ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಂಧ ಕಳ್ಳತನ; ಅಪ್ಪನೇ ಮಾರ್ಗದರ್ಶಕ!

ಜೈಲಿಗೆ ಹೋಗಿ ಬಂದಿದ್ದ ಆರೋಪಿ ಕುಂಬೇಗೌಡ, ಮೂವರಿಗಾಗಿ ಮುಂದುವರಿದ ಹುಡುಕಾಟ
Last Updated 18 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಹನೂರು: ಶ್ರೀಗಂಧ ಮರದ ತುಂಡುಗಳನ್ನು ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಕೆ.ಕೆ.ಡ್ಯಾಂನ ಮಾದೇವ ಅವರಿಗೆ ಕಳ್ಳತನದ ಮಾರ್ಗದರ್ಶನ ನೀಡುತ್ತಿದ್ದವರು ಆತನ ತಂದೆ ಕುಂಬೇಗೌಡ!

ಇದೇ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಕುಂಬೇಗೌಡ ಅವರು ಇನ್ನಿಬ್ಬರು ಆರೋಪಿಗಳೊಂದಿಗೆ ತಲೆ ಮರೆಸಿಕೊಂಡಿದ್ದಾರೆ. ಅರಣ್ಯಕ್ಕೆ ಸಂಬಂಧಿಸಿದ ಅಪರಾಧ ಚಟುವಟಿಕೆಗಳಲ್ಲಿ ಪಳಗಿರುವ ಕುಂಬೇಗೌಡ ಅವರು ಈ ಹಿಂದೆ ಜೈಲಿಗೂ ಹೋಗಿ ಬಂದಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ. 

ಕುಂಬೇಗೌಡ ಅವರ ವಿರುದ್ಧ ಆನೆದಂತ ಹಾಗೂ ಗಂಧದ ಮರ ಸಾಗಣೆ ಸೇರಿದಂತೆ ಬೈಲೂರು ಹಾಗೂ ಕೊಳ್ಳೇಗಾಲ ವನ್ಯಜೀವಿ ವಲಯಗಳಲ್ಲಿ ಹಲವು ಪ್ರಕರಣ ದಾಖಲಾಗಿವೆ. ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರವೂ ಅಪರಾಧ ಚಟುವಟಿಕೆಗಳನ್ನು ಮುಂದುವರಿಸುವುದು ಅವರ ಚಾಳಿ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ ಮಾಹಿತಿ ನೀಡಿದರು. 

‘ತಲೆಮರೆಸಿಕೊಂಡಿರುವ ಆರೋಪಿಗಳಲ್ಲಿ ಒಬ್ಬರಾಗಿರುವ ಕುಂಬೇಗೌಡ ಅವರು ಈ ಹಿಂದೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮದ ಹಲವು ಪ್ರದೇಶಗಳಲ್ಲಿ ಗಂಧ ಹಾಗೂ ಬೆಲೆಬಾಳುವ ಮರಗಳನ್ನು ಕಡಿದಿರುವ ಮಾಹಿತಿ ಸಿಕ್ಕಿದೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ತಿಳಿಸಿದರು. 

ತಪ್ಪಿಪ್ಪಿಕೊಂಡ ಮಾದೇವ: ಈ ಮಧ್ಯೆ, ತನಿಖೆಯನ್ನು ತೀವ್ರ ಗೊಳಿಸಿರುವ ಅರಣ್ಯ ಅಧಿಕಾರಿಗಳು, ಬಂಧಿತ ಆರೋಪಿ ಮಾದೇವ ಅವರಿಂದ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. 

ಗಂಧದ ಮರಗಳನ್ನು ಮಾತ್ರವಲ್ಲದೇ, ತಂದೆಯ ಜೊತೆ ಸೇರಿ ಹಲವು ಪ್ರಾಣಿಗಳನ್ನೂ ಬೇಟೆಯಾಡುತ್ತಿದ್ದುದಾಗಿ ವಿಚಾರಣೆ ವೇಳೆ ಮಾದೇವ ಬಾಯ್ಬಿಟ್ಟಿದ್ದಾರೆ. 

ಕುಂಬೇಗೌಡ ಮತ್ತು ಮಾದೇವ ಇಬ್ಬರೂ ಸೇರಿ ದಶಕದಿಂದಲೂ ಅರಣ್ಯ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಸಂಗತಿಯೂ ವಿಚಾರಣೆಯಿಂದ ಬಯಲಾಗಿದೆ. ಬುಧವಾರ ಮಾರಾಟಕ್ಕೆ ಯತ್ನಿಸುತ್ತಿದ್ದ 16 ಕೆಜಿ ಗಂಧದ ತುಂಡುಗಳನ್ನು ಮಲೆಹದೇಶ್ವರ ವನ್ಯಧಾಮದ ದೊಡ್ಡಬೆಟ್ಟ ಅರಣ್ಯ ಪ್ರದೇಶದಿಂದ ಸಂಗ್ರಹಿಸಲಾಗಿದೆ ಎಂದು ವಿಚಾರಣೆ ವೇಳೆ ಮಾದೇವ ತಪ್ಪೊಪ್ಪಿಕೊಂಡಿದ್ದಾರೆ.

ಈ ಹಿಂದೆಯೂ ಬಿಆರ್‌ಟಿ ಹಾಗೂ ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ, ರಾಮಾಪುರ ಹಾಗೂ ಹೂಗ್ಯಂ ವಲಯಗಳಲ್ಲಿ ಗಂಧದ ಮರಗಳನ್ನು ಕಳ್ಳತನ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾರೆ.

ಆರೋಪಿ ಜೊತೆ ಏಳು ಜನರಿದ್ದು, ಒಂದು ತಂಡವಾಗಿ ಈ ಕೃತ್ಯ ಎಸಗಿದ್ದಾರೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಸ್ನೇಹಿತನ ಸಾವಿನ ಬಗ್ಗೆ ಸುಳ್ಳು: ಹದಿನೈದು ದಿನಗಳ ಹಿಂದ ಕೆ.ಕೆ. ಡ್ಯಾಂ ಬಳಿಯ ನಿವಾಸಿ ಜಡೆಯ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಸ್ನೇಹಿತರ ಜೊತೆ ಈಜಾಡಲು ಹೋಗಿದ್ದಾಗ ಹೃದಯಾಘಾತವಾಗಿ ನಿಧನರಾಗಿದ್ದರು ಎಂದು ಸ್ಥಳೀಯವಾಗಿ ಸುದ್ದಿಯಾಗಿತ್ತು. 

ಆದರೆ, ಬಂಧಿತ ಮಾದೇವ ಮತ್ತು ಜಡೆಯ ಸ್ನೇಹಿತರು. ಇವರಿಬ್ಬರು ಸೇರಿದಂತೆ ಎಂಟು ಮಂದಿಯ ತಂಡವು ಖಾಸಗಿ ವಾಹನ ಮಾಡಿಕೊಂಡು ಗಂಧದ ಮರಗಳ ಕಳ್ಳತನಕ್ಕಾಗಿ ಕಾವೇರಿ ತೀರದ ಕಾಡಿಗೆ ಹೋಗಿದ್ದಾಗ ಜಡೆಯಗೆ ಹೃದಯಾಘಾತವಾಗಿದೆ. ಉಳಿದ ಏಳು ಮಂದಿ ಜಡೆಯ ಅವರ ಶವವನ್ನು ಅವರ ಮನೆ ಮುಂದೆ ಇಟ್ಟು ತಲೆಮರೆಸಿಕೊಂಡಿದ್ದರು. 15 ದಿನಗಳ ಬಳಿಕ ಗಂಧದ ಮರ ಕಡಿದು ಸಾಗಿಸುತ್ತಿರುವಾಗ ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. 

‘ಮಾದೇವ ಮತ್ತು ಆತನ ಸಂಗಡಿಗರು ನಾಲ್ಕನೇ ಆರೋಪಿ ಅಬ್ದುಲ್ ಜಾಬೀರ್ ಅವರಿಗೆ ಗಂಧದ ತುಂಡುಗಳನ್ನು ನೀಡುತ್ತಿದ್ದರು ಎಂಬುದು ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT