ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ವನ್ಯಧಾಮ: ಜಿಂಕೆಗಳಿಗೆ ಬೀದಿನಾಯಿಗಳು ಕಂಟಕ

ನೀರು, ಆಹಾರ ಅರಸಿಕೊಂಡು ನಾಡಿನತ್ತ ಬರುತ್ತಿವೆ ವನ್ಯಪ್ರಾಣಿಗಳು
Last Updated 23 ಮಾರ್ಚ್ 2021, 4:19 IST
ಅಕ್ಷರ ಗಾತ್ರ

ಹನೂರು: ಸುಡು ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಅರಣ್ಯದಲ್ಲಿ ನೀರಿನ ಕೊರತೆಯಿಂದಾಗಿ ವನ್ಯಜೀವಿಗಳು ಅದರಲ್ಲೂ ಜಿಂಕೆಗಳು ನೀರು ಆಹಾರ ಅರಸಿ ನಾಡಿಗೆ ಬರಲು ಆರಂಭಿಸಿದ್ದು, ಬೀದಿನಾಯಿಗಳು ಅವುಗಳ ಮೇಲೆ ದಾಳಿ ನಡೆಸಿ ಕೊಲ್ಲುತ್ತಿವೆ.

ಮಲೆಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯದಲ್ಲಿ ವಾರದ ಅವಧಿಯಲ್ಲಿ, ಬೀದಿ ನಾಯಿಗಳ ದಾಳಿಗೆ ಸಿಲುಕಿ ಮೂರು ಜಿಂಕೆಗಳು ಮೃತಪಟ್ಟಿವೆ. ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲೂ ಇಂತಹ ಪ್ರಕರಣಗಳು ನಡೆದಿವೆ.

ಬೇಸಿಗೆಯಲ್ಲಿ ಅರಣ್ಯದ ಒಳಗಿನ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಹಗಲು ಹಾಗೂ ರಾತ್ರಿ ಸಮಯದಲ್ಲಿ ವನ್ಯಜೀವಿಗಳು ಕೃಷಿ ಜಮೀನು, ಜನವಸತಿ ಪ್ರದೇಶಗಳತ್ತ ಬರುವುದು ಸಾಮಾನ್ಯ.ರಾತ್ರಿ ವೇಳೆ ಬಂದ ಜಿಂಕೆಗಳು ಮರಳಿ ಕಾಡಿನೊಳಗೆ ಹೋಗಲು ದಾರಿ ತಿಳಿಯದೇ ಗ್ರಾಮಗಳಿಗೆ ನುಗ್ಗುತ್ತವೆ. ಕೆಲವು ಮನಷ್ಯರನ್ನು ನೋಡಿ ಗಾಬರಿಗೊಂಡು ಸತ್ತರೆ, ಮತ್ತೆ ಕೆಲವನ್ನು ಬೀದಿನಾಯಿಗಳ ಹಿಂಡು ದಾಳಿ ಮಾಡಿ ಸಾಯಿಸಿದ ಪ್ರಕರಣಗಳು ನಡೆದಿವೆ. ಹನೂರು ಬಫರ್ ವಲಯದ ಬೇಲದಕೆರೆ ಬಳಿ ಸಂಭವಿಸಿದ ಎರಡು ಜಿಂಕೆ ಸಾವು ಹಾಗೂ ಕಣ್ಣೂರು ಗ್ರಾಮದಲ್ಲಿ ಬೀದಿನಾಯಿಗಳ ದಾಳಿಗೆ ತುತ್ತಾಗಿ ಜಿಂಕೆ ಮೃತಪಟ್ಟಿರುವುದು ಇದಕ್ಕೆ ಉತ್ತಮ ನಿದರ್ಶನ.

ಗಾಯಗೊಂಡ ಜಿಂಕೆಗಳ ರಕ್ಷಣೆ: ಪಿ.ಜಿ.ಪಾಳ್ಯ ವನ್ಯಜೀವಿ ವಲಯದ ಹುತ್ತೂರು ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಜಿಂಕೆಯನ್ನು ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಟ್ಟಿದ್ದರು. ರಾಮಾಪುರ ವನ್ಯಜೀವಿ ವಲಯದ ವಡಕೆಹಳ್ಳ ಗ್ರಾಮದಲ್ಲಿ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದರು.

ಇತ್ತೀಚಿನ ಪ್ರಕರಣಗಳು: ಮಾರ್ಟಳ್ಳಿ ಭಾಗದಲ್ಲಿ ಬೀದಿನಾಯಿಗಳ ದಾಳಿಗೆ ತುತ್ತಾಗಿ ನಾಲ್ಕೈದು ಜಿಂಕೆಗಳು ಮೃತಪಟ್ಟಿವೆ. ಕೌದಳ್ಳಿ ಡಿ ಲೈನ್ ನಲ್ಲೂ ಬೀದಿನಾಯಿಗಳ ದಾಳಿಗೆ ತುತ್ತಾಗಿ ಮೃತಪಟ್ಟಿರುವ ಪ್ರಕರಣಗಳು ಒಂದೆರೆಡು ನಡೆದಿವೆ. ಮಿಣ್ಯಂ, ದಿನ್ನಳ್ಳಿ, ನಲ್ಲೂರು ಗ್ರಾಮಗಳಲ್ಲೂ ಮೇಲಿಂದ ಮೇಲೆ ಜಿಂಕೆಗಳು ಬೀದಿನಾಯಿಗಳ ದಾಳಿಗೆ ತುತ್ತಾಗುತ್ತಲೇ ಇವೆ.

‘ಬೇಸಿಗೆಯಾಗಿರುವುದರಿಂದ ವನ್ಯಪ್ರಾಣಿಗಳು ನೀರು, ಆಹಾರ ಅರಸಿ ನಾಡಿಗೆ ಬರುವುದು ಸಾಮಾನ್ಯ. ಹೀಗೆ ಅರಣ್ಯದಂಚಿನ ಗ್ರಾಮಗಳಿಗೆ ವನ್ಯಪ್ರಾಣಿಗಳು ಬಂದರೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಮೂಲಕ ವನ್ಯಜೀವಿ ಸಂರಕ್ಷಣೆಗೆ ಸ್ಥಳೀಯರು ಸಹಕರಿಸಬೇಕು’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನೀರಿಗಾಗಿ ಕೆರೆಗಳ ನಿರ್ಮಾಣ

ಬೇಸಿಗೆಯಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಕೆರೆಗಳನ್ನು ನಿರ್ಮಿಸುತ್ತಿದೆ.

ರಾಮಾಪುರ ವನ್ಯಜೀವಿ ವಲಯದ ಪೆರಿಯನಾಯಗಂ ಬಳಿ ಹಾಗೂ ಸಂತೇಕಾಣೆ ನರ್ಸರಿ ಬಳಿ ಕೆರೆಗಳನ್ನು ನಿರ್ಮಿಸಲಾಗಿದೆ.

‘ವನ್ಯಧಾಮದಲ್ಲಿ ಈ ವರ್ಷ 30 ಕೆರೆಗಳ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಅನುದಾನದ ಕೊರತೆಯಿಂದಾಗಿ 10 ಕೆರೆಗಳನ್ನು ನಿರ್ಮಿಸಲಾಗಿದೆ. ಕೊಳವೆ ಬಾವಿಗಳಿಂದ ನೀರು ತುಂಬಿಸಲಾಗುತ್ತಿದೆ. ಮುಂದಿನ ವರ್ಷದಲ್ಲಿ ಉಳಿದ 20 ಕೆರೆಗಳನ್ನು ನಿರ್ಮಿಸಲಾಗುವುದು’ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಬೇಟೆಗಾಗಿ ನಾಯಿಗಳಿಗೆ ತರಬೇತಿ?

ಬೀದಿನಾಯಿಗಳಿಂದ ದಾಳಿಗೆ ಒಳಗಾಗಿ ಜಿಂಕೆಗಳು ಸಾವಿಗೀಡಾಗುತ್ತಿರುವುದು ಒಂದೆಡೆಯಾದರೆ, ಜಿಂಕೆಗಳನ್ನು ಬೇಟೆಯಾಡುವುದಕ್ಕಾಗಿಯೇ ತರಬೇತಿ ನೀಡಿ ಕಾಡಿಗೆ ಬಿಡುತ್ತಿರುವ ಬಗ್ಗೆಯೂ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಅವರು ತನಿಖೆಯನ್ನೂ ಆರಂಭಿಸಿದ್ದಾರೆ.

‘ಸೌದೆ ತರಲು, ದನಕರುಗಳನ್ನು ಮೇಯಿಸಲು ಕಾಡಿಗೆ ಹೋಗುವ ಕೆಲವು ಕಿಡಿಗೇಡಿಗಳು ತರಬೇತಿ ನೀಡಿದ ನಾಯಿಗಳನ್ನು ಕರೆದುಕೊಂಡು ಹೋಗಿ ಅವುಗಳ ಮೂಲಕ ಬೇಟೆಯಾಡುತ್ತಿರುವ ಬಗ್ಗೆಯೂ ಮಾಹಿತಿ ಬಂದಿದೆ. ಈ ಬಗ್ಗೆ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿ ಅಂಥವರನ್ನು ಅರಣ್ಯದೊಳಗೆ ಬಿಡದಂತೆ ಸೂಚನೆ ನೀಡಲಾಗಿದೆ’ ಎಂದು ವಿ.ಏಡುಕುಂಡಲು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT