ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವರಾತ್ರಿ: ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ವಿಶಿಷ್ಟ ಆಚರಣೆ

Last Updated 19 ಫೆಬ್ರುವರಿ 2023, 4:44 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮಸ್ಥರು 35 ಕಿ.ಮೀ ದೂರದಿಂದ ಕಪಿಲಾ ನದಿಯ ನೀರನ್ನು ಕಾಲ್ನಡಿಗೆಯಲ್ಲಿ ಹೊತ್ತು ತಂದು ಗ್ರಾಮದ ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡುವ ಮೂಲಕ ಶಿವರಾತ್ರಿ ಆಚರಿಸಿದರು.

ಹಲವು ಶತಮಾನಗಳಿಂದಲೂ ಈ ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆ ಚಾಲ್ತಿಯಲ್ಲಿದೆ. ಗ್ರಾಮದ ಐದು ಮನೆತನದವರು ಮನೆಗೊಬ್ಬರಂತೆ ಉಪವಾಸವಿದ್ದು, ಶಿವರಾತ್ರಿ ದಿನ ಬೆಳಿಗ್ಗೆಯೇ ನೆರೆಯ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಆನಂಬಳ್ಳಿ ಬಳಿಯಿಂದ ಕಪಿಲಾ ನದಿಯಿಂದ ನೀರನ್ನು ಕಳಶಗಳಲ್ಲಿ ಹೊತ್ತು ಕೊಂಡು ಬರಿ ಕಾಲಿನಲ್ಲಿ ನಡೆದುಕೊಂಡೇ ಗ್ರಾಮಕ್ಕೆ ತರುತ್ತಾರೆ. ಅಲ್ಲಿಂದ ಹೊರಟವರು ಗ್ರಾಮಕ್ಕೆ ತಲುಪುವಾಗ ಸಂಜೆಯಾಗುತ್ತದೆ. ಆ ನಂತರ ಸಿದ್ದರಾಮೇಶ್ವರಸ್ವಾಮಿಗೆ ಅದೇ ಜಲದಿಂದ ಅಭಿಷೇಕ ಮಾಡಿ ಪೂಜೆ ಸಲ್ಲಿಸುತ್ತಾರೆ.

ಈ ರೀತಿ ಮಾಡುವುದರಿಂದ ಗ್ರಾಮಕ್ಕೆ ಶ್ರೇಯಸ್ಸು ಎಂಬ ನಂಬಿಕೆ ಸ್ಥಳೀಯರಲ್ಲಿದೆ.

ಈ ಬಾರಿ ಶಿವಮಲ್ಲು, ಕುಮಾರ, ರಾಜು, ಕರಿಯಪ್ಪ, ಕುಮಾರ ಅವರು ಕಪಿಲಾ ಜಲವನ್ನು ತಲೆಯಲ್ಲಿ ಹೊತ್ತು ಗ್ರಾಮಕ್ಕೆ ತಂದು ಸಿದ್ದರಾಮೇಶ್ವರನಿಗೆ ಅರ್ಪಿಸಿದ್ದಾರೆ.

ಗ್ರಾಮಸ್ಥರು ಜಾಗರಣೆ ಮಾಡುವ ಸಂದರ್ಭದಲ್ಲಿ ದೇವರಿಗೆ ಇದೇ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ. ಇದನ್ನೇ ತೀರ್ಥವಾಗಿ ಮನೆಗೆ ತೆಗೆದುಕೊಂಡು ಹೋಗಿ ಕುಟುಂಬಸ್ಥರಿಗೆಲ್ಲ ನೀಡುತ್ತಾರೆ. ಹಲವು ತಲೆಮಾರುಗಳಿಂದ ಈ ಪದ್ಧತಿ ಗ್ರಾಮದಲ್ಲಿ ಚಾಲ್ತಿಯಲ್ಲಿದ್ದು, ಈಗಿನವರೂ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT