ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ರಾಸಾಯನಿಕ ರಹಿತ ಕಪ್ಪು ಬೆಲ್ಲಕ್ಕೆ ಮತ್ತೆ ಬೇಡಿಕೆ

ವೆಚ್ಚ ತಗ್ಗಿಸಲು ಕಪ್ಪಚ್ಚು ಬೆಲ್ಲಕ್ಕೆ ಜೋತುಬಿದ್ದ ರೈತರು
Last Updated 30 ಜೂನ್ 2022, 5:30 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ರಾಸಾಯನಿಕ ಮಿಶ್ರಿತ ಪೌಡರ್ ಬೆಲ್ಲ (ಬಿಳಿಬೆಲ್ಲ)ದ ಉತ್ಪಾದನಾ ವೆಚ್ಚ ಏರಿಕೆ ಆಗುತ್ತಿದೆ. ಇದೇ ವೇಳೆ ಮಾರುಕಟ್ಟೆಯಲ್ಲಿ ಬಿಳಿಬೆಲ್ಲದ ಬೆಲೆ ಇಳಿಯುತ್ತಿದೆ. ಇದರಿಂದ ಕಂಗಾಲಾದ ರೈತರು ಬೆಲ್ಲ ತಯಾರಿಯ ಖರ್ಚು ಉಳಿಸುವತ್ತ ಗಮನ ನೀಡುತ್ತಿದ್ದಾರೆ. ಹೆಚ್ಚಿನ ಒಳಸುರಿ (ರಾಸಾಯನಿಕ) ಬೇಡದ, ಸಾವಯವ ಕಪ್ಪು ಅಚ್ಚು ಬೆಲ್ಲ ತಯಾರಿಕೆಗೆ ಒಲವು ತೋರುತ್ತಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 3.5 ಸಾವಿರ ಹೆಕ್ಕೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಹೊಸ ಕಬ್ಬಿನ ತಳಿಗಳನ್ನು ಸಕ್ಕರೆ ಕಾರ್ಖಾನೆಗೆ ಪೂರೈಕೆ ಆಗುತ್ತಿದೆ. ಸಕಾಲದಲ್ಲಿ ಕೈಗಾರಿಕೆಗಳು ಕಬ್ಬು ಕಟಾವು ಮಾಡದಿದ್ದರೆ, ಉತ್ತಮ ದರ್ಜೆಯ ಕಬ್ಬನ್ನು ಆಲೆಮನೆಗಳಿಗೆ ಪೂರೈಸುತ್ತಾರೆ. ಇಲ್ಲಿ ಬಿಳಿಬೆಲ್ಲ ತಯಾರಿಸ ಲಾಗುತ್ತದೆ. ಕೆಲವು ವಾರಗಳಿಂದ ಬೆಲ್ಲದ ಸಂತೆಯಲ್ಲಿ ಬಿಳಿ ಬೆಲ್ಲಕ್ಕೆ ಸ್ಥಿರವಾದ ದರ ಸಿಗುತ್ತಿಲ್ಲ. ಧಾರಣೆಯ ಏರಿಳಿತದಿಂದ ಕಂಗೆಟ್ಟ ಕೃಷಿಕರು ಕನಿಷ್ಠ ವೆಚ್ಚದಲ್ಲಿ ಬೆಲ್ಲ ಉತ್ಪಾದಿಸುತ್ತಿದ್ದಾರೆ. ಕಪ್ಪು ಬೆಲ್ಲ ತಯಾರಿಸಲು ಹೆಚ್ಚಿನ ಖರ್ಚು ಬೇಕಿಲ್ಲ. ಸ್ಥಳೀಯ ಮಾರುಕಟ್ಟೆಯಲ್ಲಿ ನೀಡಬಹುದು. ಮಾರುಕಟ್ಟೆಗೆ ಅಲೆಯುವ ಸಮಯವೂ ಉಳಿಯುತ್ತದೆ.

‘ಕಬ್ಬಿನ ನಾಟಿಯಿಂದ ಆಲೆಮನೆಗೆ ಸಾಗಣೆ ಮಾಡುವ ತನಕ 1 ಸಾವಿರ ಅಚ್ಚು ಬೆಲ್ಲ ತಯಾರಿಸಲು ಕನಿಷ್ಠ ₹ 3 ಸಾವಿರ ವೆಚ್ಚ ತಗುಲುತ್ತದೆ. ಮಾರುಕಟ್ಟೆಯಲ್ಲಿ ಈಚಿನ ವಾರಗಳಲ್ಲಿ 1 ಸಾವಿರ ಅಚ್ಚು ಬೆಲ್ಲಕ್ಕೆ ಧಾರಣೆ ₹ 3ರಿಂದ ₹ 4 ಸಾವಿರದ ಆಸುಪಾಸಿನಲ್ಲಿ ಇದೆ. ಇದರಿಂದ ಕಬ್ಬು ಬೆಳೆಯಲು ಹೂಡಿದ ಬಂಡವಾಳ, ಶ್ರಮ, ಸಾಗಣೆ ಎಲ್ಲವನ್ನು ಲೆಕ್ಕ ಇಟ್ಟರೆ, ಹಣ ವಾಪಸ್ ಸಿಕ್ಕರೆ ಸಾಕು ಎಂಬಂತಾಗಿದೆ. ಹಾಗಾಗಿ, ಕಪ್ಪು ಬೆಲ್ಲದತ್ತ ರೈತರ ಚಿತ್ತ ಹರಿದಿದೆ' ಎನ್ನುತ್ತಾರೆ ಹೊನ್ನೂರು ರೈತ ಬಸವಣ್ಣ.

ಬಿಳಿಬೆಲ್ಲ ತಯಾರಿಸುವಾಗ ರಾಸಾಯನಿಕಗಳಾದ ಹೈಡ್ರೋಸ್, ಸೋಡಾ, ಬಣ್ಣ ಭರಿಸುವ ಮಿಶ್ರಣಗಳನ್ನು ಬಳಸಬೇಕು. ಇದಕ್ಕೆ ಹೆಚ್ಚುವರಿ ₹ 500 ಖರ್ಚಾಗುತ್ತದೆ. ಆದರೆ. ಕಪ್ಪು ಬೆಲ್ಲವನ್ನು ತಯಾರಿಸಲು ಸುಣ್ಣ ಮಾತ್ರ ಸಾಕು. ಹೆಚ್ಚುವರಿ ವೆಚ್ಚವನ್ನು ಉಳಿಸಬಹುದು.

‘ಸ್ಥಳೀಯರು ಆರೋಗ್ಯಕರ ಪೇಯವಾಗಿ ಟೀ, ಪಾಯಸ ಮತ್ತಿತರ ಖಾದ್ಯ ತಯಾರಿಕೆಗೆ ಸಾವಯವ ವಿಧಾನದ ಕಪ್ಪು ಬೆಲ್ಲದತ್ತ ಬೇಡಿಕೆ ಸಲ್ಲಿಸುತ್ತಿದ್ದು, ಹೆಚ್ಚುವರಿ ಖರ್ಚಿನ ಹಾದಿಯನ್ನು ತಗ್ಗಿಸಿದೆ’ ಎಂದು ಅಂಬಳೆ ಸಾಗುವಳಿದಾರ ಮಹೇಶ್ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT