ಗುರುವಾರ , ಆಗಸ್ಟ್ 11, 2022
21 °C

ಪ್ರಜಾವಾಣಿ ವರದಿ ಪರಿಣಾಮ: ಕಿತ್ತು ಹೋದ ಗುಂಡಿಗೆ ಮತ್ತೆ ತೇಪೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಾಜ್ಯ ಹೆದ್ದಾರಿ 79ರಲ್ಲಿ ದುರಸ್ತಿ ಮಾಡಿದ ಕೆಲವೇ ದಿನಗಳಲ್ಲಿ ಮತ್ತೆ ಉಂಟಾಗಿದ್ದ ಗುಂಡಿಗಳನ್ನು ಬುಧವಾರ ಮುಚ್ಚಲಾಗಿದೆ. 

ಬೆಟ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗಿತ್ತು. ಕಳಪೆ ಕಾಮಗಾರಿಯ ಕಾರಣದಿಂದ ವಾರದ ಅವಧಿಯಲ್ಲಿ ಡಾಂಬರು ಕಿತ್ತು ಬಂದು ಮತ್ತೆ ಗುಂಡಿಗಳು ಸೃಷ್ಟಿಯಾಗಿದ್ದವು. 

ಈ ಬಗ್ಗೆ ‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯಲ್ಲಿ ‘ಸಿ.ಎಂ ಹೋಗಾಯ್ತು, ತೇಪೆಯೂ ಕಿತ್ತೋಯ್ತು’ ಎಂಬ ತಲೆ ಬರಹದ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿಗೆ ಸ್ಪಂದಿಸಿರುವ ಅಧಿಕಾರಿಗಳು, ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಂಡಿದ್ದಾರೆ. 

ಬುಧವಾರ ಪಟ್ಟಣದ ನಾಗಪ್ಪ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಉಂಟಾಗಿದ್ದ ಗುಂಡಿಗಳನ್ನು ಕೆ–ಶಿಪ್ ವತಿಯಿಂದ ಮುಚ್ಚಲಾಗಿದೆ. ಕಾಮಗೆರೆಯಿಂದ ಮಧುವನಹಳ್ಳಿವರೆಗೂ ದುರಸ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಮಹದೇಶ್ವರ ಬೆಟ್ಟ ಉಪ ವಿಭಾಗದ ಎಂಜಿನಿಯರ್ ತನೂಜ್ ಅವರು, ‘ಮಧುವನಹಳ್ಳಿಯಿಂದ ಹನೂರುವರೆಗೆ ಕೆ–ಶಿಪ್ ವತಿಯಿಂದ ರಸ್ತೆ ನಿರ್ವಹಣೆ ಮಾಡುತ್ತಿರುವುದರಿಂದ, ಅವರೇ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಹನೂರಿನಿಂದ ಕೌದಳ್ಳಿವರೆಗೆ ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ ಜನವರಿಯಲ್ಲಿ ಎರಡನೇ ಹಂತದಲ್ಲಿ ರಸ್ತೆಯನ್ನು ನಿರ್ವಹಣೆ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು