ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮಾವಾಸ್ಯೆ | ಮಾದೇಶ್ವರನಿಗೆ ವಿಶೇಷ ಪೂಜೆ: ಅಪಾರ ಸಂಖ್ಯೆಯ ಭಕ್ತರು ಭಾಗಿ

Published 6 ಜೂನ್ 2024, 14:09 IST
Last Updated 6 ಜೂನ್ 2024, 14:09 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಅಪಾರ ಸಂಖ್ಯೆಯ ಭಕ್ತರು ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ಕಾಣಿಕೆಯನ್ನು ಅರ್ಪಿಸಿದರು.

ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಅಮಾವಾಸ್ಯೆ ಪೂಜೆಯನ್ನು ಬೇಡಗಂಪಣ ವಿಧಿವಿಧಾನಗಳೊಂದಿಗೆ ಸರದಿ ಅರ್ಚಕರು ಗುರುವಾರ ವಿಶೇಷ ಪೂಜಾ ಸಲ್ಲಿಸಿದರು. ಮುಂಜಾನೆಯಿಂದಲೇ ಮಾದೇಶ್ವರ ಸ್ವಾಮಿ ಮೂರ್ತಿಯನ್ನು ಅಲಂಕರಿಸಿ ಬೆಳಿಗ್ಗೆ 4ರ ತನಕ ಪೂಜೆ ಸಲ್ಲಿಸಿದರು. ಬಳಿಕ ಬಿಲ್ವಾರ್ಚನೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಮಹಾಮಂಗಳಾರತಿ ಬೆಳಗಿದರು. ನಂತರ ಗಂಧಾಭಿಷೇಕ ಇನ್ನಿತರ ಸೇವೆಗಳನ್ನು ನೆರವೇರಿಸಿದ ಬಳಿಕ ನೆರೆದಿದ್ದ ಭಕ್ತರಿಗೆ ಮಾದೇಶ್ವರಸ್ವಾಮಿಯ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಕರ್ನಾಟಕ ರಾಜ್ಯವಲ್ಲದೆ ತಮಿಳುನಾಡಿನಿಂದಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಮಾವಾಸ್ಯೆಯ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ದೇವಾಲಯ ಸುತ್ತ ಪ್ರದಕ್ಷಣೆ ಸೇರಿದಂತೆ ಪಂಜಿನ ಸೇವೆ, ಮುಡಿ ಸೇವೆ, ಉರುಳು ಸೇವೆ, ರುದ್ರಾಕ್ಷಿ ಮಂಟಪ, ಬಸವ ವಾಹನ, ಹುಲಿವಾಹನ ಉತ್ಸವ ಸೇವೆಗಳನ್ನು ನೆರವೇರಿಸಿ ಮಾದಪ್ಪನ ಕೃಪೆಗೆ ಪಾತ್ರರಾದರು. ಸುಗಮ ದೇವರ ದರ್ಶನಕ್ಕಾಗಿ ಉಚಿತ ಸರದಿ ಅಲ್ಲದೆ, ವಿಶೇಷ ₹200, ₹300, ₹500 ಶುಲ್ಕದ ಸರತಿ ಸಾಲುಗಳನ್ನು ತೆರೆಯಲಾಗಿತ್ತು. ನಿರಂತರ ಅನ್ನ ದಾಸೋಹ, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಪ್ರಾಧಿಕಾರದ ವತಿಯಿಂದ ಮಾಡಲಾಗಿತ್ತು.

ಚಿನ್ನದ ರಥೋತ್ಸವ: ಮಾದಪ್ಪನ ಸನ್ನಿಧಿಯಲ್ಲಿ ಪ್ರತಿ ನಿತ್ಯ ಸಂಜೆ 7 ಗಂಟೆಗೆ ನಡೆಯುವ ಚಿನ್ನದ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.  ಇಷ್ಟಾರ್ಥ ನೆರವೇರಲಿ ಎಂದು ಮಾದಪ್ಪನ ಚಿನ್ನದ ರಥ ಎಳೆದು ಕೃತಾರ್ಥರಾದರು. ಹಲವಾರು ಭಕ್ತರು ಬುಧವಾರ ಬೆಟ್ಟಕ್ಕೆ ಆಗಮಿಸಿ ರಾತ್ರಿ ಅಲ್ಲೇ ತಂಗಿದ್ದರು. ಮರುದಿನ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಭಕ್ತರು ವಿವಿಧ ಉತ್ಸವದಲ್ಲಿ ಪಾಲ್ಗೊಂಡು, ನಗ ನಾಣ್ಯ ಸೇರಿದಂತೆ ಇಷ್ಟಾರ್ಥ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT