ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆನ್ನಾಲಿಂಗನಹಳ್ಳಿ ಶಾಲೆ: ಪ್ರಾಯೋಗಿಕ ಕಲಿಕೆ

ರಾಕೆಟ್‌ ತಯಾರಿಸಿ ಹಾರಿಬಿಟ್ಟ ವಿದ್ಯಾರ್ಥಿಗಳು: ವಿಜ್ಞಾನಿಗಳಿಂದ ತಾಂತ್ರಿಕ ನೆರವು
ಬಿ. ಬಸವರಾಜು
Published : 12 ಆಗಸ್ಟ್ 2024, 7:27 IST
Last Updated : 12 ಆಗಸ್ಟ್ 2024, 7:27 IST
ಫಾಲೋ ಮಾಡಿ
Comments

ಹನೂರು: ಕಲಿಕೆ ಕೇವಲ ಬೋಧನಾತ್ಮಕವಾಗಿರದೆ ಪ್ರಾಯೋಗಿಕವಾದಾಗ ಮಾತ್ರ ಮಕ್ಕಳಲ್ಲಿ ಪರಿಣಾಮಕಾರಿ ಕಲಿಕೆ ಸಾಧ್ಯ. ಈ ನಿಟ್ಟಿನಲ್ಲಿ ಚೆನ್ನಾಲಿಂಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಪ್ರಾಯೋಗಿಕ ವಿಜ್ಞಾನ ಹಾಗೂ ಗಣಿತ ಕಲಿಕೆ ಮಕ್ಕಳ ಸೃಜನಶೀಲತೆಗೆ ವೇದಿಕೆಯಾಯಿತು.

‘ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿ’ ಎಂಬುದು ಶಿಕ್ಷಣ ಕ್ಷೇತ್ರದ ಉತ್ತಮ ಸಂದೇಶವಾಗಿದ್ದು, ನೋಡಿ ಕಲಿತ್ತಿದ್ದು ಕ್ಷಣಿಕ, ಪ್ರಾಯೋಗಿಕವಾಗಿ ಕಲಿತದ್ದು ಜೀವನ ಪರ್ಯಂತ ಎಂಬ ಮಾತಿದೆ. ಪ್ರಾಯೋಗಿಕ ಕಲಿಕೆ ಮಕ್ಕಳ ಬೌದ್ಧಿಕ ವಿಕಸನ ಹಾಗೂ ಸೃಜನಾತ್ಮಕ ಬೆಳವಣಿಗೆಗೂ ಸಹಕಾರಿಯಾಗುತ್ತದೆ.

ಈ ನಿಟ್ಟಿನಲ್ಲಿ ‘ಅ’ ಎಂಬ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಹಾಗೂ ಪ್ರತಿಷ್ಠಾನ, ಮಾರ್ಟಳ್ಳಿಯ ಕಡಬೂರಿನ ‘ಅನಿಷಾ’ ಸಾವಯವ ಕೃಷಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಚೆನ್ನಾಲಿಂಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯ ಕಲಿಕೆ ಸಂಬಂಧ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು.

ರಾಕೆಟ್ ತಯಾರಿಸಿ ಹೇಗೆ ಉಡಾವಣೆ ಮಾಡುವುದು ಎಂಬುದನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಲಾಯಿತು. ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಙಾನಿ ಚಂದ್ರಬಾಬು ಹಾಗೂ ಹಿರಿಯಣ್ಣ ಮಕ್ಕಳಿಗೆ ಗಣಿತ ವಿಷಯವನ್ನು ಸುಲಭಗೊಳಿಸಿ ಕಲಿಯುವ ಬಗೆಯನ್ನು ಹಾಗೂ ಗಣಿತದ ಕ್ಷಿಷ್ಟಕರ ವಿಚಾರಗಳನ್ನು ಬಿಡಿಸುವ ತಂತ್ರಗಳನ್ನು ತಿಳಿಸಿಕೊಟ್ಟರು. ರಾಕೆಟ್ ನಿರ್ಮಾಣ, ಉಡಾವಣೆ, ಹಾಗೂ ಅವುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟರು.

ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಬಣ್ಣ ಬಣ್ಣದ ಕಾಗದಗಳಿಂದ ರಾಕೆಟ್ ತಯಾರಿಸಿ ವಿಜ್ಞಾನಿಗಳ ಮಾರ್ಗದರ್ಶನದಂತೆ ಹಾರಿ ಬಿಟ್ಟು ಸಂಭ್ರಮಿಸಿದರು. ನ್ಯೂಟನ್ ನಿಯಮ ಮೂರರ ಆಧಾರದಲ್ಲಿ ನೀರಿನಿಂದ ಹಾಗೂ ಗಾಳಿಯಿಂದ ರಾಕೆಟ್‌ಗಳನ್ನು ಮೇಲಕ್ಕೆ ಹಾರಿಬಿಡಲಾಯಿತು. ಅರ್ಧ ನೀರು ಹಾಗೂ ಉಳಿದರ್ಧ ಗಾಳಿ ತುಂಬಿದ್ದ ಬಾಟಲಿ ಮೇಲಕ್ಕೆ ಹಾರುವ ಬಗೆಯನ್ನು ಕಂಡು ವಿದ್ಯಾರ್ಥಿಗಳು ಪುಳಕಿತರಾದರು.

ಶಾಲೆಯಲ್ಲಿ ಮಕ್ಕಳಿಗೆ ರಾಕೆಟ್ ಬಗ್ಗೆ ಮೌಖಿಕವಾಗಿ ತಿಳಿಸಿಕೊಡುವುದಕ್ಕಿಂತ ಮಕ್ಕಳಿಂದಲೇ ರಾಕೆಟ್ ಮಾದರಿ ತಯಾರಿಸಿ ಅದನ್ನು ಹಾರಿಬಿಡುವುದು ಹೆಚ್ಚು ಪರಿಣಾಮಕಾರಿ. ಪಾಠ ಮಾಡುವಾಗ ವಿದ್ಯಾರ್ಥಿಗಳು ಕೇಳಿಸಿಕೊಂಡು ನಂತರ ಮರೆಯುವ ಸಂಭವ ಹೆಚ್ಚು ಆದರೆ, ಪ್ರಾಯೋಗಿಕವಾಗಿ ಕಲಿತಾಗ ಅದು ದೀರ್ಘಕಾಲ ಸ್ಮೃತಿಪಟಲದಲ್ಲಿ ಉಳಿಯುತ್ತದೆ, ಮಕ್ಕಳಿಗೆ ಅನುಕೂಲವಾಗುತ್ತದೆ. ಬೋಧನೆಗಿಂತ ಪ್ರಾಯೋಗಿಕ ಕಲಿಕೆ ಅತ್ಯಂತ ಪರಿಣಾಮಕಾರಿ. ಕಬ್ಬಿಣದ ಕಡಲೆಯೆನಿಸಿರುವ ವಿಜ್ಞಾನ ಹಾಗೂ ಗಣಿತ ವಿಷಗಳನ್ನು ಈ ಮಾರ್ಗದಲ್ಲಿ ಸುಲಭವಾಗಿ ಕಲಿಯಬಹುದು ಎಂದು ಇಸ್ರೋದ ನಿವೃತ್ತ ವಿಜ್ಞಾನಿ ಚಂದ್ರಬಾಬು ತಿಳಿಸಿದರು.

‘ಅ’ ಸಂಸ್ಥೆ ಕಳೆದ 20 ವರ್ಷಗಳಿಂದ ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ವಿಜ್ಞಾನ ಹಾಗೂ ಗಣಿತ ಕಲಿಕೆಯ ಬಗ್ಗೆ ಪ್ರಾಯೋಗಿಕ ಶಿಕ್ಷಣ ನೀಡುತ್ತಿದೆ

-ವರಲಕ್ಷ್ಮಿ ‘ಅ’ ಪ್ರತಿಷ್ಠಾನದ ಸಿಬ್ಬಂದಿ

ಶಾಲೆಗಳಲ್ಲಿ ಕೈತೋಟ ಬೆಳೆಸುವುದರ ಬಗ್ಗೆ ಹಾಗೂ ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಸುಲಭವಾಗಿ ಕಲಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಯಶಸ್ವಿಯಾಗಿದೆ.

-ವಲ್ಲಿಯಮ್ಮಾಳ್ ಅನಿಷಾ ಸಾವಯವ ಕೃಷಿ ಸಂಸ್ಥೆಯ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT