ಬುಧವಾರ, ಏಪ್ರಿಲ್ 1, 2020
19 °C
ಎರಡು ದಿನಗಳ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೆರೆ, ಎರಡು ನಿರ್ಣಯಗಳ ಅಂಗೀಕಾರ

ಸಮ್ಮೇಳನಗಳ ಉದ್ದೇಶ ಈಡೇರುತ್ತಿಲ್ಲ: ನಂದೀಶ್ ಅಂಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಗಡಿಭಾಗಗಳಲ್ಲಿ ಹಮ್ಮಿಕೊಳ್ಳುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸುವ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಅಂಚೆ ಅವರು ಅಭಿಪ್ರಾಯಪಟ್ಟರು. 

ಪಟ್ಟಣದಲ್ಲಿ ನಡೆದ ಎರಡು ದಿನಗಳ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದು ನಡೆಯುತ್ತಿರುವ ಬಹುತೇಕ ಸಮ್ಮೇಳನಗಳ ಮೂಲ ಉದ್ದೇಶ ಈಡೇರುತ್ತಿಲ್ಲ ಎಂಬುದು ನನ್ನ ಭಾವನೆ. ಸಮ್ಮೇಳನಗಳಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಗಳಾಗಬೇಕು. ಹಾಗಾದಾಗ ಮಾತ್ರ ಭಾಷೆ ಉಳಿವಿನ ಜೊತೆಗೆ ಸ್ಥಳೀಯ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯ’ ಎಂದರು.

‘ಚಲನಚಿತ್ರಗಳಿಗೆ ಸಿಗುತ್ತಿರುವ ಪ್ರಾಮುಖ್ಯ ಇಂದು ರಂಗಭೂಮಿಗೆ ಸಿಗುತ್ತಿಲ್ಲ. ಸಿನಿಮಾಗಳಿಗೆ ಮೂಲವೇ ರಂಗಭೂಮಿ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ’ ಎಂದರು.

‘ಶಿಕ್ಷಣ ಮಕ್ಕಳಿಗೆ ಭಾರವಾಗಿರದೇ ಕಲಿಯುವ ಹುಮ್ಮಸ್ಸನ್ನು ಹೆಚ್ಚಿಸಿದಾಗ ಕಲಿಕೆ ಫಲಪ್ರದವಾಗುತ್ತದೆ. ಅಕ್ಷರದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸವಾಗಬೇಕಿದೆ. ಪೂರ್ವ ಪ್ರಾಥಮಿಕ ಶಾಲೆಗಳಿಂದ ಇಂದು ಮಕ್ಕಳ ನೈಸರ್ಗಿಕ ಕಲಿಕೆ ಮಾಯವಾಗುತ್ತಿದೆ ಎಂದರು. ಮಕ್ಕಳ ಸಾಹಿತ್ಯ ಇನ್ನಷ್ಟು ರಚನೆಯಾಗಬೇಕಿದೆ’ ಎಂದರು. 

ಕೆಪಿಸಿಸಿ ವಕ್ತಾರ ಆರ್. ಧ್ರುವನಾರಾಯಣ ಅವರು ಮಾತನಾಡಿ, ‘ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತು ನಿಂತಿದ್ದರೂ ಅಪಾರ ವೈಶಿಷ್ಟ್ಯ ಹೊಂದಿರುವ ಚಾಮರಾಜನಗರವು ರಾಜ್ಯಕ್ಕೆ ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಗಾಧ. ದೇಶದಲ್ಲಿಯೇ 2 ಹುಲಿಸಂರಕ್ಷಿತ ಅರಣ್ಯ ಪ್ರದೇಶ ಹೊಂದಿರುವ ಹೆಮ್ಮೆ  ನಮ್ಮ ಜಿಲ್ಲೆಗಿದೆ. ಅಪಾರವಾದ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಗಡಿ ಜಿಲ್ಲೆಯಲ್ಲಿ ಇಂತಹ ಸಮ್ಮೇಳಗಳು ಮೇಲಿಂದ ಮೇಲೆ ನಡೆಯುತ್ತಿರಬೇಕು’ ಎಂದರು.

‘ಜಿಲ್ಲೆಯ ಜನಪ್ರತಿನಿಧಿಗಳು ಇಂಥ ಸಮ್ಮೇಳನದಲ್ಲಿ ಭಾಗವಹಿಸಿ ಇಲ್ಲಿ ಗಂಭೀರವಾಗಿ ಚರ್ಚಿಸುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಮೂಢನಂಬಿಕೆ ಹೋಗಲಾಡಿಸಬೇಕಿದೆ’ ಎಂದರು.

ಸನ್ಮಾನ: ಸಮಾರಂಭದಲ್ಲಿ  ಶೌರ್ಯಚಕ್ರ ಪ್ರಶಸ್ತಿ ಪುರಷ್ಕೃತರಾದ ಯೋಧ ಪೆರಿಯನಾಯಗಂ, ಚಿತ್ರಕಲಾವಿದ ಮುಡಿಗುಂಡ ಮೂರ್ತಿ, ಪತ್ರಕರ್ತ ಎಸ್.ಎಂ.ನಂದೀಶ್, ಯರಿಯೂರು ನಾಗೇಂದ್ರ, ಸಮಾಜ ಸೇವಕ, ಮುತ್ತಣ್ಣ, ಪ್ರದೀಪ್ ಕುಮಾರ್, ಸಿದ್ದರಾಜು, ಮಾದೇವನಾಯಕ ಸೇರಿದಂತೆ 21 ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಜಿ ಶಾಸಕಿ ಪರಿಮಳ ನಾಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಲೇಖಾ, ಮಂಜುಳ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್ ಸ್ವಾಮಿ, ಸಾಹಿತಿ ಸಿ.ಚನ್ನಮಾದೇಗೌಡ, ದತ್ತಿ ದಾನಿ ಗಣೇಶ್ ಪ್ರಸಾದ್,  ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್‌.ವಿನಯ್‌, ಉಪಾಧ್ಯಕ್ಷರಾದ ಅಣ್ಣಾದ್ರೇಯ್ಯ, ವೀರಭದ್ರಸ್ವಾಮಿ, ನಾಟಕ ಭಾರ್ಗವ ಕೆಂಪರಾಜು, ತಾಲ್ಲೂಕು ಅಧ್ಯಕ್ಷರಾದ ಶ್ರೀನಿವಾಸ್ ನಾಯ್ಡು, ನಂದೀಶ್, ಮದ್ದೂರು ವಿರೂಪಾಕ್ಷ, ಚಿದಾನಂದಸ್ವಾಮಿ ಇದ್ದರು.

ಎರಡು ನಿರ್ಣಯಗಳು

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್‌.ವಿನಯ್‌ ಅವರು ಎರಡು ನಿರ್ಣಯಗಳನ್ನು ಮಂಡಿಸಿದರು. ಸಮ್ಮೇಳನವು ಅವುಗಳನ್ನು ಅಂಗೀಕರಿಸಿತು.

1. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ವಿಚಾರದಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಹಸ್ತಕ್ಷೇಪ ಮಾಡದೇ ಸಾಹಿತ್ಯ ಪರಿಷತ್ ಸ್ವತಂತ್ರವಾಗಿ ಆಡಳಿತ ನಡೆಸಲು ಅನುವು ಮಾಡಿಕೊಡಬೇಕು.

2. ತಮಿಳಿನಲ್ಲಿರುವ ಮಲೆಮಹದೇಶ್ವರರನ್ನು ಕುರಿತ ಜಾನಪದ ಸಾಹಿತ್ಯ ಸಂಪಾದನೆಗೊಂಡು ಕನ್ನಡಕ್ಕೆ ಅನುವಾದವಾಗಬೇಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು