ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಟಿಕೆಟ್‌ ಸಿಕ್ಕರೆ, ಗೆಲುವಿನ ವಿಶ್ವಾಸವಿದೆ: ಆರ್‌.ರಾಜು

Published 22 ನವೆಂಬರ್ 2023, 15:46 IST
Last Updated 22 ನವೆಂಬರ್ 2023, 15:46 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ನಾನು ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದು, ವರಿಷ್ಠರ ಸೂಚನೆಯಂತೆ ಮೂರು ತಿಂಗಳುಗಳಿಂದ ಕ್ಷೇತ್ರದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ’ ಎಂದು ಬಿಜೆಪಿ ಮುಖಂಡ, ನಿವೃತ್ತ ಐಎಫ್‌ಎಸ್‌ ಅಧಿಕಾರಿ ಆರ್‌.ರಾಜು ಬುಧವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2019ರ ಚುನಾವಣೆಯಲ್ಲಿ ನಾನೂ ಟಿಕೆಟ್‌ ಬಯಸಿದ್ದೆ. ಪಕ್ಷ ಶ್ರೀನಿವಾಸ್‌ ಪ್ರಸಾದ್‌ ಅವರಿಗೆ ಟಿಕೆಟ್‌ ನೀಡಿತ್ತು. ನಾನು ಸೇರಿದಂತೆ ಎಲ್ಲ ಮುಖಂಡರು ಅವರ ಗೆಲುವಿಗೆ ಶ್ರಮಿಸಿದ್ದೆವು. ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ, ರಾಜಕೀಯ ನಿವೃತ್ತಿ ಪಡೆಯುವುದಾಗಿ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ನಾನು ಇದೇ ಜಿಲ್ಲೆಗೆ ಸೇರಿದವನು. ನನ್ನ ತಾಯಿ, ಪತ್ನಿ ಈ ಜಿಲ್ಲೆಯವರು. ನಾನು 16 ವರ್ಷಗಳ ಕಾಲ ಮೈಸೂರು ಚಾಮರಾಜನಗರ ವ್ಯಾಪ್ತಿಯಲ್ಲಿ ಅರಣ್ಯ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಹಂಪಾಪುರದಲ್ಲಿ ಕೃಷಿ ಜಮೀನು ಹೊಂದಿದ್ದೇನೆ. ಹಾಗಾಗಿ ಈ ಕ್ಷೇತ್ರದ ಪೂರ್ಣ ಪರಿಚಯ ನನಗಿದೆ’ ಎಂದರು. 

‘ಚುನಾವಣೆಗೆ ಸ್ಪರ್ಧಿಸುವ ನನ್ನ ಆಕಾಂಕ್ಷೆಯನ್ನು ಪಕ್ಷದ ವರಿಷ್ಠರು ಹಾಗೂ ಆರ್‌ಎಸ್‌ಎಸ್‌ ನಾಯಕರಿಗೆ ತಿಳಿಸಿದ್ದೇನೆ. ಅವರು ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಹಾಗಾಗಿ, ಪ್ರವಾಸ ಆರಂಭಿಸಿದ್ದೇನೆ. ನನಗೆ ಟಿಕೆಟ್‌ ನೀಡುವ ಭರವಸೆ ಇದೆ. ವಿವಿಧ ಮಠಾಧೀಶರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ’ ಎಂದು ರಾಜು ಹೇಳಿದರು. 

‘ಈ ಜಿಲ್ಲೆಗೆ ಏನಾಗಬೇಕು? ಯಾವೆಲ್ಲ ಅಭಿವೃದ್ಧಿ ಕೆಲಸ ಆಗಬೇಕು ಎಂಬುದು ನನಗೆ ತಿಳಿದಿದೆ. ನಾನು ಇಲ್ಲಿ ಡಿಸಿಎಫ್‌ ಆಗಿದ್ದಾಗ, ಜನರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೆ. ಪ್ರಧಾನಿ ಮೋದಿ ಅವರು 10 ವರ್ಷಗಳಿಂದ ಉತ್ತಮ ಆಡಳಿತ ನೀಡುತ್ತಿದ್ದಾರೆ. ಈ ದೇಶದ ಅಭಿವೃದ್ಧಿಗಾಗಿ ಸಂಸತ್ತಿಗೆ ಉತ್ತಮ ಸಂಸದೀಯ ಪಟುಗಳ ಆಯ್ಕೆಯಾಗಬೇಕಿದೆ. ನಾನು ಓದಿದ್ದೇನೆ. ಜನರ ಕಷ್ಟ ತಿಳಿದಿದ್ದೇನೆ. ಆಡಳಿತದ ಅನುಭವವಿದೆ ಹಾಗಾಗಿ, ಚುನಾವಣಾ ರಾಜಕೀಯಕ್ಕೆ ಇಳಿಯಲು ಬಯಸಿದ್ದೇನೆ. ಪಕ್ಷ ಟಿಕೆಟ್‌ ನೀಡಿದ್ದೇ ಆದಲ್ಲಿ, ಗೆಲ್ಲುವ ವಿಶ್ವಾಸವನ್ನೂ ಹೊಂದಿದ್ದೇನೆ’ ಎಂದು ರಾಜು ಅವರು ಹೇಳಿದರು. 

ಮುಖಂಡರಾದ ಸುರೇಶ್‌ನಾಯಕ, ಬಸವರಾಜು, ವಿ. ಶ್ರೀನಿವಾಸಪ್ರಸಾದ್, ಮಾಲಂಗಿ ಮೂರ್ತಿ, ಶಿವಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT