ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಸೊಲಾರ್‌ ಬೇಲಿ; ಕುಗ್ಗಿದ ಕಾಡಾನೆ ಕಾಟ

Published 12 ಅಕ್ಟೋಬರ್ 2023, 6:28 IST
Last Updated 12 ಅಕ್ಟೋಬರ್ 2023, 6:28 IST
ಅಕ್ಷರ ಗಾತ್ರ

ಚಾಮರಾಜನಗರ: ಈ ವರ್ಷಾರಂಭದಲ್ಲಿ ತಾಲ್ಲೂಕಿನ ಅರಕಲವಾಡಿ ವ್ಯಾಪ್ತಿಯ ಮೂಡಲಹೊಸಹಳ್ಳಿ, ವಡ್ಗಲ್‌ಪುರ, ಲಿಂಗನಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ರೈತರು ಕಾಡಾನೆಗಳ ಹಾವಳಿಗೆ ತತ್ತರಿಸಿದ್ದರು. ಪ್ರತಿ ದಿನವೂ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪ‍ಡಿಸುತ್ತಿದ್ದರು. 

ನೆರೆಯ ತಮಿಳುನಾಡಿನ ಸತ್ಯಮಂಗಲ ಸಂರಕ್ಷಿತ ಪ್ರದೇಶದಿಂದ ಹಿಂಡು ಹಿಂಡಾಗಿ ಬರುತ್ತಿದ್ದ ಕಾಡಾನೆಗಳು ತಾಲ್ಲೂಕಿನ ಕೃಷಿಗಳ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದವು. ಎಂಟು ತಿಂಗಳ ಬಳಿಕ ಅಲ್ಲಿ ಕಾಡಾನೆಗಳ ಹಾವಳಿ ಗಣನೀಯವಾಗಿ ಇಳಿದಿದೆ.  

ಅರಣ್ಯ ಇಲಾಖೆ ಕ್ಷಿಪ್ರವಾಗಿ ಕ್ರಮ ಕೈಗೊಂಡು, ಆ ಭಾಗದಲ್ಲಿ 5.5 ಕಿ.ಮೀ ಉದ್ದದ ಸೌರ ತೂಗು ಬೇಲಿ ನಿರ್ಮಿಸಿ, ಆನೆಗಳು ಕೃಷಿ ಜಮೀನಿಗೆ ನುಗ್ಗದಂತೆ ಮಾಡಿದೆ. ಇದರಿಂದಾಗಿ ಈ ಭಾಗದ ರೈತರು ಕೊಂಚ ನಿರಾಳವಾಗುವಂತೆ ಮಾಡಿದೆ. 

ವಿಶೇಷವೆಂದರೆ, ಈ ಪ್ರದೇಶದಲ್ಲಿ ಅರಣ್ಯ ಭೂಮಿ ಇಲ್ಲ. ರೈತರೇ ತಮ್ಮ ಜಮೀನಿನಲ್ಲೇ ಬೇಲಿ ನಿರ್ಮಿಸಲು ಅರಣ್ಯ ಇಲಾಖೆಗೆ ಅವಕಾಶ ನೀಡಿದ್ದಾರೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು, ಇಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವರಿಕೆ ಮಾಡಿ, ಅನುದಾನ ತರಲು ಯಶಸ್ವಿಯಾಗಿದ್ದಾರೆ. ಏಳೆಂಟು ತಿಂಗಳ ಅವಧಿಯಲ್ಲಿ ಸೌರ ಬೇಲಿ ನಿರ್ಮಿಸಲು ಯಶಸ್ವಿಯಾಗಿದ್ದಾರೆ.  

ಸ್ಥಳೀಯ ರೈತರ ಸಹಕಾರದಿಂದ ಬೇಲಿ ನಿರ್ಮಿಸಲು ಸಾಧ್ಗವಾಗಿದೆ. ಈಗ ಆನೆ ಹಾವಳಿ ಕಡಿಮೆಯಾಗಿದ್ದು ಸ್ಥಳೀಯರಿಗೂ ಅನುಕೂಲವಾಗಿದೆ.
ದೀಪ್‌ ಜೆ.,ಕಾಂಟ್ರ್ಯಾಕ್ಟರ್‌, ಬಿಆರ್‌ಟಿ ಡಿಸಿಎಫ್‌

ಸೋಲಾರ್‌ ಬೇಲಿ ಆನೆಗಳ ಹಾವಳಿಗೆ ಕಡಿವಾಣ ಹಾಕಿರುವುದರಿಂದ, ಬೇಲಿ ಈಗ ಕೊನೆಗೊಂಡಿರುವ ಸ್ಥಳದಿಂದ ಇನ್ನೂ 1.5 ಕಿ.ಮೀ ನಿರ್ಮಾಣಕ್ಕೆ ಇಲಾಖೆ ಕೈಹಾಕಿದೆ. ಅಲ್ಲೂ ರೈತರು ತಮ್ಮ ಜಮೀನು ನೀಡಲು ಮುಂದಾಗಿದ್ದಾರೆ. 

5.5 ಕಿ.ಮೀ ಬೇಲಿ, ₹35 ಲಕ್ಷ ವೆಚ್ಚ

ಮೂಡ‌ಲ ಹೊಸಹಳ್ಳಿ, ಹೊನ್ನ ಹಳ್ಳಿ ಮತ್ತು ಅರಕಲವಾಡಿ ಗ್ರಾಮದ ವ್ಯಾಪ್ತಿಯಲ್ಲಿ 5.5 ಕಿ.ಮೀ ಸೌರ ಬೇಲಿ ನಿರ್ಮಾಣವಾಗಿದೆ. ಇದಕ್ಕೆ ₹35 ಲಕ್ಷ ವೆಚ್ಚವಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು. 

‘ಆ ಭಾಗದಲ್ಲಿ ಇಲಾಖೆಗೆ ಸೇರಿದ ಭೂಮಿ ಇಲ್ಲ. ತಮಿಳುನಾಡಿನ ಸತ್ಯಮಂಗಲ ಅರಣ್ಯ ಪ್ರದೇಶದಿಂದ ಆನೆಗಳು ಬರುತ್ತಿದ್ದವು. ಅಲ್ಲಿನ ಅರಣ್ಯ ಇಲಾಖೆ ಬೇಲಿ ನಿರ್ಮಿಸಿದ್ದರೆ, ಇತ್ತ ಆನೆಗಳು ಬರುತ್ತಿರಲಿಲ್ಲ. ಅವರು ನಿರ್ಮಿಸದೇ ಇದ್ದುದರಿಂದ ನಾವು ಬೇಲಿ ಹಾಕಬೇಕಾಯಿತು’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇದುವರೆಗೂ ನಾವು ಅರಣ್ಯ ಭೂಮಿಯಲ್ಲಿ ಮಾತ್ರ ಬೇಲಿ ನಿರ್ಮಿಸುತ್ತಿದ್ದೆವು. ಇಲ್ಲಿ ರೈತರ ಮೀನಿನಲ್ಲೇ ಬೇಲಿ ನಿರ್ಮಿಸಿದ್ದೇವೆ. ಅವರು ಸ್ವಯಂ ಪ್ರೇರಿತರಾಗಿ ಭೂಮಿ ಬಳಸಿಕೊಳ್ಳಲು ಅನುಮತಿ ನೀಡಿದ್ದರು’ ಎಂದು ಹೇಳಿದರು. 

‘ರೈತರ, ಕಂದಾಯ ಜಮೀನಿನಲ್ಲಿ ಬೇಲಿ ನಿರ್ಮಿಸಲಾಗಿದ್ದು, ಈಗ ಆನೆಗಳ ಕಾಟ ತಗ್ಗಿದೆ. ಬೇಲಿಯಿಂದಾಗಿ ನಮ್ಮ ಭಾಗದ ರೈತರಿಗೆ ಅನುಕೂಲವಾಗಿದೆ’ ಎಂದು ಅರಕಲವಾಡಿ ಗ್ರಾಮ ಪಂಚಾಯಿತಿ ಸದಸ್ಯ, ಮೂಡಲ ಹೊಸಗಳ್ಳಿ ಗ್ರಾಮದ ಎಚ್‌.ಪಿ.ಪರಶಿವಪ್ಪ (ಸ್ವಾಮಿ) ‘ಪ್ರಜಾವಾಣಿ’ಗೆ ತಿಳಿಸಿದರು. 

ಇನ್ನೂ 1.5 ಕಿ.ಮೀ ಬೇಲಿ ನಿರ್ಮಾಣ

ಇದೇ ಭಾಗದಲ್ಲಿ ಇನ್ನೂ 1.5 ಕಿ.ಮೀ ಸೌರ ತೂಗು ಬೇಲಿ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಅಲ್ಲೂ ರೈತರು ತಮ್ಮ ಜಮೀನನ್ನು ಬಿಟ್ಟುಕೊಡಲು ಮುಂದಾಗಿದ್ದಾರೆ.  ‘ಇದಕ್ಕೆ ₹8 ಲಕ್ಷ ಖರ್ಚಾಗಲಿದೆ. ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ’ ಎಂದು ಚಾಮರಾಜನಗರ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಉಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಸೌರಬೇಲಿ ನಿರ್ಮಾಣದಲ್ಲಿ ತೊಡಗಿರುವ ಸಿಬ್ಬಂದಿ
ಸೌರಬೇಲಿ ನಿರ್ಮಾಣದಲ್ಲಿ ತೊಡಗಿರುವ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT