ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ವಿದ್ಯಾರ್ಥಿಗಳಿಗೆ ಬೆಳಕಾದ ‘ಲ್ಯಾಂಪ್‌’!

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ವಿನೂತನ ಯೋಜನೆ ಜಾರಿಗೊಳಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ
Last Updated 1 ಮೇ 2019, 19:46 IST
ಅಕ್ಷರ ಗಾತ್ರ

ಚಾಮರಾಜನಗರ: ಕಳೆದ ವರ್ಷ ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ದಾಖಲಿಸಿ ರಾಜ್ಯದಲ್ಲಿ 24ನೇ ಸ್ಥಾನಗಳಿಸಿ ಕಳ‍ಪೆ ಸಾಧನೆ ಮಾಡಿದ್ದ ಜಿಲ್ಲೆ ಈ ಬಾರಿ ಒಂಬತ್ತು ಸ್ಥಾನ ಮೇಲೇರಿ 15ನೇ ಸ್ಥಾನ ಅಲಂಕರಿಸಿದೆ.

ಶೇಕಡವಾರು ಫಲಿತಾಂಶದಲ್ಲೂ ಗಮನಾರ್ಹದ ಪ್ರಗತಿ ಸಾಧಿಸಿದೆ. ಕಳೆದ ವರ್ಷ ಶೇ 74.46ರಷ್ಟಿದ್ದ ಫಲಿತಾಂಶ ಈ ಬಾರಿ ಶೇ 80.58ಕ್ಕೆ ಏರಿದೆ. ಒಂದು ವರ್ಷದಲ್ಲಿ ಇಷ್ಟೊಂದು ಬದಲಾವಣೆ ಸಾಧ್ಯವಾಗಿದ್ದಾದರೂ ಹೇಗೆ?

2018–19ರ ಶೈಕ್ಷಣಿಕ ವರ್ಷದ ಆರಂಭದಲ್ಲೇ ಉತ್ತಮ ಫಲಿತಾಂಶ ಸಾಧಿಸಬೇಕು ಎಂದು ಪಣತೊಟ್ಟಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ, ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಿತ್ತು. ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ, ಮಕ್ಕಳಿಗೆ ಹೆಚ್ಚುವರಿ ತರಗತಿ, ರಜೆಯ ಅವಧಿಯಲ್ಲೂ ಪಾಠ, ಪರೀಕ್ಷೆ ಬರೆಯುವ ಕೌಶಲ ಹೆಚ್ಚಿಸಲು ಮಾರ್ಗದರ್ಶನ, ಮೂರು ಪೂರ್ವ ಸಿದ್ಧತಾ ಪರೀಕ್ಷೆ... ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು.

ಬೆಳಕು ನೀಡಿದ ‘ಲ್ಯಾಂಪ್‌’: ಜಿಲ್ಲೆಯ ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಇದೆ ಎಂಬುದನ್ನು ಕಂಡುಕೊಂಡ ಶಿಕ್ಷಣ ಇಲಾಖೆ ಅವರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಹಾಗೂ ಮಕ್ಕಳ ಮನೆಯಲ್ಲಿ ಕಲಿಕಾ ವಾತಾವರಣವನ್ನು ಸೃಷ್ಟಿಸಿಲು ಈ ವರ್ಷ ‘ಲ್ಯಾಂಪ್‌’ (LAMP-ಲರ್ನಿಂಗ್‌ ಅಚೀವ್‌ಮೆಂಟ್ಸ್‌ ಅಂಡ್‌ ಮೋಟಿವೇಷನಲ್‌ ಪ್ರೋಗ್ರಾಮ್‌) ಎಂಬ ವಿಶಿಷ್ಟ ಯೋಜನೆಯನ್ನು ರೂಪಿಸಿತ್ತು. ಈ ವಿನೂತನ ಯೋಜನೆ ಜಿಲ್ಲೆಯಲ್ಲಿ ಫಲಕೊಟ್ಟಿದೆ ಎಂದು ಹೇಳುತ್ತಾರೆ ಇಲಾಖೆಯ ಉನ್ನತ ಅಧಿಕಾರಿಗಳು.

‘ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದು ನಮ್ಮ ಗಮನಕ್ಕೆ ಬಂತು. ನಿರ್ಭಯವಾಗಿ ಪರೀಕ್ಷೆ ಬರೆಯಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿತ್ತು. ಮಕ್ಕಳಲ್ಲಿ ಆತ್ಮ ಸ್ಥೈರ್ಯ ತುಂಬುವುದಕ್ಕೆ ಒತ್ತು ನೀಡುವುದಕ್ಕೆ ನಿರ್ಧರಿಸಿದೆವು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳ ಅವರು ‘ಪ್ರಜಾವಾಣಿ’ಗೆ ತಿಳಿದರು.

‘ಸೆಪ್ಟೆಂಬರ್‌ ತಿಂಗಳ ನಂತರ ‘ಲ್ಯಾಂಪ್‌’ ಎಂಬ ಯೋಜನೆಯ ಮೂಲಕ ಮಕ್ಕಳಲ್ಲಿ ಧೈರ್ಯ ತುಂಬಲು ಹಾಗೂ ಅವರ ಪೋಷಕರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ, ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಜಾಗೃತಿ ಮೂಡಿಸಲು ಯತ್ನಿಸಿದೆವು. ಇದರಿಂದಾಗಿ ಫಲಿತಾಂಶ ಸುಧಾರಣೆ ಕಂಡಿದೆ’ ಎಂದು ಅವರು ವಿವರಿಸಿದರು.

ಮನೆ ಮನೆಗೆ ಶಿಕ್ಷಕರು: ‘ಲ್ಯಾಂಪ್‌’ ಅಡಿಯಲ್ಲಿ ಸಂಜೆ ಹೊತ್ತು ಶಿಕ್ಷಕರು ಮಕ್ಕಳ ಮನೆ ಮನೆಗೆ ಭೇಟಿ ನೀಡಿದ್ದರು. ಸಂಜೆ ಹೊತ್ತು ಮನೆಯಲ್ಲಿ ಮಕ್ಕಳು ಏನು ಮಾಡುತ್ತಾರೆ? ಮನೆಯಲ್ಲಿ ಕಲಿಕಾವಾತಾವರಣ ಇದೆಯೇ ಎಂಬುದನ್ನು ಪರಿಶೀಲಿಸಿದ್ದರು. ಪೋಷಕರೊಂದಿಗೂ ಸಮಾಲೋಚನೆ ನಡೆಸಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಹೇಳಲಾಗಿತ್ತು. ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡುವಂತೆ ಅವರನ್ನು ಹುರಿದುಂಬಿಸಿದ್ದರು.

9 ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಾರಿಗೆ ತಂದ ಈ ಕಾರ್ಯಕ್ರಮದ ಆರಂಭದಲ್ಲಿಡಿಡಿಪಿಐ ಮಂಜುಳ ಅವರು ಸ್ವತಃ ವಿದ್ಯಾರ್ಥಿಗಳ ಮನೆ ಮನೆ ತೆರಳಿ ಪೋಷಕರೊಂದಿಗೆ ಸಮಾಲೋಚನೆ ನಡೆಸಿದ್ದರು.ಆ ನಂತರ ಜಿಲ್ಲೆಯ ಎಲ್ಲ ಶೈಕ್ಷಣಿಕ ವಲಯಗಳಲ್ಲಿ ಆಯಾ ಶಾಲಾ ಶಿಕ್ಷಕರು ಅದನ್ನು ಮುಂದುವರಿಸಿದ್ದರು.

ಪೂರ್ವ ಸಿದ್ಧತಾ ಪರೀಕ್ಷೆ: ವಾರ್ಷಿಕ ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ಮಕ್ಕಳಲ್ಲಿ ಪರೀಕ್ಷೆಯನ್ನು ಎದುರಿಸುವ ಕೌಶಲ ಬೆಳೆಸಲು ಇಲಾಖೆ ಒತ್ತು ನೀಡಿತ್ತು. ಇದರ ಭಾಗವಾಗಿ ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪ್ರತಿ ಪರೀಕ್ಷೆಯಲ್ಲಿ ಮಕ್ಕಳು ಪಡೆದ ಅಂಕಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಸ್ವಲ್ಪ ಹಿಂದುಳಿದ ಮಕ್ಕಳನ್ನು ಕೇಂದ್ರೀಕರಿಸಿ ಬೋಧನೆ ಮಾಡಲು ಗಮನ ನೀಡಲಾಯಿತು. ಇದು ಕೂಡ ಫಲಿತಾಂಶ ಸುಧಾರಣೆಗೆ ಕಾರಣವಾಯಿತು ಎಂದು ಹೇಳುತ್ತಾರೆ ಅಧಿಕಾರಿಗಳು.

ಸರ್ಕಾರಿ ಶಾಲೆಗಳ ಉತ್ತಮ ಸಾಧನೆ

ಜಿಲ್ಲೆಯಲ್ಲಿ ಈ ಬಾರಿ ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ಮಾಡಿವೆ. ಶೇ 100 ಫಲಿತಾಂಶ ದಾಖಲಿಸಿರುವ 25 ಪ್ರೌಢ ಶಾಲೆಗಳ ಪೈಕಿ 14 ಶಾಲೆಗಳು ಸರ್ಕಾರಿ ಶಾಲೆಗಳು.

ಸರ್ಕಾರಿ ಶಾಲೆಗಳಲ್ಲಿ ಶೇ 79.17ರಷ್ಟು ಫಲಿತಾಂಶ ದಾಖಲಾಗಿದೆ.ಅನುದಾನಿತ ಶಾಲೆಗಳಲ್ಲಿ ಶೇ 77.1 ಫಲಿತಾಂಶ ದಾಖಲಾಗಿದ್ದರೆ, ಖಾಸಗಿ ಶಾಲೆಗಳಲ್ಲಿ ಶೇ 89.14ರಷ್ಟು ಫಲಿತಾಂಶ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT