ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಎಸ್‌ಎಸ್‌ಎಲ್‌ಸಿ: ವಸತಿ ಶಾಲೆಗಳ ಉತ್ತಮ ಸಾಧನೆ

Published 16 ಮೇ 2024, 7:23 IST
Last Updated 16 ಮೇ 2024, 7:23 IST
ಅಕ್ಷರ ಗಾತ್ರ

ಚಾಮರಾಜನಗರ: 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಅಧೀನದಲ್ಲಿ ಬರುವ ವಸತಿ ಶಾಲೆಗಳು ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿವೆ.

ಜಿಲ್ಲೆಯಲ್ಲಿ 21 ವಸತಿ ಶಾಲೆಗಳಿದ್ದು, 12 ಶಾಲೆಗಳು ಸಮಾಜ ಕಲ್ಯಾಣ ಇಲಾಖೆ, ಏಳು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಎರಡು ಶಾಲೆಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತವೆ.

ಜಿಲ್ಲೆಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸಿರುವ ಎಂಟು ಶಾಲೆಗಳ ಪೈಕಿ ನಾಲ್ಕು ವಸತಿ ಶಾಲೆಗಳು. 21 ಶಾಲೆಗಳ ಪೈಕಿ ನಾಲ್ಕು ಸಂಸ್ಥೆಗಳನ್ನು ಬಿಟ್ಟು ಉಳಿದ 17 ಶಾಲೆಗಳು ಶೇ 90ಕ್ಕೂ ಹೆಚ್ಚು ಫಲಿತಾಂಶ ದಾಖಲಿಸಿವೆ. ಇವುಗಳಲ್ಲಿ 12 ಶಾಲೆಗಳಲ್ಲಿ ಶೇ 95ಕ್ಕೂ ಹೆಚ್ಚು ಮಕ್ಕಳು ತೇರ್ಗಡೆಯಾಗಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಚಾಮರಾಜನಗರ ತಾಲ್ಲೂಕಿನ ಹರವೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಜ್ಯೋತಿಗೌಡನಪುರದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಹರದನಹಳ್ಳಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಫಲಿತಾಂಶ ದಾಖಲಿಸಿವೆ.

ಹನೂರು ತಾಲ್ಲೂಕಿನ ಹೂಗ್ಯಂನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾತ್ರ ಶೇ 51ರಷ್ಟು ಫಲಿತಾಂಶ ದಾಖಲಿಸಿ, ಕೊನೆಯ ಸ್ಥಾನದಲ್ಲಿದೆ. ಹನೂರಿನ ಮಂಗಲದ ಏಕಲವ್ಯ ಮಾದರಿ ಶಾಲೆ ಶೇ  70.37, ಹನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ 72.91,  ಗುಂಡ್ಲುಪೇಟೆ ತಾಲ್ಲೂಕಿನ ಗರಗನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ 77.5 ಮತ್ತು ಚಾಮರಾಜನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ 84ರಷ್ಟು ಫಲಿತಾಂಶ ದಾಖಲಿಸಿ ನಂತರದ ಸ್ಥಾನದಲ್ಲಿವೆ. 

ಉತ್ತಮ ಸಾಧನೆಗೆ ಕಾರಣ ಏನು?: ವಸತಿ ಶಾಲೆಯಾಗಿರುವುದರಿಂದ ಮಕ್ಕಳು ವರ್ಷಪೂರ್ತಿ ಶಿಕ್ಷಕರ ನಿಗಾದಲ್ಲಿ ಇರುತ್ತಾರೆ. ಹೀಗಾಗಿ, ಮಕ್ಕಳು ಚೆನ್ನಾಗಿ ಓದುತ್ತಾರೆ. ಬೋಧಕರು ಕೂಡ  ಪ್ರತಿಯೊಬ್ಬ ವಿದ್ಯಾರ್ಥಿ, ಅವರ ಶೈಕ್ಷಣಿಕ ಚಟುವಟಿಕೆಯ ಮೇಲೆ ಗಮನ ನೀಡುವುದಕ್ಕಾಗಿ ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು ಮತ್ತು ಪ್ರಾಂಶುಪಾಲರು.  

‘ಮಕ್ಕಳು ವರ್ಷಪೂರ್ತಿ ನಮ್ಮೊಂದಿಗೆ ಇರುವುದು ಹೆಚ್ಚು ಫಲಿತಾಂಶ ದಾಖಲಾಗಲು ಪ್ರಮುಖ ಕಾರಣ. ಪ್ರತಿ ದಿನ ಶಾಲೆಗೆ ಬಂದು ಮನೆಗೆ ಹೋಗುವ ಮಕ್ಕಳು ಸಂಜೆ ಮತ್ತು ಬೆಳಗಿನ ಹೊತ್ತು ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆಯೇ ಇಲ್ಲವೇ ಎಂಬುದು ಗೊತ್ತಾಗುವುದಿಲ್ಲ. ಆದರೆ, ವಸತಿ ಶಾಲೆಗಳಲ್ಲಿ ಹಾಗಲ್ಲ. ತರಗತಿಗಳು ಮುಗಿದ ಬಳಿಕವೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನಿಗಾ ಇಡುತ್ತೇವೆ’ ಎಂದು ಮೂರು ವರ್ಷಗಳಿಂದ ಶೇ100ರಷ್ಟು ಫಲಿತಾಂಶ ದಾಖಲಿಸುತ್ತಿರುವ ಹರವೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಎಂ.ಆರ್‌.ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮಲ್ಲಿ ಶಾಲೆ ಬಿಟ್ಟ ನಂತರ, ಬೆಳಗಿನ ಅವಧಿಯ ಅಧ್ಯಯನದ ಮೇಲೆ ನಿಗಾ ಇಡಲು ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ವಾರಕ್ಕೊಬ್ಬ ಶಿಕ್ಷಕರಿಗೆ ಈ ಜವಾಬ್ದಾರಿ ನೀಡಲಾಗುತ್ತದೆ. ಬೆಳಿಗ್ಗೆ, ಸಂಜೆ, ರಾತ್ರಿ ಹೊತ್ತು ಕೂಡ ಮಕ್ಕಳು ಅಭ್ಯಾಸ ಮಾಡುವಂತೆ ಮಾಡಲಾಗುತ್ತದೆ. ಭಾನುವಾರವೂ ತರಗತಿ ನಡೆಸಲಾಗುತ್ತದೆ’ ಎಂದು ವಿವರಿಸಿದರು. 

‘ಎಲ್ಲ ವಸತಿ ಶಾಲೆಗಳು ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿವೆ. ನುರಿತ ಶಿಕ್ಷಕರೂ ಇಲ್ಲಿದ್ದಾರೆ. ಇಂಗ್ಲಿಷ್‌ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವಾರ್ಷಿಕ ಪರೀಕ್ಷೆಗೂ ಮುನ್ನ ಅಣಕು ಪರೀಕ್ಷೆಗಳನ್ನು ನಡೆಸಲಾಗಿತ್ತು. ಶಿಕ್ಷಣ ಇಲಾಖೆ ಮಾತ್ರವಲ್ಲದೆ, ಕ್ರೈಸ್‌ನಿಂದಲೂ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆದಿವೆ. ಶೈಕ್ಷಣಿಕ ವರ್ಷದ ಅವಧಿಯಲ್ಲಿ ಮಕ್ಕಳು ಹೆಚ್ಚು ಸಮಯ ಶಾಲೆಯಲ್ಲೇ ಇರುವಂತೆ ನೋಡಿಕೊಂಡಿದ್ದೇವೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಹೇಳಿದರು. 

‘ನಮ್ಮಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಿ, ಅಂತರ ವಸತಿ ಶಾಲೆಗಳ ಶಿಕ್ಷಕರು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ್ದರು. ಇದಲ್ಲದೆ, ನಾವು ತರಗತಿಗಳಲ್ಲಿ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳ ಗುಂಪನ್ನು ಮಾಡುತ್ತೇವೆ. 15 ದಿನಗಳಿಗೊಮ್ಮೆ ಪರೀಕ್ಷೆಗಳನ್ನು ಮಾಡಿ, ಮಕ್ಕಳ ಅಧ್ಯಯನವನ್ನು ಒರೆಗೆ ಹಚ್ಚುತ್ತೇವೆ’ ಎಂದು ಸವಿತಾ ಮಾಹಿತಿ ನೀಡಿದರು.

ಈ ಬಾರಿ ಪರೀಕ್ಷೆ ಕಟ್ಟುನಿಟ್ಟಾಗಿ ನಡೆದರೂ ನಮ್ಮ ವಸತಿ ಶಾಲೆಗಳ ಮಕ್ಕಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಪ್ರಾಂಶುಪಾಲರು ಬೋಧಕರು ಸಿಬ್ಬಂದಿಯ ಶ್ರಮ ಇದರ ಹಿಂದಿದೆ.
ಮಲ್ಲಿಕಾರ್ಜುನ ಬಿ. ಸಮಾಜ ಕಲ್ಯಾಣ ಉಪನಿರ್ದೇಶಕ
ಆದರ್ಶ ಶಾಲೆಗಳ ಫಲಿತಾಂಶ ಉತ್ತಮವಾಗಿದೆ. ಮಕ್ಕಳು ಹೆಚ್ಚು ಅಂಕ ಗಳಿಸಿದ್ದಾರೆ. ನುರಿತ ಶಿಕ್ಷಕರ ಪ್ರಯತ್ನ ಮಕ್ಕಳ ಛಲ ಪೋಷಕರ ಸಹಕಾರ ಇದಕ್ಕೆ ಕಾರಣ.
ರಾಮಚಂದ್ರರಾಜೇ ಅರಸ್‌ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ
ಆದರ್ಶ ಶಾಲೆಗಳ ಸಾಧನೆ
ಜಿಲ್ಲೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿರುವ ಎಂಟು ಶಾಲೆಗಳಲ್ಲಿ ಎರಡು ಆದರ್ಶ ವಿದ್ಯಾಲಯಗಳೂ ಸೇರಿವೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ತಲಾ ಒಂದೊಂದು ಆದರ್ಶ ವಿದ್ಯಾಲಯಗಳಿವೆ. ಚಾಮರಾಜನಗರದ ಮಲ್ಲಯ್ಯನಪುರದಲ್ಲಿರುವ ಆದರ್ಶ ಶಾಲೆ ಮತ್ತು ಕೊಳ್ಳೇಗಾಲದ ಆದರ್ಶ ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿವೆ. ಅಲ್ಲದೇ ಜಿಲ್ಲೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ 10 ವಿದ್ಯಾರ್ಥಿಗಳ ಪೈಕಿ ಎಂಟು ಮಂದಿ ಆದರ್ಶ ವಿದ್ಯಾಲಯಗಳ ಮಕ್ಕಳು.  ಆದರ್ಶ ಶಾಲೆ ಹಾಗೂ ಮಕ್ಕಳ ಸಾಧನೆ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್‌ ಪ್ರತಿಕ್ರಿಯಿಸುವುದು ಹೀಗೆ... ‘ಆದರ್ಶ ಶಾಲೆಗಳ ಪ್ರವೇಶಾತಿಗಾಗಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಹಾಗಾಗಿ ಪ್ರತಿಭಾವಂತ ಮಕ್ಕಳೇ ಅಲ್ಲಿಗೆ ಪ್ರವೇಶ ಪಡೆಯುತ್ತಾರೆ. ಶಾಲೆಗಳು ಇಂಗ್ಲಿಷ್‌ ಮಾಧ್ಯಮದಲ್ಲಿ ನಡೆಯುತ್ತವೆ. ಅನುಭವಿ ಶಿಕ್ಷಕರು ಅಲ್ಲಿರುತ್ತಾರೆ. ಮಕ್ಕಳ ಪೋಷಕರು ಕೂಡ ಶಿಕ್ಷಣ ಹಿನ್ನಲೆಯವರು. ಈ ಎಲ್ಲ ಅಂಶಗಳಿಂದ ಅಲ್ಲಿನ ಮಕ್ಕಳು ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತಿದೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT