ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಾಮಾಜಿಕ ಬಹಿಷ್ಕಾರ; ಚಾಮರಾಜನಗರ ಜಿಲ್ಲೆಗೆ ಅಂಟಿದ ಶಾಪ

Last Updated 18 ನವೆಂಬರ್ 2020, 8:18 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕುಗಳಲ್ಲಿ ಇತ್ತೀಚೆಗೆ ಎರಡು ಘಟನೆಗಳು ನಡೆದವು.

ಒಂದು, ಹೊನ್ನೂರು ಗ್ರಾಮದಲ್ಲಿ ದಸರಾ ಸಂದರ್ಭದಲ್ಲಿ ನಡೆಯುವ ಗ್ರಾಮ ದೇವತೆಯ ಉತ್ಸವ ಮೂರ್ತಿ ಪರಿಶಿಷ್ಟ ಜಾತಿಯವರ ಬೀದಿಗೂ ಬರಬೇಕು ಎಂದು ತಹಶೀಲ್ದಾರ್‌ ಅವರಿಗೆ ಮನವಿ ಮಾಡಿದ್ದ ಗ್ರಾಮಸ್ಥನಿಗೆ ಗ್ರಾಮದ ಯಜಮಾನರು ಬಹಿಷ್ಕಾರ ಹಾಕಿ, ದಂಡ ವಿಧಿಸಿದ್ದು. ಇನ್ನೊಂದು ಯರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಟ್ಟೆ ಗಣಿಗನೂರು ಗ್ರಾಮದಲ್ಲಿ ನಿವೇಶನವೊಂದರ ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದಂತೆ ನಾಯಕ ಸಮುದಾಯದ ಮುಖಂಡರು ಅದೇ ಸಮುದಾಯದ ವ್ಯಕ್ತಿಯೊಬ್ಬರನ್ನು ಕುಲದಿಂದ ಹೊರಹಾಕಿದ್ದು.

ಇವು ಎರಡು ಉದಾಹರಣೆಗಳಷ್ಟೇ.ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಹಲವು ವರ್ಷಗಳಿಂದ ಹರ ಸಾಹಸಪಡುತ್ತಿರುವ ಚಾಮರಾಜನಗರದ ವಿವಿಧ ಕಡೆಗಳಲ್ಲಿ ವ್ಯಕ್ತಿಗೆ ಅಥವಾ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವ ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಲೇ ಇರುತ್ತವೆ.

ಗ್ರಾಮಗಳು, ಸಮುದಾಯಗಳಲ್ಲಿ ಯಜಮಾನರು ಅಥವಾ ಗೌಡರು ಎನಿಸಿಕೊಂಡಿರುವ ವ್ಯಕ್ತಿಗಳು ರೂಪಿಸಿರುವ ನಿಯಮಗಳನ್ನು ಮೀರಿದವರಿಗೆ ಅಥವಾ ಅವರ ಮಾತನ್ನು ಕೇಳದವರಿಗೆ ಬಹಿಷ್ಕಾರದಂತಹ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಸಣ್ಣಪುಟ್ಟ ತಪ್ಪಿಗಾಗಿ ಊರಿನ ಅಥವಾ ಜಾತಿಯ ಯಜಮಾನರು ದಂಡ ವಿಧಿಸುವುದು ಜಿಲ್ಲೆಯಲ್ಲಿ ಸಾಮಾ‌ನ್ಯ ಸಂಗತಿ. ಆದರೆ, ದೊಡ್ಡ ಮೊತ್ತದ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ಹಾಕುವುದು ಅಪರೂಪ. ಬಹುತೇಕಸಂದರ್ಭಗಳಲ್ಲಿ ಇದು ಬೆಳಕಿಗೆ ಬರುವುದಿಲ್ಲ. ಯಜಮಾನರು, ಊರಿನವರಿಗೆ ಹೆದರಿ ಬಹಿಷ್ಕಾರಕ್ಕೆ ಒಳಗಾದವರು ವಿಷಯವನ್ನು ಹೊರಗಡೆ ಹೇಳುವುದೇ ಇಲ್ಲ. ಬಹಿಷ್ಕಾರಕ್ಕೆ ಒಳಗಾದವರಲ್ಲಿ ಯಾರಾದರೂ ಶಿಕ್ಷಣ ಪಡೆದವರು ಇದ್ದರೆ ಅಥವಾ ಮುಖಂಡರನ್ನು ಎದುರಿಸುವ ಶಕ್ತಿ ಇದ್ದವರು ಧೈರ್ಯವಾಗಿ ಪೊಲೀಸ್‌ ಠಾಣೆಗೆ, ತಹಶೀಲ್ದಾರ್‌ ಅವರಿಗೆ ದೂರು ನೀಡಿದರೆ ಅಥವಾ ಮಾಧ್ಯಮಗಳನ್ನು ಸಂಪರ್ಕಿಸಿದರಷ್ಟೇ ಘಟನೆ ಬೆಳಕಿಗೆ ಬರುತ್ತದೆ. ಇತ್ತೀಚೆಗೆ ವರದಿಯಾಗುತ್ತಿರುವುದೆಲ್ಲ ಇಂತಹ ಪ್ರಕರಣಗಳೇ.

ಹಲವು ವರ್ಷಗಳ ಹಿಂದೆಯೇ ಸಾಮಾಜಿಕ ಬಹಿಷ್ಕಾರಕ್ಕೆ ಸಿಲುಕಿ, ಊರಿನವರ ವರ್ತನೆಯಿಂದ ಬೇಸತ್ತು, ಜೀವನ ಮಾಡಲು ಸಾಧ್ಯವಾಗದೆ ಅನಿವಾರ್ಯವಾಗಿ ತಾವು ಎದುರಿಸುತ್ತಿರುವ ಸಂಕಷ್ಟವನ್ನು ಹೇಳಿಕೊಂಡವರೂ ಇದ್ದಾರೆ.

ಅಲ್ಲಲ್ಲಿ ಕಂಡು ಬರುತ್ತಿರುವ ಅಸ್ಪೃಶ್ಯತೆ ಆಚರಣೆ ಜಿಲ್ಲೆಗೆ ಅಂಟಿದ ಒಂದು ಶಾಪವಾದರೆ, ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ‌ಮತ್ತೊಂದು ಶಾಪ. ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಊರುಗಳಲ್ಲಿ ಈ ಪಿಡುಗು ಹೆಚ್ಚು ಕಾಣಿಸಿಕೊಳ್ಳುತ್ತಿರುತ್ತದೆ.

ಯಜಮಾನಿಕೆ ಎಂಬುದು ಸಂಕೀರ್ಣ ಪದ್ಧತಿ. ಪ್ರಜಾಪ್ರಭುತ್ವದ ಆದರ್ಶಗಳಿಗೆ ವಿರುದ್ಧವಾಗಿರುವ, ಹಿಂದಿನ ಕಾಲದಲ್ಲಿದ್ದ ಪಾಳೆಗಾರಿಕೆಯ ಪಳೆಯುಳಿಕೆಯಾಗಿರುವ ಈ ಪದ್ಧತಿ ಜಿಲ್ಲೆಯ ಎಲ್ಲ ಊರುಗಳಲ್ಲೂ ಕಾಣ ಸಿಗುತ್ತದೆ. ನಗರ, ಪಟ್ಟಣ ಪ್ರದೇಶಗಳನ್ನೂ ಇದು ಬಿಟ್ಟಿಲ್ಲ.

ಎಲ್ಲ ಊರುಗಳಲ್ಲಿಪ್ರತಿಯೊಂದು ಜಾತಿಗೆ ಯಜಮಾನರು ಇರುತ್ತಾರೆ. ಇಡೀ ಊರಿಗೆ ಪ್ರತ್ಯೇಕ ಯಜಮಾನರ ತಂಡ ಇರುತ್ತದೆ. ಇದರಲ್ಲಿ ಎಲ್ಲ ಕೋಮುಗಳ ಮುಖಂಡರು ಇರುತ್ತಾರೆ.

ಜಾತಿ/ಕುಲದ ಮಟ್ಟದಲ್ಲಿ ಕಂಡು ಬರುವ ಸಮಸ್ಯೆಗಳನ್ನು ಆಯಾ ಕುಲಗಳ ಯಜಮಾನರೇ ರಾಜಿ ಪಂಚಾಯಿತಿ ಮಾಡಿ ಪರಿಹರಿಸುತ್ತಾರೆ. ಎರಡು ಸಮುದಾಯಗಳ ನಡುವೆ ಸಮಸ್ಯೆಗಳು ಬಂದರೆ ಊರಿನ ಯಜಮಾನರು ಸಭೆ ಸೇರಿ ಇತ್ಯರ್ಥ ಪಡಿಸಲು ಯತ್ನಿಸುತ್ತಾರೆ.

ಮದುವೆ, ಮುಂಜಿ, ಗೃಹ ಪ್ರವೇಶ ಸೇರಿದಂತೆ ಶುಭ ಸಮಾರಂಭಗಳು, ಸಾವು, ಅಂತ್ಯಕ್ರಿಯೆ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು, ಊರಿನ ಜಾತ್ರೆ ಸೇರಿದಂತೆ ಎಲ್ಲದಕ್ಕೂ ಯಜಮಾನರು ಇರಬೇಕು. ದಾಯಾದಿ ಕಲಹ, ಗಲಾಟೆ, ಆಸ್ತಿ ವ್ಯಾಜ್ಯ... ಹೀಗೆ ಅವರು ಇತ್ಯರ್ಥಪಡಿಸದ ವಿಷಯಗಳೇ ಇಲ್ಲ. ಗ್ರಾಮದಿಂದ ಯಾವ ಪ್ರಕರಣವೂ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತದಂತೆ ಅವರು ಮಾಡುತ್ತಾರೆ. ಹಲವು ಊರುಗಳಲ್ಲಿ ತಮ್ಮ ಗಮನಕ್ಕೆ ತಾರದೇ ಪೊಲೀಸ್‌ ಠಾಣೆಗೆ ಹೋಗಬಾರದು ಎಂಬ ಕಟ್ಟಪ್ಪಣೆಯನ್ನೂ ಹೊರಡಿಸುತ್ತಾರೆ.ಒಂದು ವೇಳೆ, ತಮ್ಮಿಂದ ಬಗೆಹರಿಸಲು ಆಗುವುದಿಲ್ಲ ಎಂದಾದರೆ ಮಾತ್ರ ಅವರೇ ಠಾಣೆಗೆ ದೂರು ನೀಡುವಂತೆ ಹೇಳುತ್ತಾರೆ.

ಈ ಯಜಮಾನರು ಎಷ್ಟು ಪ್ರಭಾವಿಗಳೆಂದರೆ, ಸಾಮಾನ್ಯವಾಗಿ ಪೊಲೀಸರು ಕೂಡ ಅವರ ಪರವಾಗಿಯೇ ಇರುತ್ತಾರೆ (ಊರಿನಲ್ಲಿ ಯಜಮಾನರಿದ್ದರೆ ತಮ್ಮ ಕೆಲಸ ಕಡಿಮೆಯಾಗುತ್ತದೆ. ಗಲಾಟೆಗಳು ನಡೆಯುವುದಿಲ್ಲ, ದೂರುಗಳು ಬರುವುದಿಲ್ಲ ಎಂಬುದು ಅವರ ಈ ನಿಲುವಿಗೆ ಕಾರಣ). ಯಾವುದಾದರೂ ಊರಿನ ಜಗಳ ಠಾಣೆ ಮೆಟ್ಟಿಲೇರಿತು ಎಂದಿಟ್ಟುಕೊಳ್ಳಿ. ಪೊಲೀಸರು ದೂರು ದಾಖಲಿಸುವ ಮೊದಲು ಗ್ರಾಮದ ಯಜಮಾನರನ್ನು ಬರುವುದಕ್ಕೆ ಹೇಳುತ್ತಾರೆ. ಯಜಮಾನರ ಉಪಸ್ಥಿತಿಯಲ್ಲೇ ಇತ್ಯರ್ಥ ಪಡಿಸಲು ಸಲಹೆ ನೀಡುತ್ತಾರೆ. ಜಗಳದ ಬಗ್ಗೆ ಹಾಗೂ ದೂರುದಾರರ ಬಗ್ಗೆ ಯಜಮಾನರ ಬಳಿಯಿಂದಲೇ ಮಾಹಿತಿ ಪಡೆಯುತ್ತಾರೆ

ಕಾನೂನು ಬಾಹಿರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಜಮಾನಿಕೆಗೆ ಅವಕಾಶ ಇಲ್ಲ. ಇದು ಕಾನೂನು ಬಾಹಿರ. ಹಾಗಿದ್ದರೂ, ದಂಡ ವಿಧಿಸುವುದು ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ವರದಿಯಾದಾಗ ಬಹುತೇಕ ಸಂದರ್ಭಗಳಲ್ಲಿ ಪ್ರಕರಣಗಳು ದಾಖಲಾಗುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯೂ ಆಗುವುದಿಲ್ಲ.

ಅಧಿಕಾರಿಗಳು, ಬಹಿಷ್ಕಾರಕ್ಕೆ ಒಳಗಾದವರು ಹಾಗೂ ಯಜಮಾನರನ್ನು ಸಭೆ ಸೇರಿಸಿ ಘಟನೆ ಬಗ್ಗೆ ಮಾಹಿತಿ ಪಡೆದು ಮುಂದೆ ಇಂತಹ ಪ್ರಕರಣ ನಡೆಯಬಾರದು, ಪುನರಾವರ್ತನೆಯಾದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುತ್ತಾರೆ. ಒಂದರ್ಥದಲ್ಲಿ ಅದು ರಾಜಿ ಸಂಧಾನ ಸಭೆ. ಯಜಮಾನರು ತಪ್ಪನ್ನು ಒಪ್ಪಿಕೊಂಡು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾರೆ. ಸಮಸ್ಯೆ ಬಗೆಹರಿದ ಸಮಾಧಾನದಲ್ಲಿ ಬಹಿಷ್ಕಾರಕ್ಕೆ ಒಳಗಾದವರು, ನೀಡಿದ್ದ ದೂರನ್ನು ವಾಪಸ್‌ ಪಡೆಯುತ್ತಾರೆ. ಅಲ್ಲಿಗೆ ಒಂದು ಪ್ರಕರಣ ಇತ್ಯರ್ಥವಾಗಿ ಕಾಲಗರ್ಭ ಸೇರುತ್ತದೆ.

‘ಯಜಮಾನಿಕೆ ಎನ್ನುವುದು ಒಂದು ರೀತಿಯಲ್ಲಿ ಪಾಳೆಗಾರಿಕೆ ಹಾಗೂ ಗೂಂಡಾಗಿರಿ’ ಎಂದು ಹೇಳುತ್ತಾರೆ ಸಾಮಾಜಿಕ ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ.

‘ಜಾತಿಗೆ ಅಥವಾ ಊರಿಗೆ ಮುಖಂಡರು ಇರಲಿ. ಅವರ ಕೆಲಸಗಳು ಮದುವೆ, ಗೃಹಪ್ರವೇಶ ಇನ್ನಿತರ ಶುಭಸಮಾರಂಭಗಳು ಸಾವು ಸಂಭವಿಸಿದಾಗ ಅಂತ್ಯಕ್ರಿಯೆಗೆ ಮಾತ್ರ ಸೀಮಿತವಾಗಿರಲಿ. ಜಮೀನು ವಿವಾದ, ಘರ್ಷಣೆ, ಕೊಲೆ ಯತ್ನ ಮುಂತಾದ ಗಂಭೀರ ಪ್ರಕರಣಗಳು ಅಥವಾ ನ್ಯಾಯಾಲಯದಲ್ಲಿ ಬಗೆಹರಿಯಬೇಕಾದ ಘಟನೆಗಳನ್ನು ಇತ್ಯರ್ಥ ಪಡಿಸಲು ಅವರು ಯತ್ನಿಸಬಾರದು. ಯಜಮಾನರು ನೀಡಿರುವ ತೀರ್ಮಾನ ಅಧಿಕೃತ ಅಲ್ಲ, ಅದಕ್ಕೆ ಯಾವುದೇ ದಾಖಲೆಗಳಿರುವುದಿಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಕಡಿಮೆಯಾಗುತ್ತಿವೆ’ ಎಂದು ಹೇಳುತ್ತಾರೆ ಅವರು.

ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿರುವ ಇಂತಹ ಪ್ರಕರಣಗಳ ಬಗ್ಗೆ ಜನರು ಸ್ವತಃ ಜಾಗೃತರಾಗುವ ಅವಶ್ಯಕತೆ ಇದೆ. ಗ್ರಾಮಗಳಲ್ಲಿ ಇಂತಹ ಘಟನೆಗಳು ನಡೆದಾಗ ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಗಮನಕ್ಕೆ ತರಬೇಕು. ಆಡಳಿತ ಕೂಡ ಸಾಮಾಜಿಕ ಪಿಡುಗನ್ನು ಜೀವಂತವಾಗಿಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT