ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಣರಾಜ್ಯೋತ್ಸವ ಪಥಸಂಚಲನ: ಚಾಮರಾಜನಗರದ ಸೋಲಿಗ ಮಹಿಳೆ ಅತಿಥಿ

Last Updated 22 ಜನವರಿ 2021, 13:28 IST
ಅಕ್ಷರ ಗಾತ್ರ

ಚಾಮರಾಜನಗರ: ದೆಹಲಿಯಲ್ಲಿ ಜನವರಿ 26ರಂದು ನಡೆಯುಲಿರುವ ಗಣರಾಜ್ಯೋತ್ಸವ ಪಥಸಂಚಲನ ಕಾರ್ಯಕ್ರಮದಲ್ಲಿ ಜಿಲ್ಲೆಯ ಸೋಲಿಗ ಮಹಿಳೆ ಮಾದಮ್ಮ ಅವರು ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಬುಡಕಟ್ಟು ವ್ಯವಹಾರಗಳ ಇಲಾಖೆಯು ಪ್ರತಿ ವರ್ಷ ಎಲ್ಲ ರಾಜ್ಯಗಳಿಂದಲೂ ಬುಡಕಟ್ಟು ಸಮುದಾಯಕ್ಕೆ ಸೇರಿದ ಇಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತದೆ.

ಈ ಬಾರಿ, ಚಾಮರಾಜನಗರ ತಾಲ್ಲೂಕಿನ ಪುಣಜನೂರು ಗ್ರಾಮದ ಹೊಸಪೋಡಿನ ಮಾದಮ್ಮ (58) ಅವರು ರಾಜ್ಯದಿಂದ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿರುವ ರಾಜ್ಯ ಗಿರಿಜನ ಸಂಶೋಧನಾ ಕೇಂದ್ರವು ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಕರೆತರುವ ಜವಾಬ್ದಾರಿ ಹೊತ್ತಿದೆ. ಗುರುವಾರ ಅವರು ದೆಹಲಿಗೆ ತೆರಳಿದ್ದಾರೆ.

ಮಾದಮ್ಮ ಅವರು ಪುಣಜನೂರು ಭಾಗದಲ್ಲಿ ಸೋಲಿಗರಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

‘ರಾಜ್ಯದಿಂದ ಪ್ರತಿವರ್ಷ ಬುಡಕಟ್ಟು ಸಮುದಾಯಕ್ಕೆ ಸೇರಿದವರನ್ನು ಕಳುಹಿಸಲಾಗುತ್ತದೆ. ಸಮುದಾಯದಲ್ಲಿ ಹೆಚ್ಚು ಸಕ್ರಿಯವಾಗಿರುವವರು ಹಾಗೂ ಪ್ರವಾಸಕ್ಕೆ ಹೋಗಲು ಉತ್ಸಾಹ ತೋರಿದವರನ್ನು ಆಯ್ಕೆ ಮಾಡಲಾಗುತ್ತದೆ. ಮೈಸೂರಿನಲ್ಲಿರುವ ರಾಜ್ಯ ಗಿರಿಜನರ ಸಂಶೋಧನಾ ಸಂಸ್ಥೆಯು ಆಯ್ಕೆಯಾದವರನ್ನು ಕರೆದುಕೊಂಡು ಹೋಗುತ್ತದೆ. ಮಾದಮ್ಮ ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದೇವೆ’ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಹೊನ್ನೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಿಂದೆಯೂ ಹೋಗಿದ್ದರು: ಜಿಲ್ಲೆಯ ನಾಲ್ಕೈದು ಮಂದಿ ಈ ಹಿಂದೆಯೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

‘ಪರಿಶಿಷ್ಟ ಪಂಗಡದವರಿಗೆ ಹೊರ ಜಗತ್ತಿನ ಪರಿಚಯವಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದಿಂದ ಇಬ್ಬರನ್ನು ಕಳುಹಿಸಲಾಗುತ್ತದೆ. ವಾಸ್ತವವಾಗಿ ಬುಡಕಟ್ಟು ಸಮುದಾಯದ ದಂಪತಿಯನ್ನು ಕಳುಹಿಸಬೇಕು. ಆದರೆ, ಬೇರೆ ಜಿಲ್ಲೆಯವರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಒಂದು ಜಿಲ್ಲೆಯಿಂದ ಒಬ್ಬರು ಹಾಗೂ ಮತ್ತೊಂದು ಜಿಲ್ಲೆಯ ಇನ್ನೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ’ ಎಂದುಸೋಲಿಗ ಮುಖಂಡ ಡಾ.ಸಿ.ಮಾದೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇವರು ಪಥ ಸಂಚಲನ ಕಾರ್ಯಕ್ರಮದಲ್ಲಿ ಅತಿಥಿಗಳು ಭಾಗವಹಿಸುವುದು ಮಾತ್ರವಲ್ಲದೇ, ರಾಷ್ಟ್ರಪತಿ, ಉಪರಾಷ್ಟ್ರಪತಿ ಪ್ರಧಾನಿ, ಬುಡಕಟ್ಟು ವ್ಯವಹಾರಗಳ ಸಚಿವರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ’ ಎಂದು ಅವರು ವಿವರಿಸಿದರು.

‘ಮೊದಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುತ್ತಿತ್ತು. ಐದಾರು ವರ್ಷಗಳಿಂದ ಗಿರಿಜನ ಸಂಶೋಧನಾ ಕೇಂದ್ರವು ಕರೆದುಕೊಂಡು ಹೋಗುತ್ತಿದೆ’ ಎಂದು ಮಾದೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT