ಗುರುವಾರ , ಮೇ 13, 2021
22 °C
ಬಿತ್ತನೆ ಬೀಜ ಪೂರೈಸುವ ಕಂಪನಿಗಳ ನಂಬಿ ಕೈ ಸುಟ್ಟುಕೊಂಡರು

ಕುಂಬಳ ಬೀಜೋತ್ಪನ್ನ ಕೃಷಿ ನಂಬಿದವರಿಗೆ ಕಣ್ಣೀರು

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ತಾಲ್ಲೂಕಿನ ಕೆಲವು ರೈತರು ಬಿತ್ತನೆ ಬೀಜ ಪೂರೈಸುವ ಕಂಪನಿಗಳ ಮಾತು ಕೇಳಿ ಬೀಜೋತ್ಪತ್ತಿ ಕೃಷಿ ಕೈಗೊಂಡು ಹಾಕಿದ ಬಂಡವಾಳವನ್ನು ಕಳೆದುಕೊಂಡಿದ್ದಾರೆ. ಉತ್ಪಾದನೆ ಮಾಡಿದ ಬೀಜಗಳನ್ನು ಸಕಾಲದಲ್ಲಿ ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. 

ತಾಲ್ಲೂಕಿನ ಕೆಲವು ರೈತರು ಕುಂಬಳ ಬಿತ್ತನೆ ಬೀಜ ಪೂರೈಸುವ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. 

ಬೀಜ ಕಂಪನಿಗಳು ಬೇರೆ ಜಿಲ್ಲೆಗಳಲ್ಲಿ ಬೀಜೋತ್ಪನ್ನ ಮಾಡುವವರನ್ನು ಪರಿಚಯ ಮಾಡಿಸಿ, 'ನಾಟಿ ಬೀಜ'ಕ್ಕಾಗಿ ಕೃಷಿ ಮಾಡುವಂತೆ ಸಲಹೆ ನೀಡಿವೆ. ಹೆಚ್ಚಿನ ಲಾಭದ ಆಸೆ ಹಾಗೂ ಅಲ್ಫಾವಧಿಯಲ್ಲಿ ಲಾಭ ತರುವ ಬೇಸಾಯಗಳಲ್ಲಿ ತೊಡಗುವಂತೆ ಪ್ರೇರೇಪಿಸಿವೆ. ಇದನ್ನು ನಂಬಿದ ರೈತರು ತಮ್ಮ ಹೊಲ, ಗದ್ದೆಗಳಲ್ಲಿ ಹೊಸ ತಳಿ ಬೀಜ ಸಂಗ್ರಹಿಸುವ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆದರೆ, ನಿರೀಕ್ಷೆಯತೆ ಬೀಜ ಉತ್ಪಾದಿಸಲು ಆಗದೆ,  ವೆಚ್ಚದಲ್ಲಿ ಅರ್ಧ ಭಾಗವನ್ನು ಕಳೆದುಕೊಂಡು ಕಂಗೆಟ್ಟಿದ್ದಾರೆ. 

ರೈತ ಕೊಮಾರನಪುರ ಪ್ರದೀಪ್ ಕುಮಾರ್ ಮಾತನಾಡಿ, 'ಉತ್ತಮ ತಳಿಯ ಬೀಜೋತ್ಪತ್ತಿ ಮಾಡಿದರೆ, ಕೆಜಿಗೆ ₹ 1,400 ಬೆಲೆ ಇದೆ. ಕಂಪನಿಗಳು ಉತ್ತಮ ಫಸಲು ಮತ್ತು ಉತ್ಪಾದಕತೆ ಹೆಚ್ಚಿಸುವ ಕುಂಬಳ ಬೀಜಗಳನ್ನು ಕೃಷಿಕರಿಗೆ ಮಾರಾಟ ಮಾಡುತ್ತವೆ. ಉತ್ತಮ ಬ್ರ್ಯಾಂಡ್ ಮತ್ತು ಕಂಪನಿಯ ಮುದ್ರೆಯೂ ಇರುವುದರಿಂದ ಸಹಜವಾಗಿಯೇ ರೈತರೂ ಇಂತಹ ಬೀಜಗಳನ್ನು ಹೆಚ್ಚಿನ ದರ ನೀಡಿ ಖರೀದಿಸುತ್ತಾರೆ. ಆದರೆ, ಇಂತಹ ಬೀಜಗಳನ್ನು ಕಂಪನಿಗಳು ರೈತರಿಂದಲೇ ಬೆಳೆಸುತ್ತಾರೆ. ಇದಕ್ಕೆ ಬೇಕಾದ ತಾಂತ್ರಿಕ ನೆರವು ಮತ್ತು ಸಲಹೆಗಳನ್ನು ಕಂಪನಿಗಳು ನೀಡುತ್ತವೆ. ಆದರೆ, ಉತ್ಪಾದನೆ ಕುಸಿದಾಗ ಬೇಸಾಯಗಾರರ ನೆರವಿಗೆ ಧಾವಿಸುವುದಿಲ್ಲ' ಎಂದು ದೂರಿದರು. 

‘ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೆಳೆದಿದ್ದ ಕುಂಬಳ ತಾಕುಗಳಿಗೆ ಇಲ್ಲಿನ ರೈತರನ್ನು ಕರೆಸಿ, ಪ್ರಾತ್ಯಕ್ಷಿಕೆಗಳ ಮೂಲಕ ಪರಿಚಯ ಮಾಡಿದ್ದರು. ಅಲ್ಲಿನ ಬೇಸಾಯಗಾರರು ಬೀಜೋತ್ಪತ್ತಿ ವಿಧಾನ ಹೆಚ್ಚಿನ ವರಮಾನ ತಂದುಕೊಡುವ ಬೆಳೆ ಎಂದು ನಂಬಿಸಿದ್ದರು. ಮೂರು ತಿಂಗಳು ಗಿಡಕ್ಕೆ ರೋಗ ತಗಲದಂತೆ, ಎಲೆ ಮುದುಡದಂತೆ ಹಗಲು ರಾತ್ರಿ ನೋಡಿಕೊಂಡೆವು. 1 ಎಕರೆ 5 ಗುಂಟೆಯಲ್ಲಿ ಬೆಳೆಸಿದ ಕುಂಬಳದಿಂದ 22 ಕೆಜಿ ಬೀಜ ಮಾತ್ರ ಸಂಗ್ರಹವಾಗಿದೆ. ಕೆಜಿಗೆ ₹1,450 ಬೆಲೆ ಇದೆ. ಆದರೆ, ಖರ್ಚು ₹50 ಸಾವಿರ ದಾಟಿದೆ’ ಎಂದು ಅವರು ಮಾಹಿತಿ ನೀಡಿದರು.

‘ಜಿಲ್ಲೆಯ ಇತರ ಭಾಗಗಳಲ್ಲಿ ನಾಟಿ ಮಾಡಿದವರಿಗೂ ಇಳುವರಿ ಕುಸಿದಿದೆ. ಬೀಜಗಳನ್ನು ಕಂಪನಿಗಳು ಬೇಗ ಕೊಂಡರೆ, ಬಂಡವಾಳದ ಅರ್ಧದಷ್ಟು ಹಣ ಕೈಸೇರುತ್ತದೆ. ಹಾಗಾಗಿ, ಬೀಜ ಪೂರೈಸುವ ಕಂಪನಿಗಳು ರೈತರ ಹಿತಕಾಯುವತ್ತ ಹೆಚ್ಚಿನ ಆಸ್ಥೆ ವಹಿಸಬೇಕು’ ಎಂದು ಅವರು ಆಗ್ರಹಿಸಿದರು. 

ಬೀಜೋತ್ಪನ್ನ ಕೃಷಿ ಹೇಗೆ?

‘ಕುಂಬಳ ಹೂ ಬಿಟ್ಟಾಗ ಗಂಡು ಮತ್ತು ಹೆಣ್ಣು ಹೂಗಳನ್ನು ಗುರುತಿಸಿ ಪರಾಗಸ್ಪರ್ಶ ಮಾಡಬೇಕು. ನಂತರ ಹೂಗಳನ್ನು ಬಿಸಿಲಿಗೆ ಬಾಡದಂತೆ ಗಿಡದಲ್ಲಿ ಕವರ್ ಮಾಡಬೇಕು. ಕಟಾವಿನ ಹಂತದಲ್ಲಿ ಕಾಯಿಗಳನ್ನು ನೆರಳಿನಲ್ಲಿ ಒಣಗಿಸಬೇಕು. ಬೀಜ ಪ್ರತ್ಯೇಕಗೊಳಿಸಿದ ಮೇಲೆ ತಾಂತ್ರಿಕತೆಯ ಮೂಲಕ ಬೀಜ ಒಣಗಿಸಿ, ನಂತರ ಕಂಪನಿಗೆ ಮಾರಾಟ ಮಾಡಬೇಕು. ಬೇರೆಡೆ ಮಾರಾಟ ಮಾಡಲು ರೈತರಿಗೆ ಅವಕಾಶ ಇಲ್ಲ’ ಎನ್ನುತ್ತಾರೆ ರೈತರು.

‘ರೈತರೇ ಜವಾಬ್ದಾರರು’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್‌.ರಾಜು ಅವರು, ‘ಬೆರಳೆಣಿಕೆಯ ರೈತರಷ್ಟೇ ಬೀಜೋತ್ಪದನಾ ಕೃಷಿಯಲ್ಲಿ ತೊಡಗಿದ್ದಾರೆ. ರೈತರೇ ನೇರವಾಗಿ ಬೀಜ ಮಾರಾಟ ಮಾಡುವ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಲಾಭ ನಷ್ಟಗಳಿಗೆ ಬೇಸಾಯಗಾರರೇ ಜವಾಬ್ದಾರರಾಗುತ್ತದೆ. ಹೀಗಾಗಿ, ಇದು ಇಲಾಖೆಯ ಗಮನಕ್ಕೆ ಬರುವುದಿಲ್ಲ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು