ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಬಳಸಿದರಷ್ಟೇ ಭಾಷೆಯ ಉಳಿವು: ಸಾಹಿತಿ ಮಹಾದೇವ ಶಂಕನಪು

Published 29 ನವೆಂಬರ್ 2023, 16:18 IST
Last Updated 29 ನವೆಂಬರ್ 2023, 16:18 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕರ್ನಾಟಕ ರಾಜ್ಯೋತ್ಸವ ನವೆಂಬರ್‌ ತಿಂಗಳಿಗಷ್ಟೇ ಸೀಮಿತವಾಗಬಾರದು. ಭಾಷೆಯನ್ನು ಉಳಿಸಿ ಬೆಳೆಸಲು ಕನ್ನಡವನ್ನು ರಾಜ್ಯದ ಬಳಸಬೇಕು’ ಎಂದು ಸಾಹಿತಿ ಮಹಾದೇವ ಶಂಕನಪುರ ಬುಧವಾರ ಅಭಿಪ್ರಾಯಪಟ್ಟರು. 

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದಿಂದ ಬುಧವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡಿಗರು ಕನ್ನಡದಲ್ಲೇ ಮಾತನಾಡಬೇಕು. ಬರೆಯಬೇಕು. ಆಗ ಮಾತ್ರ ಭಾಷೆ ಉಳಿಯಲು ಸಾಧ್ಯ’ ಎಂದರು. 

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಚಾಮರಾಜನಗರ ಜಿಲ್ಲೆಯ ಕೊಡುಗೆ ಅಪಾರ  ಎಂದು ಹೇಳಿದ ಅವರು, ‘ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಮ್ಮ ಜಿಲ್ಲೆಗೆ ತನ್ನದೇ ಆದ ಅಸ್ಮಿತೆಯಿದೆ. ಭಾರತದದಲ್ಲಿ ಹೆಚ್ಚು ಅರಣ್ಯ ಪ್ರದೇಶ ಉಳ್ಳ ಜಿಲ್ಲೆಗಳಲ್ಲಿ ಒಂದಾಗಿದೆ. ಕಪ್ಪುಶಿಲೆ, ರೇಷ್ಮೆ, ಶ್ರೀಗಂಧ ಜಾನಪದ ಮಹಾಕಾವ್ಯಗಳಿಂದ ಗುರುತಿಸಿಕೊಂಡಿದೆ’ ಎಂದರು. 

‘ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿ ಮಹಾಕಾವ್ಯಗಳು ನಮ್ಮ ಜಿಲ್ಲೆಯ ಹೆಮ್ಮೆ. ಮಲೆ ಮಹದೇಶ್ವರ ಕಾವ್ಯ ಫಿನ್ಲೆಂಡಿನ ಕಲೇವಾಲ ಬಿಟ್ಟರೆ ಜಗತ್ತಿನ ಎರಡನೇ ಸುದೀರ್ಘ ಮಹಾಕಾವ್ಯ. ಅನಕ್ಷರಸ್ಥರೆನಿಸಿದ ತಂಬೂರಿ ಮತ್ತು ಕಂಸಾಳೆ ಗಾಯಕರು ಇದನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ’ ಎಂದರು. 

‘ವರನಟ ಡಾ. ರಾಜ್‌ಕುಮಾರ್ ಅವರು ಜಿಲ್ಲೆಯ ಕಲಾವಿದರು. ಜಿಲ್ಲೆಯ ಹಲವಾರು ಲೇಖಕರು, ವಿದ್ವಾಂಸರು ಸಾಹಿತ್ಯ ಕೃಷಿ ಮಾಡಿ ಕೊಡುಗೆ ನೀಡಿದ್ದಾರೆ. ಕನ್ನಡ, ಸಂಸ್ಕೃತ, ತಮಿಳು ಭಾಷೆಗಳಲ್ಲಿ 965 ಶಾಸನಗಳು ನಮ್ಮ ಜಿಲ್ಲೆಯಲ್ಲಿ ದೊರೆತಿವೆ’ ಎಂದು ಮಹಾದೇವ ಶಂಕನಪುರ ಹೇಳಿದರು. 

ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ.ವರಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಎ.ಎಂ.ಶಿವಸ್ವಾಮಿ ಜಾನಪದ ಗೀತೆಗಳನ್ನು ಹಾಡಿದರು. ಕಾಲೇಜಿನ ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಎಂ. ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಹದೇವಪ್ಪ, ಸಹ ಪ್ರಾಧ್ಯಾಪಕರಾದ ಉಮೇಶ್, ಎಸ್, ಗುಣ, ವಿದ್ಯಾರ್ಥಿನಿ ವರ್ಷಾ ಹತ್ವಾರ್ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT