ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕೈದು ತಿಂಗಳಿಂದ ತುಕ್ಕು ಹಿಡಿಯುತ್ತಿವೆ ಸರ್ಕಾರಿ ವಾಹನಗಳು

ಇನ್ನೂ ಆಗಿಲ್ಲ ಹರಾಜು
Last Updated 6 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾಡಳಿತ ಭವನದ ಹೊಸ ಕೆಡಿಪಿ ಸಭಾಂಗಣ ಕಟ್ಟಡದ ಹಿಂಭಾಗದಲ್ಲಿ ವಿವಿಧ ಇಲಾಖೆಗಳಿಗೆ ಸೇರಿದ 16 ವಾಹನಗಳು ನಾಲ್ಕೈದು ತಿಂಗಳುಗಳಿಂದ ನಿಲ್ಲಿಸಲಾಗಿದ್ದು, ತುಕ್ಕು ಹಿಡಿಯಲು ಆರಂಭಿಸಿದೆ.

ಇವುಗಳಲ್ಲಿ ಬಹುತೇಕ ವಾಹನಗಳುಸುಸ್ಥಿತಿಯಲ್ಲಿರುವಂತೆ ಕಾಣಿಸುತ್ತಿವೆ. ಆದರೆ, ಅಧಿಕಾರಿಗಳು ಅವುಗಳನ್ನು ಬಳಸುತ್ತಿಲ್ಲ. ಜಿಲ್ಲಾಡಳಿತ ಅವುಗಳನ್ನು ಹರಾಜು ಹಾಕುವುದಕ್ಕೂ ಕ್ರಮ ಕೈಗೊಂಡಿಲ್ಲ.

ಮಹೀಂದ್ರಾ ಜೀಪ್, ಟಾಟಾ ಸುಮೊ, ಅಂಬಾಸಿಡರ್‌, ಫೋರ್ಸ್‌ ಟ್ರಾಕ್ಸ್‌ ಸೇರಿದಂತೆ ಪ್ರವಾಸೋದ್ಯಮ ಇಲಾಖೆ, ಪಂಚಾಯತ್‌ ರಾಜ್‌, ಶಿಕ್ಷಣ ಇಲಾಖೆಗಳಿಗೆ ಸೇರಿದ16 ವಾಹನಗಳು ಇಲ್ಲಿವೆ.

‘ನಾಲ್ಕು ತಿಂಗಳಿಂದ ಈ ವಾಹನಗಳು ಇಲ್ಲಿವೆ. ಹೊಸ ವಾಹನ ಬಂದ ತಕ್ಷಣ ಅಧಿಕಾರಿಗಳು ಹಳೆಯ ವಾಹನಗಳ ಬಗ್ಗೆ ಗಮನ ಹರಿಸುವುದಿಲ್ಲ. ಆರ್‌ಟಿಒ ಇಲಾಖೆ ಅಧಿಕಾರಿಗಳು ತಕ್ಷಣ ಇವುಗಳನ್ನು ಹರಾಜು ಹಾಕಲು ಕ್ರಮ ಕೈಗೊಳ್ಳಬೇಕು. ಸುಸ್ಥಿತಿಯಲ್ಲಿರುವಾಗಲೇ ಹರಾಜು ಹಾಕಿದರೆ ಜಿಲ್ಲಾಡಳಿತಕ್ಕೂ ಸ್ವಲ್ಪ ಆದಾಯ ಬರಬಹುದು’ ಎಂದು ಉಪನ್ಯಾಸಕ ಮಹೇಶ್ ಹೇಳಿದರು.

ಅಧಿಕಾರಿಗಳ ಉಪಯೋಗಕ್ಕಾಗಿ ಸರ್ಕಾರ ವಾಹನಗಳನ್ನು ಒದಗಿಸುತ್ತದೆ. ಕೆಲವು ವಾಹನಗಳನ್ನು ಓಡಾಟದ ಅವಧಿ ಮುಕ್ತಾಯವಾಗಿರುವುದರಿಂದ ನಿಲ್ಲಿಸಲಾಗುತ್ತದೆ. ಇನ್ನೂ ಕೆಲವು ವಾಹನಗಳು ಸಣ್ಣಪುಟ್ಟ ದುರಸ್ತಿಗಾಗಿ ನಿಲ್ಲಿಸಲಾಗುತ್ತದೆ. ಹೊಸ ವಾಹನಗಳನ್ನು ಬಯಸುವ ಅಧಿಕಾರಿಗಳು ಹಳೆಯ ವಾಹನಗಳನ್ನು ಮತ್ತೆ ರಿಪೇರಿ ಮಾಡಲು ಅಷ್ಟಾಗಿ ಗಮನ ಹರಿಸುವುದಿಲ್ಲ. ವಾಹನ ಹಳೆಯದಾಗುತ್ತಿದ್ದಂತೆ ಹಾಗೂ ದೋಷ ಕಂಡು ಬರುತ್ತಿದ್ದಂತೆಯೇ ಹೊಸ ವಾಹನಗಳಿಗೆ ಬೇಡಿಕೆ ಇಡುತ್ತಾರೆ ಎಂದು ಹೇಳುತ್ತವೆ ಜಿಲ್ಲಾಡಳಿತದ ಮೂಲಗಳು.

‘ಅಧಿಕಾರಿಗಳು ಹಳೆಯ ವಾಹನಗಳಲ್ಲಿ ಸಂಚರಿಸುವುದಕ್ಕೆ ಇಷ್ಟಪಡುವುದಿಲ್ಲ. ಹವಾನಿಯಂತ್ರಣ ವ್ಯವಸ್ಥೆ ಇರುವ ಬೊಲೆರೊ, ಇನೋವಾದಂತಹ ಕಾರುಗಳೇ ಬೇಕು. ಹಾಗಾಗಿ ಹಳೆಯ ವಾಹನಗಳು ದುರಸ್ತಿಯಾಗದಿದ್ದರೂ ಹರಾಜು ಆಗದಿದ್ದರೂ ಅವರಿಗೆ ಏನೂ ಅನಿಸುವುದಿಲ್ಲ’ ಎಂದು ನಗರ ನಿವಾಸಿ ನಿರಂಜನ್‌ ಹೇಳಿದರು.

ಹರಾಜು ಹಾಕಿ: ‘ವಾಹನಗಳು ಹಲವು ಸಮಯದಿಂದ ಇದ್ದಲ್ಲಿಯೇ ಇದ್ದರೆ, ದಿನ ಕಳೆದಂತೆ ಒಂದೊಂದೇ ಬಿಡಿ ಭಾಗಗಳು ಕಣ್ಮರೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ತಕ್ಷಣವೇ ಇವುಗಳನ್ನು ಹರಾಜು ಹಾಕಲು ಕ್ರಮ ಕೈಗೊಳ್ಳಬೇಕು’ ಎಂಬುದು ಜನರ ಒತ್ತಾಯ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು, ‘ಈಗಾಗಲೇ ಸಭೆ ನಡೆಸಿ ವಾಹನಗಳನ್ನು ಹರಾಜು ಹಾಕಲು ಅನುಮತಿ ನೀಡಲಾಗಿದೆ. ಆಯಾ ಇಲಾಖೆಗಳು ಹರಾಜು ಹಾಕಬೇಕು. ಇದನ್ನು ಪರಿಶೀಲಿಸಿ ಮತ್ತೊಮ್ಮೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲಾಗುವುದು’ ಎಂದರು.

ಜಿಲ್ಲಾಡಳಿತ ಭವನದಲ್ಲಿ ವಾಹನ ನಿಲುಗಡೆ ಸಮಸ್ಯೆ
ಸುಸಜ್ಜಿತವಾದ ಕಟ್ಟಡ ಹೊಂದಿರುವ ಜಿಲ್ಲಾಡಳಿತ ಭವನದಲ್ಲಿ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ದೊಟ್ಟ ಕೊರತೆ. ವಿವಿಧ ಇಲಾಖೆಗಳಿಗೆ ಕೆಲಸ ಮಾಡಿಸಿಕೊಳ್ಳಲು ಬರುವ ಜನರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಬೇಕಾಗದ ಪರಿಸ್ಥಿತಿ ಇದೆ.

ಜೋಡಿರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟಿನೊಳಕ್ಕೆ ಸ್ವಲ್ಪ ಮುಂದೆ ಸಾಗಿದರೆ, ರಂಗ ಮಂದಿರದ ಬಳಿ ವಾಹನ ನಿಲುಗಡೆಗೆ ಸ್ವಲ್ಪ ಸ್ಥಳ ಇದೆ. ಆದರೆ, ಅಲ್ಲಿಂದ ಜಿಲ್ಲಾಡಳಿತ ಭವನಕ್ಕೆ ತುಂಬಾ ದೂರ ಇದೆ. ಹಾಗಾಗಿ ಜನರು ಹೆಚ್ಚು ನಡೆಯಬೇಕು.

ಹಾಗಾಗಿ, ವಾಹನಗಳ ಸವಾರರು ಜಿಲ್ಲಾಡಳಿತ ಆವರಣದಲ್ಲಿರುವ ರಸ್ತೆಗಳ ಬದಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ.

ಆಟೊ ಪ್ರವೇಶ ಇರಲಿ: ಜಿಲ್ಲಾಡಳಿತ ಭವನದ ಗೇಟಿನಿಂದ ಒಳಕ್ಕೆ ಆಟೊಗಳ ಪ್ರವೇಶಕ್ಕೆ ನಿರ್ಬಂಧವಿದೆ. ಇದನ್ನು ತೆರವುಗೊಳಿಸಬೇಕು ಎಂಬುದು ಜನರ ಒತ್ತಾಯ.

‘ಅನುಕೂಲಸ್ಥರು ಜಿಲ್ಲಾಡಳಿತ ಭವನದವರೆಗೂ ಕಾರುಗಳಲ್ಲಿ ಬರುತ್ತಾರೆ. ಆದರೆ, ಆಟೊದಲ್ಲಿ ಬರುವ ಜನರು ಗೇಟ್‌ ಬಳಿ ಇಳಿದು ನಡೆದುಕೊಂಡು ಹೋಗಬೇಕು. ನಡೆಯಲು ಆಗದವರು, ಹುಷಾರಿಲ್ಲದವರು, ವೃದ್ಧರು ಕೂಡ ನಡೆದುಕೊಂಡೇ ಬರಬೇಕಾದ ಪರಿಸ್ಥಿತಿ ಇದೆ. ಕನಿಷ್ಠ ಪ‍ಕ್ಷ ಅಂಥವರಾದರೂ ಆಟೊಗಳಲ್ಲಿ ಬರುವುದಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT