ಮಂಗಳವಾರ, ಫೆಬ್ರವರಿ 25, 2020
19 °C
ಮಹದೇಶ್ವರ ಬೆಟ್ಟ: ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಮತ್ತೆ ಚಾಲನೆ

ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಸನ್ನಿಹಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ, ಮಹದೇಶ್ವರ ಬೆಟ್ಟದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸುವ ಯೋಜನೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ. 

ಯೋಜನೆ ಅನುಷ್ಠಾನಕ್ಕೆ ಅಗತ್ಯವಾಗಿದ್ದ ಎರಡು ಎಕರೆ ಜಮೀನನ್ನು ಖಾಸಗಿಯವರಿಂದ ಖರೀದಿಸಲು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕೊನೆಗೂ ಯಶಸ್ವಿಯಾಗಿದ್ದು, ಪ್ರಾಧಿಕಾರದ ಅಧಿಕಾರಿಗಳು ಗುರುವಾರ ಜಮೀನಿನ ಮಾಲೀಕರಾದ ಪಳನಿಸ್ವಾಮಿ, ಧನುಕೋಟಿ ಹಾಗೂ ಮಕ್ಕಳಿಗೆ ₹11 ಲಕ್ಷ (ಎಕರೆಗೆ ₹5.5 ಲಕ್ಷದಂತೆ) ಪಾವತಿಸಿದ್ದಾರೆ. ಈ ಮೂಲಕ ಯೋಜನೆಗಿದ್ದ ಬಹುದೊಡ್ಡ ಅಡೆತಡೆ ನಿವಾರಣೆಯಾದಂತಾಗಿದೆ. 

₹27 ಕೋಟಿ ಯೋಜನೆ: ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಮಹದೇಶ್ವರ ಬೆಟ್ಟದಲ್ಲಿ ಒಳಚರಂಡಿ ವ್ಯವಸ್ಥೆಗಾಗಿ ₹27.1 ಕೋಟಿ ಮೊತ್ತದ ಯೋಜನೆಯನ್ನು ರೂಪಿಸಲಾಗಿತ್ತು. ಅದರಂತೆ ಎಲ್ಲ ಕಡೆ ಒಳಚರಂಡಿ ಪೈಪ್‌ಲೈನ್‌, ಚೇಂಬರ್‌ಗಳ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿದೆ. ಜಮೀನಿನ ಕಾರಣಕ್ಕೆ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ನಡೆದಿರಲಿಲ್ಲ. 

ಘಟಕ ನಿರ್ಮಾಣವಾಗದೇ ಇದ್ದುದರಿಂದ ಬೆಟ್ಟ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿದ್ದ ಕೊಳಚೆ ನೀರು ಅಂತರಗಂಗೆ ಸೇರಿ ನೀರು ಕಲುಷಿತಗೊಂಡಿತ್ತು. ತೆಪ್ಪೋತ್ಸವ ನಡೆಯುವ ಕೆರೆಗೂ ಸೇರುತ್ತಿತ್ತು. ಈ ಬಗ್ಗೆ ಭಕ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ವಸತಿಗೃಹಗಳ ತ್ಯಾಜ್ಯ ನೀರು ಕೂಡ ಸರಾಗವಾಗಿ ಹರಿದುಹೋಗಲು ಅಡಚಣೆಯಾಗಿತ್ತು.

ಘಟಕ ನಿರ್ಮಾಣಕ್ಕೆ ಅಂತರಗಂಗೆಯಿಂದ ಮುಂದೆ, ಬಲಭಾಗದಲ್ಲಿ ರಸ್ತೆಗೆ ಹೊಂದಿಕೊಂಡಿರುವ 2 ಎಕರೆ ಜಮೀನು ಗುರುತಿಸಲಾಗಿತ್ತು. ಸತತ ಪ್ರಯತ್ನದ ಬಳಿಕ ಜಮೀನು ಮಾಲೀಕರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆ ಪ್ರದೇಶದಲ್ಲಿ ಎಕರೆ ಜಮೀನಿನ ಮಾರುಕಟ್ಟೆ ಮೌಲ್ಯ ₹1.2 ಲಕ್ಷ ಇದ್ದರೂ, ಮಾಲೀಕರಿಗೆ ಎಕರೆಗೆ ₹5.5 ಲಕ್ಷ ನೀಡಲಾಗಿದೆ.  

‘ಬುಧವಾರದಿಂದಲೇ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಘಟಕ ಪೂರ್ಣಗೊಂಡ ನಂತರ ಬೆಟ್ಟದಲ್ಲಿ ಒಳಚರಂಡಿಯ ಸಮಸ್ಯೆ ಬಗೆಹರಿಯಲಿದೆ’ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು