ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು: ಮೊಬೈಲ್ ದಾಸರಿಗೆ ಬೇಕಿದೆ ಸೈಬರ್ ಕೋಟೆ!

ನಾ.ಮಂಜುನಾಥಸ್ವಾಮಿ
Published 6 ಫೆಬ್ರುವರಿ 2024, 5:46 IST
Last Updated 6 ಫೆಬ್ರುವರಿ 2024, 5:46 IST
ಅಕ್ಷರ ಗಾತ್ರ

ಯಳಂದೂರು: ಇಡಿ ವಿಶ್ವವೇ ಮೊಬೈಲ್ ಮೇನಿಯಾದಲ್ಲಿ ಮುಳುಗಿದೆ. ಅನಕ್ಷರಸ್ಥರೂ ‘ಇ-ಸಾಕ್ಷರ’ತೆಯ ಹಾದಿಯಲ್ಲಿದ್ದಾರೆ. ಜನಸಂಖ್ಯೆಗೆ ಸಮನಾಗಿ ಡಿಜಿಟಲ್ ಮನಸುಗಳು ರೂಪುಗೊಂಡಿವೆ. ಈಗ ಪ್ರತಿಯೊಂದು ವ್ಯವಹಾರವೂ ಅಂತರ್ಜಾಲದಲ್ಲಿ ಬಂಧಿಯಾಗಿದೆ. ಇದೇ ಅವಕಾಶವನ್ನು ಬಳಸಿಕೊಂಡು ಹಣ, ಮಾಹಿತಿಗಳಿಗೆ ಕನ್ನ ಹಾಕುವವರೂ ಸೈಬರ್ ಬಾಜಾರಿನಲ್ಲಿ ಸಕ್ರಿಯರಾಗಿದ್ದಾರೆ. 

ಸುರಕ್ಷಿತವಾಗಿ ಇಂಟರ್‌ನೆಟ್‌ ಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ವರ್ಷ ಫೆಬ್ರುವರಿ ಎರಡನೇ ವಾರದ ಎರಡನೇ ದಿನವನ್ನು ಸುರಕ್ಷಿತ ಇಂಟರ್‌ನೆಟ್‌ ದಿನವನ್ನಾಗಿ (ಸೇಫ್‌ ಇಂಟರ್‌ನೆಟ್‌ ಡೇ–ಐಎಸ್‌ಡಿ) ಆಚರಿಸಲಾಗುತ್ತದೆ.  

ತಾಲ್ಲೂಕಿನ ಬನ್ನಿಸಾರಿಗೆ ಸರ್ಕಾರಿ ಉನ್ನತೀಕರಿಸಿದ ಶಾಲಾ ವಿದ್ಯಾರ್ಥಿಗಳು ‘ಸುರಕ್ಷಿತ ಇಂಟರ್‌ನೆಟ್‌ ದಿನ’ದಂದು ಜನ ಸಾಮಾನ್ಯರಿಗೂ ಆರೋಗ್ಕಕರ ಹಾಗೂ ಸುರಕ್ಷೆಯ ಇಂಟರ್‌ನೆಟ್‌ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಸಿದ್ಧತೆ ನಡೆಸಿದ್ದಾರೆ. 

ಕೋವಿಡ್ ನಂತರದ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಕೈಗೂ ಮೊಬೈಲ್ ನೀಡಿ ಕಲಿಕೆಗೆ ಹಚ್ಚಲಾಯಿತು. ಪಾಲಕರು ಮತ್ತು ಬೋಧಕರು ವಾಟ್ಸ್ಆ್ಯಪ್, ಯು-ಟ್ಯೂಬ್ ಬಳಸಿ ಆನ್‌ಲೈನ್‌ ಶಿಕ್ಷಣದ ತೆಕ್ಕೆಗೆ ಎಲ್ಲರೂ ಸೇರುವಂತೆ ನೋಡಿಕೊಂಡರು. ಈಗ ಫೇಸ್‌ಬುಕ್‌, ‘ಎಕ್ಸ್‌ (ಟ್ವಿಟರ್‌), ಇನ್‌ಸ್ಟಾಗ್ರಾಂ, ಟೆಲಿಗ್ರಾಂ ನಂತಹ ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಕಲಿಯುವ ವ್ಯವಸ್ಥೆ ಬಂದಿದೆ.  

‘ಇಂದು ಡಿಜಿಟಲ್ ಭಾಷೆ ಎಲ್ಲ ದೇಶ, ಕಾಲವನ್ನು ಮೀರಿ ಬಳಕೆಯಾಗುತ್ತಿದೆ. ನೆಟ್ ಇದ್ದರೆ, ತಕ್ಷಣದಲ್ಲಿ ಎಲ್ಲ ನುಡಿಯನ್ನು ಸುಲಭವಾಗಿ ಅನುವಾದಿಸಬಹುದು. ಇದೇ ಸಮಯದಲ್ಲಿ ಗ್ರಾಮೀಣ ಪ್ರದೇಶದ ಜನರು ಬ್ಯಾಂಕಿಂಗ್, ಇ-ಖಾತೆ, ಸರ್ವೆ, ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ, ಕ್ಯುಆರ್ ಕೋಡ್ ಬಳಸಿ ಇಲ್ಲವೇ ಯುಪಿಐ ಬಳಸಿ ಹಣ ಪಾವತಿ ಮಾಡುತ್ತಿದ್ದಾರೆ‌’ ಎಂದು ವಿಜ್ಞಾನ ಶಿಕ್ಷಕ ಅಮ್ಮನಪುರ ಮಹೇಶ್ ಹೇಳಿದರು. 

‘ಇದೇ ವೇಳೆ ವಂಚಕರು ಎಟಿಎಂ ಕೇಂದ್ರ, ಎಸ್‌ಎಂಎಸ್‌ಗಳ ಮೂಲಕ ರಿಯಾಯಿತಿ, ಕೊಡುಗೆ ಮೂಲಕ ಕ್ಯಾಶ್‌ಬ್ಯಾಕ್‌ ನೀಡುವ ಭರವಸೆ ನೀಡಿ ವಂಚಿಸುತ್ತಿದ್ದಾರೆ. ಹೆಚ್ಚು ಆ್ಯಪ್ ಬಳಸಿದಷ್ಟೂ ಅಪಾಯಕಾರಿ ಮಾಹಿತಿಗಳು ಹರಿದಾಡುವ ಆತಂಕ ಕಾಡುತ್ತಿದೆ. ವೈಯಕ್ತಿಕ ಮಾಹಿತಿ ನೀಡುವ  ‘ಡಾರ್ಕ್‌ವೆಬ್‌’ ಗಳು ಸೈಬರ್ ವಂಚಕರ ನೆಚ್ಚಿನ ತಾಣವಾಗಿದೆ’ ಎಂದು ಅವರು ವಿವರಿಸಿದರು. 

ಎಚ್ಚರ, ಎಚ್ಚರ: ‘ಮೊಬೈಲ್‌ಗಳಲ್ಲಿ ಪ್ರತಿ ನಿಮಿಷವೂ ಒಂದಲ್ಲ ಒಂದು ಮಾಹಿತಿ ಬರುತ್ತಲೇ ಇರುತ್ತದೆ. ಫಿಶಿಂಗ್ ತಂತ್ರಗಾರಿಕೆಯಲ್ಲಿ ಲಾಟರಿ ಹಣ ಬಂದಿದೆ, ಎಟಿಎಂ ಕಾರ್ಡ ಸ್ಥಗಿತ, ಕೆವೈಸಿ ದಾಖಲಾತಿ ಪೂರ್ಣಗೊಳಿಸಿ ಮೊದಲಾದ ಸಂದೇಶ ಬರುತ್ತದೆ. ವಿಡಿಯೊ ನೋಡಿದ ನಂತರ ಅದನ್ನು ಕ್ಲಿಕ್‌ ಮಾಡಲು, ಲೈಕ್ ಕೊಡಲು ಸೂಚಿಸಲಾಗುತ್ತದೆ. ಇದಕ್ಕಾಗಿ ಒಂದು ಕೊಂಡಿಯನ್ನು ನೀಡಲಾಗುತ್ತದೆ. ಅದನ್ನು ಕ್ಲಿಕ್ ಮಾಡುತ್ತಲೇ ವೈರಸ್‌ಗಳು ಮೊಬೈಲ್‌ಗೆ ಸೇರುತ್ತದೆ. ಕೆಲವೊಮ್ಮೆ ಕೆರೆ ಬಂದಾಗ ಆಧಾರ್, ಪ್ಯಾನ್‌ ಕಾರ್ಡ್, ಡೆಬಿಟ್– ಕ್ರೆಡಿಟ್ ಕಾರ್ಡ್, ಸಿವಿವಿ ನಂಬರ್ ಪಡೆದು ವಂಚಿಸಲಾಗುತ್ತದೆ. ಹಾಗಾಗಿ, ಮೊಬೈಲ್ ಬಳಕೆದಾರರು ಎಚ್ಚರದಿಂದ ಇರಬೇಕು’ ಎಂದು ಸೈಬರ್ ತಜ್ಞ ಪಾರ್ಥಸಾರಥಿ ಸಲಹೆ ನೀಡಿದರು. 

ಸೈಬರ್ ಸುರಕ್ಷತೆ ಹೇಗೆ?

ಭಾರತದಲ್ಲಿ ಸೈಬರ್ ಅಪರಾಧ ಏರಿಕೆಯಾಗುತ್ತಿದೆ. ಯುಪಿಐ ಮೂಲಕ ಹಣ ದೋಚುವುದು ಶೇ 47 ಇಂಟರ್ನೆಟ್ ಬ್ಯಾಂಕಿಂಗ್ ಶೇ 9 ಸಾಮಾಜಿಕ ಜಾಲತಾಣ ಶೇ 12 ಡೆಬಿಟ್-ಕ್ರೆಡಿಡ್ ಸಿಮ್ ಸ್ವಾಪಿಂಗ್‌ ಮೂಲಕ ಶೇ 11 ವಂಚನೆ ಪ್ರಕರಣ ದಾಖಲಾಗುತ್ತಿರುತ್ತದೆ. ವಂಚನೆಗೆ ಒಳಗಾದರೆ ಸಹಾಯವಾಣಿ 1930 ಕರೆ ಮಾಡಿ ಸೈಬರ್ ಪೊಲೀಸರಿಗೆ ದೂರು ನೀಡಬಹುದು ಎನ್ನುತ್ತಾರೆ ಪೊಲೀಸರು.  ಯುರೋಪ್‌ನಲ್ಲಿ ಸೇಫ್ ಇಂಟರ್ನೆಟ್ ದಿನ 2004ರಲ್ಲಿ ಆರಂಭವಾಯಿತು. ಪ್ರತಿವರ್ಷ ಫೆಬ್ರುವರಿ 2ನೇ ವಾರದ 2ನೇ ದಿನದಂದು ವಿಶ್ವದ 190 ದೇಶಗಳು ಡಿಜಟಲ್ ಲೋಕದ ಕಾಳಜಿಗಾಗಿ ಅಭಿಯಾನ ನಡೆಸುತ್ತವೆ. ಶಿಕ್ಷಕರು ಮಕ್ಕಳು ಪಾಲಕರು ಯುವಜನ ಮತ್ತು ಉದ್ಯಮಿಗಳು ಸೇರಿದಂತೆ ಸಮಾಜದ ಪ್ರಮುಖ ವಲಯಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ‘ಎಸ್ಐಡಿ’ ಆಚರಣೆ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT