ್ಳಿ ಬಿತ್ತನೆ ಬೀಜ ಖರೀದಿಸಿ ಬಿಸಿಲಿಗಾಗಿ ಕಾಯುತ್ತಿದ್ದಾರೆ.

ದೇವರಹಳ್ಳಿ, ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಗ್ರಾಮದಲ್ಲಿ ಮಳೆ ಹೆಚ್ಚಾಗಿ ಬಿತ್ತನೆ ಮಾಡಿದ ಬೆಳೆಗಳೆಲ್ಲ ಕೊಚ್ಚಿ ಹೋಗಿದೆ. ಹೀಗಾಗಿ ಮತ್ತೆ ಭೂಮಿಯನ್ನು ಉಳುಮೆ ಮಾಡಿ ಬಿತ್ತನೆಗೆ ಕಾಯುವ ರೈತರ ಸಂಖ್ಯೆ ಹೆಚ್ಚಾಗಿದೆ.

ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಬರಗಿ, ಹೊಂಗಹಳ್ಳಿ, ಬೇಗೂರು, ಗೋಪಾಲಪುರ, ಹೊನ್ನೇಗೌಡನಹಳ್ಳಿ, ಕಳ್ಳಿಪುರ, ಮಂಚಹಳ್ಳಿ, ಹಂಗಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳಾದ ಬಾಳೆ, ಟೊಮ್ಯಾಟೋ, ಬದನೆ, ಈರುಳ್ಳಿ ಜಮೀನುಗಳಿಗೆ ನೀರು ನುಗ್ಗಿ ಫಸಲು ನಾಶವಾಗಿದೆ. ಜೊತೆಗೆ ತಗ್ಗು ಪ್ರದೇಶಗಳಲ್ಲಿ ನೀರು ಕೆರೆಯಂತೆ ನಿಂತಿದೆ.

‘ಮಳೆ ನಿಂತು ಎರಡು ಮೂರು ದಿನಗಳ ಕಾಲ ಬಿಸಿಲು ಬಂದರೆ ಭೂಮಿ ಒಣಗುತ್ತದೆ. ಬಳಿಕ ಉಳುಮೆ ಮಾಡಿ ಬಿತ್ತನೆ ಮಾಡಲು ಅನುಕೂಲವಾಗುತ್ತದೆ. ವಾರದ ಹಿಂದೆಯೇ ಅರಿಸಿನ ಬಿತ್ತನೆ ಮಾಡಲು ಬಿತ್ತನೆ ಬೀಜ ತರಲಾಗಿತ್ತು. ಉಳುಮೆ ಮಾಡುವಷ್ಟರಲ್ಲಿ ಶುರುವಾದ ಮಳೆ ಇನ್ನೂ ನಿಂತಿಲ್ಲ. ಬಿಸಿಲು ಬಂದರೆ ಭೂಮಿ ಒಣಗುತ್ತದೆ. ಮತ್ತೆ ಉಳುಮೆ ಮಾಡಿ ಬಿತ್ತನೆ ಮಾಡಬಹುದು’ ಎಂದು ಮೇಲುಕಾಮನಹಳ್ಳಿ ಗ್ರಾಮದ ರೈತ ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಚಾಮರಾಜನಗರ ತಾಲ್ಲೂಕಿನ ಕಿಲಗೆರೆ ಗ್ರಾಮದ ಮಧ್ಯೆ ವಿದ್ಯುತ್‌ ಕಂಬಗಳು ಬಿದ್ದಿರುವುದು
ಚಾಮರಾಜನಗರ ತಾಲ್ಲೂಕಿನ ಕಿಲಗೆರೆ ಗ್ರಾಮದ ಮಧ್ಯೆ ವಿದ್ಯುತ್‌ ಕಂಬಗಳು ಬಿದ್ದಿರುವುದು

ಮಳೆಯಿಂದ 20 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಮತ್ತೆ ಬಿತ್ತನೆ ಮಾಡಲು  ಮಳೆ ಅಡ್ಡಿಯಾಗಿದೆ. ಇನ್ನೂ ಕೆಲವರಿಗೆ ಮಳೆಯಿಂದಾಗಿ ಬಿತ್ತನೆ ಸಾಧ್ಯವಾಗಿಲ್ಲ

-ಬಾಸ್ಕರ್ ತೋಟಗಾರಿಕೆ ಸಹಾಯಕ ನಿರ್ದೇಶಕ

ಮುಂದುವರಿದ ವರ್ಷಧಾರೆ

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಬುಧವಾರವೂ ಮಳೆ ಮುಂದುವರಿದಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜಾಸ್ತಿಯೇ ಮಳೆಯಾಗಿದೆ.  ಚಾಮರಾಜನಗರ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ರಾತ್ರಿ ಉತ್ತಮ ಮಳೆ ಬಿದ್ದಿದೆ.  ಕೊಳ್ಳೇಗಾಲ ಹನೂರು ಯಳಂದೂರು ತಾಲ್ಲೂಕುಗಳಲ್ಲಿ ತುಂತುರಿನಿಂದ ಸಾಧಾರಣ ಮಳೆ ಬಿದ್ದಿದೆ.  ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಭಾಗದ ಮಂಗಲ ಜಕ್ಕಳ್ಳಿ ಎಲಚೆಟ್ಟಿ ಹುಂಡಿಪುರ ಶಿವಪುರ ಕಲ್ಲಿಗೌಡನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಧಾರಾಕಾರವಾಗಿ ಮಳೆ ಸುರಿಯಿತು. ಗಂಟೆಗಳ ಕಾಲ ಸುರಿದ ಮಳೆಗೆ ಹಳ್ಳಕೊಳ್ಳದಲ್ಲಿ  ನೀರು ಹರಿಯಿತು. ಎಲಚೆಟ್ಟಿ ಗ್ರಾಮದಲ್ಲಿ ಸುರಿದ ಮಳೆಗೆ ಬೆಳೆಗಳು ನಾಶವಾಗಿದೆ. ಮಂಗಳವಾರ ಸುರಿದ ಮಳೆಗೆ ಚಾಮರಾಜನಗರ ತಾಲ್ಲೂಕಿನ ಕಿಲಗೆರೆ- ಯಾನಗಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಇರುವ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಯಾನಗಹಳ್ಳಿ ವಿದ್ಯುತ್ ಪ್ರಸರಣ ನಿಗಮದಿಂದ ಕಿಲಗೆರೆ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಈ ಮಾರ್ಗದ ಮೂಲಕ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಲಾಗುತ್ತಿದೆ.   ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ 1.34 ಸೆಂ.ಮೀ ಮಳೆಯಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 2.14 ಸೆಂ.ಮೀ ಗುಂಡ್ಲುಪೇಟೆಯಲ್ಲಿ 2.02 ಸೆಂ.ಮೀ ಮಳೆ ಬಿದ್ದಿದೆ. ಹನೂರಿನಲ್ಲಿ 0.88 ಸೆಂ.ಮೀನಷ್ಟು ವರ್ಷಧಾರೆಯಾಗಿದೆ. ಕೊಳ್ಳೇಗಾಲದಲ್ಲಿ 0.45 ಸೆಂ.ಮೀ ಯಳಂದೂರಿನಲ್ಲಿ 0.21 ಸೆಂ.ಮೀನಷ್ಟು ಮಳೆಯಾಗಿದೆ.  ಇದೇ 26ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT