ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ನಿರ್ಲಕ್ಷಿಸಿದರೆ ಕಷ್ಟa ಕಟ್ಟಿಟ್ಟ ಬುತ್ತಿ

ರೈತ ದಸರಾದಲ್ಲಿ ಹಿರಿಯ ಪರಿಸರವಾದಿ ಯಲ್ಲಪ್ಪ ರೆಡ್ಡಿ ಎಚ್ಚರಿಕೆ
Last Updated 3 ಅಕ್ಟೋಬರ್ 2019, 16:27 IST
ಅಕ್ಷರ ಗಾತ್ರ

ಚಾಮರಾಜನಗರ: ‘ಭೂದೇವಿ, ವನದೇವಿಯರ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ನಾವು ಇನ್ನಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ’ ಎಂದು ಹಿರಿಯ ಪರಿಸರವಾದಿ ಎ.ಎನ್‌.ಯಲ್ಲಪ್ಪ ರೆಡ್ಡಿ ಅವರು ಎಚ್ಚರಿಸಿದರು.

ರೈತ ದಸರಾ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ನಾವೇ ಸಮಸ್ಯೆ ಸೃಷ್ಟಿಸಿದ್ದೇವೆ. ಅವುಗಳನ್ನು ನಾವೇ ಬಗೆಹರಿಸಬೇಕು. ವಿದೇಶಿಯರು, ಅಲ್ಲಿನ ಸಂಸ್ಥೆಗಳು ಬಂದು ಬಗೆಹರಿಸುವುದಿಲ್ಲ. ಅವರು ನಮಗೆ ಕೊಟ್ಟಿದ್ದರಿಂದ ಇಲ್ಲಿಂದ ತೆಗೆದುಕೊಂಡಿದ್ದೇ ಹೆಚ್ಚು’ ಎಂದರು.

‘ಪ್ರಕೃತಿಯನ್ನು ರಕ್ಷಣೆ ಮಾಡಿಕೊಂಡು, ಪೋಷಣೆ ಮಾಡಿಕೊಳ್ಳುವ ಕಲೆ ಹಿರಿಯರಿಗೆ ಚೆನ್ನಾಗಿ ಗೊತ್ತಿತ್ತು. ನಮ್ಮ ದೇಶಕ್ಕೆ ಬಂದು ಅಧ್ಯಯನ ಮಾಡಿದ್ದ ವಿದೇಶಿಯರು, ಇಲ್ಲಿನ ಜನರು ಪ್ರಕೃತಿಯನ್ನು ಆರಾಧಿಸುತ್ತಿರುವ ಪದ್ಧತಿ ಹಾಗೂ ಸಂರಕ್ಷಣೆ ಮಾಡುವ ವಿಧಾನಗಳನ್ನು ನೋಡಿ ಶ್ಲಾಘಿಸಿದ್ದಾರೆ.ಆದರೆ, ಆಧುನಿಕತೆಗೆ ಜೋತು ಬಿದ್ದಿರುವ ನಾವು ಹಾಗೂ ವಿದೇಶಿ ಕಂಪನಿಗಳ ಲಾಬಿ, ಸ್ವಾರ್ಥಕ್ಕೆ ಬಲಿಯಾಗಿ ನಮ್ಮ ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ’ ಎಂದರು.

‘ಲಾಬಿಯನ್ನು ಎದುರಿಸುವ ಶಕ್ತಿ ನಮಗಿಲ್ಲ. ಅವರ ಹಿಡಿತದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ವಿಷಯುಕ್ತ ಆಹಾರಕ್ಕೆ ಒಗ್ಗಿಕೊಂಡು ದುಡಿದ ಶೇ 40ರಷ್ಟು ಹಣವನ್ನು ವೈದ್ಯರಿಗೆ, ಔಷಧಿಗಳಿಗೆ ವೆಚ್ಚ ಮಾಡುತ್ತಿದ್ದೇವೆ’ ಎಂದರು.

‘ಮನುಷ್ಯ ತಾನಗಿಯೇ ಬದುಕಲು ಸಾಧ್ಯವಿಲ್ಲ. ಒಂದು ಜೇನ್ನೊಣಕ್ಕೆ ಒಂದು ಗ್ರಾಂ ಜೇನು ಸಂಗ್ರಹಿಸಲು 50 ಸಾವಿರ ಪುಷ್ಪಗಳ ಮೇಲೆ ಕುಳಿತು ಮಕರಂದ ಹೀರುತ್ತದೆ. ಆದರೆ, ಕ್ರಿಮಿನಾಶಕಗಳಿಂದ ಜೇನ್ನೊಣಗಳ ಸಂಖ್ಯೆ ಕಡಿಮೆಯಾಗುತ್ತದೆ. ತಂಪು ಪಾನೀಯ ಕುಡಿದು ಬಾಟಲಿ ಎಸೆಯುತ್ತೇವೆ. ಜೇನ್ನೊಣಗಳು ಆ ಬಾಟಲಿ ಹೊಕ್ಕು ಉಳಿದ ತಂಪು ಪಾನೀಯ ಕುಡಿದು ಸಾಯುತ್ತವೆ. ಇದರ ಜೊತೆಗೆ ಕ್ರಿಮಿನಾಶಕ ಸಿಂಪಡಿಸಿಯೂ ಕೊಲ್ಲುತ್ತೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕ್ರಿಮಿನಾಶಕಗಳ ಬಳಕೆ ಬಗ್ಗೆ ಪ್ರಸ್ತಾಪಿಸಿದ ಅವರು, ‘ಎಂಡೋಸಲ್ಫಾನ್‌ನಂತಹ ಕ್ರಿಮಿನಾಶಕಗಳನ್ನು ಇನ್ನೂ ನಾವು ಬಳಸುತ್ತಿದ್ದೇವೆ. ಅಮೆರಿಕದಲ್ಲಿ ಗರಿಷ್ಠ ಪ್ರಮಾಣದ ದಂಡ ವಿಧಿಸಲಾಗುತ್ತಿದೆ. ಗರಿಕೆ ಹುಲ್ಲು ಬರಬಾರದು ಎಂದು ನಾಶಕ ಸಿಂಪಡಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಭೂದೇವಿಯ ಸ್ತನಗಳಿಗೆ ಕತ್ತರಿ: ಚಾಮರಾಜನಗರದಲ್ಲಿ ನಡೆಯುವ ಕಲ್ಲು ಗಣಿಗಾರಿಕೆಯನ್ನು ಪ್ರಸ್ತಾಪಿಸಿದ ಅವರು, ‘ ಬೆಟ್ಟಗಳು ಭೂದೇವಿಯ ಸ್ತನಗಳು, ಹಣದ ಆಸೆಗೆ ಅದನ್ನು ಛಿದ್ರ ಛಿದ್ರ ಮಾಡಿ ರಫ್ತು ಮಾಡುತ್ತಿದ್ದೇವೆ. ಜಿಲ್ಲೆಯಿಂದ ಪಾವಗಡದವರೆಗೆ ಅದ್ಭುತವಾದ ಕಲ್ಲುಗಳಿವೆ. ಜಗತ್ತಿನ ಅತ್ಯಂತ ಹಳೆಯ ಬಂಡೆಗಳಿವು. 300 ಕೋಟಿ ವರ್ಷಗಳ ಹಿಂದೆ ಇವು ರಚನೆಗೊಂಡಿವೆ. ಭೂಮಿಯ ಸ್ತನಗಳನ್ನೇ ಕತ್ತರಿಸಿ ಹಣ ಮಾಡುತ್ತೇವೆ ಎಂಬುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ’ ಎಂದರು.

‘ನಮ್ಮ ದೇಶದಲ್ಲಿ ಬಡತನ ಇರಲು ಕಾರಣವೇ ಇಲ್ಲ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ. ಆದರೆ, ಆಧುನಿಕತೆಗೆ ಮಾರುಹೋಗಿದ್ದೇವೆ’ ಎಂದರು.

‘ಚಾಮರಾಜನಗರ ಜಿಲ್ಲೆಯಲ್ಲಿರುವಷ್ಟು ಆನೆಗಳು ಎಲ್ಲೂ ಇಲ್ಲ.ಮಹದೇಶ್ವರ ಬೆಟ್ಟ ಜೀವ ವೈವಿಧ್ಯದ ತಾಣ. ಆದರೆ, ಬಹು ರಾಷ್ಟ್ರೀಯ ಕಂಪನಿಗಳು ಅಲ್ಲಿ ರೆಸಾರ್ಟ್‌ಗಳನ್ನು ತೆರೆಯಲು ಯತ್ನಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್‌ ಅವರು, ‘ತಜ್ಞರು ನೀಡುವ ಮಾಹಿತಿಗಳನ್ನು ಪಡೆದು ಅದರ ಪ್ರಯೋಜನ ಪಡೆಯಬೇಕು’ ಎಂದರು.

‌ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಬರಗಿ‌ಚೆನ್ನಪ್ಪ, ಉಮಾವತಿ, ಸದಸ್ಯ ಸಿ.ಎನ್‌.ಬಾಲರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಜಿ.ಬಸವಣ್ಣ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎಚ್‌.ನಾರಾಯಣ ರಾವ್‌ ಇದ್ದರು.

ಪುಟ್ಟೀರಮ್ಮಗೆ ಶ್ಲಾಘನೆ
ಯಲ್ಲಪ್ಪ ರೆಡ್ಡಿ ಅವರು ನಂಜನಗೂಡು ಜಿಲ್ಲೆಯ ರೈತ ಮಹಿಳೆ ಪುಟ್ಟೀರಮ್ಮ ಅವರ ಯಶೋಗಾಥೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಪುಟ್ಟೀರಮ್ಮ ಕಾರ್ಯಕ್ರಮಕ್ಕೆ ಬಂದಿದ್ದರು. ಅವರನ್ನು ವೇದಿಕೆಗೆ ಕರೆದು ಸನ್ಮಾನಿಸಲಾಯಿತು.

‘ನಿಮ್ಮ ಜಿಲ್ಲೆಯ ಪಕ್ಕದಲ್ಲೇ ಇರುವ ಪುಟ್ಟೀರಮ್ಮ ಅವರ ನಿಮಗೆ ಗೊತ್ತಿರಲಿಕ್ಕಿಲ್ಲ. ಈಕೆಮಹಾನ್‌ ಸಂಪತ್ತು, ಮಹಾನ್‌ ರೈತ ಮಹಿಳೆ. ಕೃಷಿ ವಿಶ್ವವಿದ್ಯಾಲಯಗಳು ಮಾಡದಷ್ಟು ಸಂಶೋಧನೆಗಳನ್ನು ಮಾಡಿದ್ದಾರೆ. ವಯಸ್ಸು 82 ವರ್ಷ ಈಗಲೂ ಗಟ್ಟಿಮುಟ್ಟಾಗಿದ್ದಾರೆ’ ಎಂದರು.

‘250 ಬೆರಕೆ ಸೊಪ್ಪುಗಳ ಬಗ್ಗೆ, ಸಾವಯವ ಕೃಷಿ, ವಿವಿಧ ಬೆಳೆಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಸಾಮರ್ಥ್ಯ ಪುಟ್ಟೀರಮ್ಮ ಅವರಿಗೆ ಇದೆ. ಮಹದೇಶ್ವರ ಹಾಡುಗಳನ್ನು ದಿನಪೂರ್ತಿ ಹೇಳಬಲ್ಲರು. ಇಂತಹವರು ನಿಜವಾದ ಕೃಷಿ ವಿಜ್ಞಾನಿಗಳು’ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT