ಭಾನುವಾರ, ಅಕ್ಟೋಬರ್ 2, 2022
18 °C
ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಗಂಗವಾಡಿಯ ಶಿವರುದ್ರಸ್ವಾಮಿ ಆಯ್ಕೆ

ಜಾನಪದ ಅಕಾಡೆಮಿ: ವೀರಗಾಸೆಯ ‘ಶಿವರುದ್ರ’ನಿಗೆ ಪ್ರಶಸ್ತಿಯ ಗರಿ

ಮಹದೇವ್‌ ಹೆಗ್ಗವಾಡಿಪುರ‌ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಕುಟುಂಬದವರ ವಿರೋಧದ ನಡುವೆಯೂ ಛಲ ಬಿಡದೇ ವೀರಗಾಸೆ ಕಲೆಯನ್ನು ಮುಂದುವರಿಸಿದಕ್ಕೆ ಇಂದು ಬೆಲೆ ಸಿಕ್ಕಿದೆ...

2022ನೇ ಸಾಲಿನ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಹೋಬಳಿಯ ಗಂಗವಾಡಿ ಗ್ರಾಮದ ವೀರಗಾಸೆ ಕಲಾವಿದ ಶಿವರುದ್ರಸ್ವಾಮಿ ಅವರ ಸಂತಸದ ನುಡಿಗಳು. 

ಪ್ರಶಸ್ತಿಗೆ ಆಯ್ಕೆಯಾಗಿರುವ ಸಂದರ್ಭದಲ್ಲಿ ಶಿವರುದ್ರಸ್ವಾಮಿ ಅವರು ‘ಪ್ರಜಾವಾಣಿ’ಯೊಂದಿಗೆ ನೆನಪುಗಳ ಬುತ್ತಿ ತೆರೆದಿಟ್ಟರು. 

ತಾತನಿಂದ ತಂದೆಗೆ, ತಂದೆಯಿಂದ ಮಗನಿಗೆ ವಂಶಪಾರಂಪರ‍್ಯವಾಗಿ ಬಂದ ಕಲೆಯನ್ನು ಗೌರವಿಸಿ ಕರಗತ ಮಾಡಿಕೊಂಡು, 18ನೇ ವರ್ಷಕ್ಕೆ ವೀರಗಾಸೆ ಕಲೆ ಅಭ್ಯಾಸ ಆರಂಭ ಮಾಡಿದ ಶಿವರುದ್ರಸ್ವಾಮಿಯವರಿಗೆ ಈಗ 62 ವರ್ಷ. ಗಡಿ ಜಿಲ್ಲೆಯ ಹೆಸರನ್ನು ರಾಜ್ಯಮಟ್ಟದಲ್ಲಿ ಪರಿಚಯಿಸಬೇಕು ಎಂಬ ಛಲ ಬಾಲ್ಯದಲ್ಲೇ ಇವರಲ್ಲಿತ್ತು. ಇದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುತ್ತಾಡಿ ತಮ್ಮ ಖಡ್ಗ ಝಳಪಿಸಿ ವೀರಗಾಸೆ ಕಲೆಯನ್ನು ರಾಜ್ಯದಾದ್ಯಂತ ಪಸರಿಸಿದ್ದಾರೆ.

‘ಈ ಕಲೆಗೆ ಬೆಲೆ ಇಲ್ಲ. ವೀರಗಾಸೆ ಕಲೆ ಬೇಡ. ಇದು ನಮಗೆ ಕೊನೆಯಾಗಲಿ’ ಎಂಬ ಭಾವನೆಯನ್ನು ಶಿವರುದ್ರಸ್ವಾಮಿ ಅವರ ತಂದೆ ನಾಗಣ್ಣ ಹೊಂದಿದ್ದರು. ಹಾಗಾಗಿ, ಕಲೆಯನ್ನು ಶಿವರುದ್ರಸ್ವಾಮಿ ಮುಂದುವರಿಸುವುದಕ್ಕೆ ಅವರ ಪೂರ್ಣ ಬೆಂಬಲ ಇರಲಿಲ್ಲ. ಹಾಗಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ಗ್ರಾಮದಲ್ಲಿ ಮೊದಲಿಗೆ ಸಂಘ ಕಟ್ಟಿ ಕಲೆ ಅಭಿವೃದ್ಧಿಪಡಿಸಿ ನಂತರದ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ವೀರಗಾಸೆ ಕಲಾ ಸಂಘ ಕಟ್ಟಿ ಅಲ್ಲಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಸಂಘವನ್ನು ಅಭಿವೃದ್ಧಿಪಡಿಸುವುದರ ಜತೆಗೆ ಮದುವೆ, ಗೃಹಪ್ರವೇಶ, ಮೆರವಣಿಗೆಗಳು, ಜಯಂತಿ ಹಾಗೂ ದಾರ್ಶನಿಕರ ಮೆರವಣಿಗೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಮನ ಸೆಳೆದರು‌.

ಜಿಲ್ಲೆಯ ಕಾರ್ಯಕ್ರಮಗಳಲ್ಲದೇ ಹೊರ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಮ್ಮ ಕಲಾ ಸೇವೆಯನ್ನು ಮುಂದುವರಿಸಿದರು. ಹಾವೇರಿ ಜಿಲ್ಲೆಯ ಹಂಸಬಾವಿಯಲ್ಲಿ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಇವರ ಕಲೆಯನ್ನು ಅಲ್ಲಿನ ಜನ ಮೆಚ್ಚಿ ಸನ್ಮಾನಿಸಿ ಗೌರವಿಸಿದ್ದಾರೆ. ಬೆಂಗಳೂರು ಕಲಾಮಂದಿರದಲ್ಲಿ ಇವರನ್ನು ಅಭಿನಂದಿಸಲಾಗಿದೆ.

ಮೈಸೂರಿನಲ್ಲಿ ಪ್ರತಿವರ್ಷ ನಡೆಯುವ ಅದ್ದೂರಿ ಜಂಬೂಸವಾರಿಯಲ್ಲಿ ದಶಕದಲ್ಲಿ ವೀರಭದ್ರನ ವೇಷಕಟ್ಟಿ ಕುಣಿದಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಜಾನಪದ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ತಪ್ಪದೆ ಇಂದಿಗೂ ಭಾಗವಹಿಸುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಕಾಯಂ ಆಹ್ವಾನ ಇರುತ್ತದೆ. 

ಇವರ ಕಲಾ ಸೇವೆಯನ್ನು ಗುರುತಿಸಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಗೌರವಿಸಿ ಸನ್ಮಾನಿಸಿದ್ದಾರೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಖಾಸಗಿ ಸಂಘ ಸಂಸ್ಥೆಗಳು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಿವೆ.

‘ಕಲೆಗೆ ಬೆಲೆ ಸಿಕ್ಕಿತು’: ‘ಕರ್ನಾಟಕ ಜಾನಪದ ಅಕಾಡೆಮೆ ಪ್ರಶಸ್ತಿಗೆ ಆಯ್ಕೆಯಾಗಿರುವ ಸುದ್ದಿ ಕೇಳಿ ತುಂಬಾ ಸಂತೋಷವಾಯಿತು. ಕೊನೆಗೂ ನಮ್ಮ ಮನೆತನಕ್ಕೆ, ಕಲೆಗೆ ಬೆಲೆ ಸಿಕ್ಕಿತ್ತು. ನಮ್ಮ ಗ್ರಾಮ ಮತ್ತು ಜಿಲ್ಲೆಯ ಹೆಸರನ್ನು ರಾಜ್ಯದಲ್ಲಿ ಜನಪದ ಹೆಸರಿನಲ್ಲಿ ಗುರುತಿಸಬೇಕು ಎಂಬ ಆಸೆ ಬಾಲ್ಯದಿಂದ ಇತ್ತು. ಅದು ಈಗ ಈಡೇರಿದೆ’ ಎಂದು ಶಿವರುದ್ರಸ್ವಾಮಿ ಅವರು ಹೆಮ್ಮೆಯಿಂದ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು